ಬರಿದಾಗಿದೆ ಐತಿಹಾಸಿಕ ಕೆದ್ದೊಟ್ಟೆ ಕೆರೆ

ಮಹಾ  ಭಾರತದ ಕುಂತಿ ನಡೆದಾಡಿದ ಮಹಾ ಸರೋವರ  ಮೀನು, ಹಕ್ಕಿ, ಕೃಷಿ ಬದುಕಿನ ಮೂಲಾಧಾರವಾಗಿರುವ ಕಡಬ ತಾಲೂಕಿನ ಕುಂತೂರು ಗ್ರಾಮದ  ಕೆದ್ದೊಟ್ಟೆ ಕೆರೆ ಈ ಬಾರಿಯ ಬೇಸಿಗೆಯ ಝಳಕ್ಕೆ ಬರಿದಾಗಿದೆ.  

  ಈ ಭಾಗದ ರೈತರ ಕೃಷಿ ಬದುಕಿನ ನೀರು ಯಾವ ಬರಗಾಲದಲ್ಲೂ ಇಲ್ಲಿ ನೀರು ಆರಿಲ್ಲ. ಹತ್ತಕ್ಕೂ ಹೆಚ್ಚು ಪಂಪ್‌ಸೆಟ್‌ಗಳು ನೀರೆತ್ತಿದರೂ ಕೆರೆ ಬತ್ತುತ್ತಿರಲಿಲ್ಲ. ಹತ್ತು ವರ್ಷಗಳ ಹಿಂದೆ ಈ ಪರಿಯ ಸನ್ನಿವೇಶ ನಿರ್ಮಾಣವಾಗಿದ್ದರೂ ಕೆರೆ ಬರಿದಾದ ಉದಾಹರಣೆಗಳು ಇಲ್ಲ ಆದರೆ ಈ ಬಾರಿ ಮಾತ್ರ ಕೆರೆ ಬರಿದಾಗಿದ್ದು, ಕೆರೆಯ ಮಧ್ಯೆ ಹೂಳು ತುಂಬಿದ ಕೆಸರು ನೀರು ಸ್ವಸಲ್ಪ ಮಟ್ಟಿಗೆ ಕಾಣಿಸಿಕೊಳ್ಳುತ್ತಿದೆ. ಇನ್ನು ಒಂದು ವಾರ ಮಳೆ ದೂರವಾದರೆ ಕೆರೆ ಸಂಪೂರ್ಣ ಒಣಗಿ ಹೋಗಲಿದೆ..

ಈ ಕೆರೆ ಇಲ್ಲಿನ ರೈತರ ಪಾಲಿಗೆ ನೀರಿನ ವರದಾನವಾಗಿದೆ. ಸುಮಾರು ಹತ್ತಕ್ಕೂ ಹೆಚ್ಚು ಪಂಪುಗಳಲ್ಲಿ ಮೊನ್ನೆ ಮೊನ್ನೆಯ ತನಕ ನೀರು ಎತ್ತಿ ಅಡಕೆ ತೋಟಗಳಿಗೆ ಹಾಯಿಸಲಾಗುತ್ತಿತ್ತು. ಆದರೆ ಈಗ ಕೆರೆಯಲ್ಲಿ ನೀರು ಬರಿದಾಗಿರುವುದರಿಂದ ಅದು ಯಾವು ಪಂಪುಗಳಿಗೂ ನೀರು ಸಿಗುತ್ತಿಲ್ಲ. ಈ ಕೆರೆಯನ್ನೇ ಆಶ್ರಯಿಸಿದ್ದ ಕೃಷಿಕರು ಈಗ ನೀರಿಲ್ಲದೆ ಕಂಗಾಲಾಗಿದ್ದಾರೆ. ನೀರಿನ ಮೂಲಬರಿದಾಗುತ್ತಿದ್ದಂತೆ ಕೆರೆಯ ನೀರನ್ನು ಬಳಸುತ್ತಿದ್ದ ಹತ್ತಕ್ಕೂ ಹೆಚ್ಚು ರೈತರು ಪ್ರತಿಯೊಬ್ಬರೂ ಕೊಳವೆ ಬಾವಿ ಕೊರೆಸಿದರೂ ಅದು ಸಫಲವಾಗಲಿಲ್ಲ. ಒಂದರೆಡು ಕೊಳವೆಬಾವಿಗಳಲ್ಲಿ ಸಾಕಷ್ಟು ನೀರು ಬರುತ್ತಿದ್ದರೆ ಇನ್ನುಳಿದವುಗಳೆಲ್ಲಾ ವಿಫಲವಾಗಿವೆ.  ಹಾಗಾಗಿ 25 ಎಕ್ರೆಗೂ  ಹೆಚ್ಚು ಅಡಕೆ ತೋಟಗಳು ನೀರಿಲ್ಲದೆ ಸೊರಗಿವೆ. 



































 
 

ಕಳೆದ ವರ್ಷ ಜನವರಿಯಿಂದಲೇ ಆಗಾಗ ಮಳೆಯಾಗುತ್ತಿದುದ್ದರಿಂದ ಕೆರೆಯಲ್ಲಿ ಭರಪೂರ ನೀರು ಸಿಗುತ್ತಿತ್ತು. ಆದರೆ ಈ ಬಾರಿ ಮಳೆ ವಿರಳವಾಗಿ ಬರಗಾಲ ಉಂಟಾಗಿ ಕೆರೆ ಬರಿದಾಗಿದೆ. ಕೆರೆಯನ್ನು ಹೂಳೆತ್ತದೆ ಇರುವುದೂ ಕೂಡಾ ಹೂಳು ತುಂಬಿ ಕೆರೆ ನೀರು ಇಲ್ಲದಂತಾಗಿದೆ ಎನ್ನುವುದು ಸ್ಥಳೀಯರ ಅಭಿಮತ. 

ಐತಿಹಾಸಿಕ ಹಿನ್ನೆಲೆ:

ಮಹಾಭಾರತದ  ಪಾಂಡವರ ತಾಯಿ ಕುಂತಿ ಈ ಊರಿನಲ್ಲಿ ನಡೆದಾಡಿರುವುದರಿಂದ ಇಲ್ಲಿಗೆ ಕುಂತೂರು ಎನ್ನುವ ಹೆಸರು ಬಂದಿದೆ ಎನ್ನುವುದು ನಂಬಿಕೆ. ಪಾಂಡವರು ವನವಾಸ ನಡೆಸಿದ ಸಂದರ್ಭ ಇಲ್ಲಿಗೆ ಆಗಮಿಸಿದ್ದರು ಎನ್ನುವ ಪ್ರತೀತಿ ಇದೆ. ಧರ್ಮರಾಯನಿಗೆ ಯಮ ಧರ್ಮರಾಯ ಯಕ್ಷ ಪ್ರಶ್ನೆ ಕೇಳಿದ ಜಾಗ ಇದು ಎಂದೂ ಹೇಳಲಾಗುತ್ತಿದೆ. ಕೆದ್ದೊಟ್ಟೆ ಕೆರೆಯನ್ನು ಭೀಮಸೇನ ನಿರ್ಮಿಸಿದ್ದನಂತೆ. ಕೆರೆಯ ದಕ್ಷಿಣ ಭಾಗದಲ್ಲಿ ಎತ್ತರವಾದ ಗುಡ್ಡವಿದೆ. ಭೀಮ ಕೆರೆ ನಿರ್ಮಾಣ ಮಾಡುವಾಗ ಮಣ್ಣು ತೆಗೆದು ರಾಶಿ ಹಾಕಿರುವುದರಿಂದ ಈ ಗುಡ್ಡ ನಿರ್ಮಾಣವಾಗಿದೆ. ಭೀಮ ನಿರ್ಮಾಣ ಮಾಡಿದ್ದರಿಂದ ಇದನ್ನು ಮಾಲ್ತಿಗುಡ್ಡೆ (ಮಾಡಿದ ಗುಡ್ಡೆ) ಎಂದು ಹೇಳಲಾಗುತ್ತದೆ. ಇದರ ಪಕ್ಕದಲ್ಲೇ ನಿಶಾನಿ ಗುಡ್ಡೆ ಎನ್ನುವ ಗುಡ್ಡವಿದ್ದು, ಇಂದಿಗೂ  ಈ ಗುಡ್ಡದಿಂದ ಮಾಲ್ತಿಗುಡ್ಡೆಗೆ ನವಿಲುಗಳು ಹಾರಿ ನರ್ತನ ಮಾಡುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಪಕ್ಕದಲ್ಲೇ ಕುಮಾರಧಾರ ನದಿ ಹರಿಯುತ್ತಿದ್ದು ಇಲ್ಲಿನ ಉರುಂಬಿ ಎಂಬಲ್ಲಿ ದ್ರೌಪದಿ ಬಟ್ಟೆ ಒಗೆದ ವಿಶಾಲವಾದ ಕಲ್ಲು, ಬಟ್ಟೆ ಒಣಗಿಸಿದ ಕುರುಹುಗಳಿವೆ. ಇಲ್ಲಿ ಪಾಂಡವರು ವಾಸಿಸುತ್ತಿದ್ದ ಗುಡಿಸಲು ಇತ್ತು. ಹಿಂದೆ ಈ ಪ್ರದೇಶವನ್ನು ಆಳಿದ ಬಲ್ಲಾಳ ವಂಶಸ್ಥರು ಗುಡಿ ನಿರ್ಮಿಸಿದ್ದರು. ಇದರಲ್ಲಿ ಪಾಂಡವರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಇಂದಿಗೂ ಇಲ್ಲಿ  ಶ್ರೀ ಕೃಷ್ಣನ ಸಾನಿಧ್ಯ ನೆಲೆಗೊಳಿಸಿ ದ್ರೌಪದಿ ಹಾಗೂ ಪಾಂಡವರ ಮೂರ್ತಿಗಳನ್ನು ಪುನರ್‌ಪ್ರತಿಷ್ಠಾಪಿಸಿ  ಇಲ್ಲಿನ ಜನ ಆರಾಧಿಸುತ್ತಿದ್ದಾರೆ.  ರಾಜ್ಯದಲ್ಲಿ  ಪಂಚ ಪಾಂಡವರನ್ನು  ಆರಾಧಿಸಿಕೊಂಡು ಬರುವ ಏಕೈಕ ಕ್ಚೇತ್ರ ಇಲ್ಲಿದೆ.

ಚಲ್ಲಮೇರ ಗಂಡಿ:

 ಕೆದ್ದೊಟ್ಟೆ ಕೆರೆಯ ಪಕ್ಕದಲ್ಲಿರುವ ಮಾಲ್ತಿಗುಡ್ಡೆಗೆ  ಬೆಂಕಿ ಬಿದ್ದಾಗ ಅಲ್ಲಿ ಸಂಕಷ್ಟದಲ್ಲಿ ನಾಗರ ಹಾವನ್ನು ಚಲ್ಲಮೇರ ಎಂಬ ವ್ಯಕ್ತಿ ರಕ್ಷಣೆ ಮಾಡಿ ಇದೇ ಕೆರೆಗೆ ಬಿಟ್ಟಿದ್ದನಂತೆ. ಪ್ರತಿಯಾಗಿ  ನಾಗ  ಚಲ್ಲನನ್ನು ಸನ್ಮಾನ ಮಾಡಲು 18 ಕೈಗಳಿರುವ ಚಿನ್ನ ತುಂಬಿದ ಕೊಪ್ಪರಿಗೆಯನ್ನು ಕೊಡಲು ಹೋದಾಗ  ಚಲ್ಲ ಹೆದರಿ ಓಡಿ ಹೋದ ಕಿಂಡಿಯನ್ನೇ ಚಲ್ಲಮೇರ ಗಂಡಿ ಎಂದು ಕರೆಯಲಾಗುತ್ತಿದ್ದು,  ಚಲ್ಲಮೇರ ಸ್ವೀಕರಿಸದೇ ಉಳಿದಿರುವ ಕೊಪ್ಪರಿಗೆಯನ್ನು ನಾಗ ಕೆರೆಯಲ್ಲೇ ಬಿಟ್ಟಿದ್ದಾನೆ.  ಅಲ್ಲಿಂದ ಆತ ಓಡಿ ಹೋದ ಗಂಡಿಯನ್ನು  ಚಲ್ಲ ಮೇರನ ಗಂಡಿ ಎಂದು ಕರೆಯಲಾಗುತ್ತದೆ. ಇಲ್ಲಿ  ಕೊಪ್ಪರಿಗೆ ಹಾಗೂ ನಾಗದೇವರ ಸಾನಿಧ್ಯ ಇದೆ  ಎಂದು ನಂಬಲಾಗುತ್ತಿದೆ.    

ಹಿಂದೆ 15 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದ ಈ ಕೆರೆ ಈಗ ಹತ್ತು ಎಕರೆಗೆ ಇಳಿದಿದೆ. ಈಗ ಕೆರೆಯ ತಳ ಭಾಗ ಎದ್ದು ಕಾಣುತ್ತಿದೆ. ಇದರಲ್ಲಿದ್ದ  ನೂರಾರು ಜಾತಿಯ ಮೀನುಗಳು . ಕೆರೆಯ ಬದಿಯಲ್ಲಿರುವ ಮರಗಳಲ್ಲಿ ದೂರದ ಊರುಗಳಿಂದ ಬಂದು ನೆಲೆ ನಿಂತಿರುವ ಸಾವಿರಾರು ಬಕ ಪಕ್ಷಿಗಳ ಆಹಾರವಾಗಿದೆ.  

ಮಾಜಿ ಶಾಸಕ ಎಸ್.ಅಂಗಾರ ಅವರು ಸಣ್ಣ ನೀರಾವರಿ ಇಲಾಖೆಯ ಮುಖಾಂತರ ಈ ಕೆರೆಯ ಅಭಿವೃದ್ಧಿಗಾಗಿ ಹೂಳೆತ್ತಲು ಒಂದು ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದರೂ ಅದರ ಟೆಂಡರ್ ಪಡೆಯಲು ಯಾರೂ ಮುಂದೆ ಬಾರದೆ ಕೆರೆ ಹೂಳೆತ್ತುವ ಅಭಿವೃದ್ಧಿ ಪಡಿಸುವ ಮಾತು ದೂರವೇ ಉಳಿದಿದೆ. ಇದೀಗ ಕೆರೆ ಬರಿದಾಗಿ ಇನ್ನಾದರೂ ಕೆರೆ ಅಭಿವೃದ್ಧಿಗೆ ಚಾಲನೆ ದೊರೆಯಬಹುದೇ ಎನ್ನುವುದು ಸ್ಥಳೀಯರ ಪ್ರಶ್ನೆ.

ಕೆ.ಎಸ್.ಬಾಲಕೃಷ್ಣ ಕೊಯಿಲ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top