ಪುತ್ತೂರು: ಅದೇಗೊ ಬಹಳ ಪ್ರಯಾಸಪಟ್ಟು ಐತಿಹಾಸಿಕ ಪ್ರಾಧಾನ್ಯತೆಯ ಗಾಂಧಿ ಕಟ್ಟೆ ಉತ್ತಮವಾಗಿ ಮೂಡಿಬಂತು. ಆದರೆ ಗಾಂಧಿಕಟ್ಟೆಯ ಬಳಿಯಲ್ಲೇ ಇರುವ ರಸ್ತೆ ಜಪ್ಪಯ್ಯ ಅಂದರೂ ಸರಿಯಾಗಲು ಕೇಳುತ್ತಿಲ್ಲ.
ಇದು ಒಂದೆರಡು ದಿನದ ಕಥೆಯಲ್ಲ. ಕಳೆದ ಹಲವು ದಿನಗಳಿಂದ ವಾಹನ ಸವಾರರು, ಇದೇ ಹೊಂಡ – ಗುಂಡಿಯ ರಸ್ತೆಯಲ್ಲಿ ಸರ್ಕಸ್ ಮಾಡುತ್ತಾ ಸಾಗುತ್ತಿದ್ದಾರೆ. ಆದರೂ ಯಾರೊಬ್ಬರೂ ಈ ರಸ್ತೆ ದುಸ್ಥಿತಿಯ ಬಗ್ಗೆ ಚಕಾರ ಎತ್ತುವಂತೆ ಕಾಣಿಸುತ್ತಿಲ್ಲ.
ಪುತ್ತೂರು ಪೇಟೆಯ ಸಂಚಾರ ದಟ್ಟಣೆಗೆ ಇದು ಒಂದು ಕಾರಣ. ವಾಹನಗಳು ಹೊಂಡ ಗುಂಡಿಯನ್ನು ತಪ್ಪಿಸಲು ಸರ್ಕಸ್ ಮಾಡುವ ಅನಿವಾರ್ಯತೆ ಎದುರಾಗಿದೆ. ಇದರಿಂದ ಇಲ್ಲಿ ದಿನವಿಡೀ ವಾಹನ ದಟ್ಟಣೆಯ ತೊಡಕು.
ಒಟ್ಟಿನಲ್ಲಿ ಈ ದುಸ್ಥಿತಿಗೆ ಯಾರನ್ನು ಹಳಿಯಬೇಕು ಎಂದು ಗಾಂಧಿ ತಾತ ಯೋಚನಾಮಗ್ನರಾದಂತಿದೆ! ರಸ್ತೆ ಹಾಳಾದದ್ದು ಒಂದೆಡೆಯಾದರೆ, ಈ ರಸ್ತೆಗೆ ತೇಪೆ ಹಾಕಿದ ಕಾರ್ಯ ಇನ್ನೊಂದು ರಾದ್ಧಾಂತಕ್ಕೆ ಕಾರಣವಾಗಿದೆ.
ಹೊಂಡ ಮುಚ್ಚಲು ಹಾಕಿದ ತೇಪೆ, ಒಂದೆರಡು ದಿನದಲ್ಲಿ ಎದ್ದು ಹೋಗಿದೆ. ಮತ್ತದೇ ದುಸ್ಥಿತಿ ವಾಹನ ಸವಾರರಿಗೆ. ಮಾತ್ರವಲ್ಲ, ಈ ತೇಪೆ ಕಾರ್ಯ, ಈ ಕಡೆ ಅರುಣಾ ಥಿಯೇಟರ್’ವರೆಗೆ – ಇನ್ನೊಂದು ಬದಿ ಚರ್ಚ್ ಮುಂಭಾಗದವರೆಗೆ ವಾಹನಗಳ ಜೊತೆಗೆ ಸಾಗಿದೆ. ಇಡೀಯ ರಸ್ತೆ ಕೆಸರಿನಿಂದ ಕೂಡಿದ್ದು, ಸವಾರರು ಪರದಾಡುವಂತಾಯಿತು. ಮಳೆಯಿಂದಾಗಿ ಕೆಸರು ಸ್ವಲ್ಪ ಕಡಿಮೆಯಾದದ್ದರ ಜೊತೆಗೆ, ಹೊಂಡದ ತೇಪೆಯನ್ನು ಎದ್ದು ಹೋಗುವಂತೆ ಮಾಡಿದೆ. ಭ್ರಷ್ಟಾಚಾರವನ್ನು ವಿರೋಧಿಸಿದ್ದ ಗಾಂಧಿ ತಾತ ಮಾತ್ರ ಮೌನಕ್ಕೆ ಶರಣಾಗಿದ್ದಾರೆ.