ಕೋಲಾರ: ಯಾರೋ ಒಬ್ಬ ದೊಡ್ಡ ಸಾಧಕರಿಗೆ ಸನ್ಮಾನ ಮಾಡುವಾಗಲೂ ನಾವು ಚಪ್ಪಲಿ ಕಳಚಿಟ್ಟು ನಿಲ್ಲುವುದಿಲ್ಲ. ಆದರೆ, ಕೋಲಾರದ ಎಸ್ಪಿ ನಾರಾಯಣ ಅವರು 11 ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶ್ವಾನ ಲೈಕಾ ಬೀಳ್ಕೊಡುಗೆ ಸಂದರ್ಭದಲ್ಲಿ ಶೂ ಕಳಚಿಟ್ಟು ಆ ನಾಯಿಗೆ ಹೂವಿನ ಹಾರ ಹಾಕಿ, ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಿದರು.
ನಾಯಿಯ ಬಗೆಗಿನ ಪೊಲೀಸರ ಪ್ರೀತಿ ಜಗತ್ತಿಗೆ ಅರ್ಥವಾಯಿತು.
ಕೋಲಾರದ ಡಿ.ಎ.ಆರ್. ಘಟಕದ ಅಪರಾಧ ದಳ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಲೈಕಾ ಎಂಬ ಹೆಸರಿನ ಶ್ವಾನ ಕೊಲೆಗಾರರಿಗೆ, ದರೋಡೆಕೋರರಿಗೆ ನಿಜಕ್ಕೂ ಸಿಂಹಸ್ವಪ್ನವಾಗಿತ್ತು. 11 ವರ್ಷಗಳಿಂದ ಜಿಲ್ಲಾದ್ಯಂತ ಸುಮಾರು 300 ಕ್ಕೂ ಹೆಚ್ಚು ಕೊಲೆ, ದರೋಡೆ, ಕಳ್ಳತನ ಪ್ರಕರಣಗಳ ತನಿಖೆಯಲ್ಲಿ ಸಹಕರಿಸಿ 35 ಕ್ಕೂ ಹೆಚ್ಚು ಪ್ರಕರಣಗಳನ್ನು ಭೇದಿಸುವಲ್ಲಿ ಸಫಲವಾಗಿತ್ತು.
ಇಂಥ ನಾಯಿಯನ್ನು ಶ್ವಾನದಳ ಸಿಬ್ಬಂದಿ ಸಮ್ಮುಖದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲೇ ಸನ್ಮಾನ ಮಾಡಿದ್ದು ವಿಶೇಷ.ಸೆಪ್ಟೆಂಬರ್ 14ರಂದು ಸೇವೆಯಿಂದ ವಯೋ ನಿವೃತ್ತಿ ಪಡೆದಿದೆ ಲೈಕಾ. ಕಾರ್ಯಕ್ರಮದಲ್ಲಿ ನಾಯಿಗೆ ಹಾರ, ಶಾಲು ಹಾಕಿ ಸನ್ಮಾನಿಸಲಾಗಿದೆ. ಈ ಹೊತ್ತಿನಲ್ಲಿ ಸ್ವತಃ ಎಸ್ಪಿ ನಾರಾಯಣ ಅವರು ನಾಯಿಯ ಗುಣಗಾನ ಮಾಡಿದರು. ಜತೆಗೆ ಉಳಿದ ಸಿಬ್ಬಂದಿ ಕೂಡ ಅದರ ಸಾಹಸಗಳನ್ನು ನೆನಪು ಮಾಡಿಕೊಂಡರು.
ಇದೆಲ್ಲವನ್ನೂ ಪ್ರೀತಿಯಿಂದಲೇ ಸ್ವೀಕರಿಸಿದ ನಾಯಿ ಕೂಡ ಕೃತಜ್ಞತಾ ಭಾವದಿಂದ ಕುಳಿತಿತ್ತು. ನಾಯಿಗೆ ಇದೆಲ್ಲ ಅರ್ಥವಾಯಿತೋ ಗೊತ್ತಿಲ್ಲ. ಆದರೆ, ಮೂಕ ಪ್ರಾಣಿಯೊಂದರ ಸಾಧನೆಯನ್ನು ಇಷ್ಟು ಪ್ರೀತಿಯಿಂದ ಗೌರವಿಸುವ ಮೂಲಕ ಕೋಲಾರ ಪೊಲೀಸ್ ಇಲಾಖೆ ಮಾತ್ರ ತನ್ನ ಗೌರವವನ್ನು ಹೆಚ್ಚಿಸಿಕೊಂಡಿತು. ಅದರಲ್ಲೂ ಎಸ್ಪಿ ನಾರಾಯಣ ಅವರ ಶೂ ಬಿಚ್ಚಿ ನಿಂತ ಚಿತ್ರ ಕದಲದೆ ನಿಂತಿತು. ಈ ಅಭಿಮಾನ, ಗೌರವ ಸಾರ್ವಜನಿಕರಲ್ಲಿ ಎಸ್ಪಿ ಹಾಗೂ ಪೊಲೀಸ್ ಇಲಾಖೆ ಮೇಲಿನ ಗೌರವ ಭಾವ ಹೆಚ್ಚಿಸಿದೆ.