ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ನಾವು ವಿವಿಧ ಸಾಧನಗಳನ್ನು ಬಳಸುತ್ತೇವೆ. ಆದರೆ ಅದರಿಂದ ಹೊರ ದೇಹ ತಂಪಾಗುವುದೇ ವಿನಹ ದೇಹದ ಒಳಗೆ ತಂಪು ಅನುಭವಿಸುವುದಿಲ್ಲ. ದೇಹವನ್ನು ತಂಪಾಗಿರಿಸಲು ಬೇಸಿಗೆಯಲ್ಲಿ ಯಥೇಚ್ಛವಾಗಿ ಸಿಗುವ ಮುಳ್ಳು ಸೌತೆಕಾಯಿಯನ್ನ ಬಳಸಿ. ಸೌತೆಕಾಯಿಯನ್ನು ಹೇಗೆ ಬಳಸುವುದು ಎಂದು ತಿಳಿದುಕೊಳ್ಳೋಣ.
ಮುಳ್ಳು ಸೌತೆಕಾಯಿ ರುಚಿಯಲ್ಲಿ ಸಿಹಿ ಇರುತ್ತದೆ. ರೂಕ್ಷ ಗುಣ ಹೊಂದಿದೆ. ಸ್ವಭಾವದಲ್ಲಿ ಶೀತ ವೀರ್ಯ. ಪಿತ್ತ ದೋಷವನ್ನು ಶಮನಗೊಳಿಸುತ್ತದೆ ವಾತ ಹಾಗೂ ಕಫವನ್ನು ಹೆಚ್ಚಿಸುತ್ತದೆ.
ಮುಳ್ಳುಸೌತೆಯ ಉಪಯೋಗಗಳು
- ಕಣ್ಣು ಉರಿ, ಅಂಗೈ ಅಂಗಾಲಿನಲ್ಲಿ ಉರಿ, ಮೂತ್ರ ಉರಿ ಇದ್ದವರಿಗೆ ಸೌತೆಕಾಯಿ ಉತ್ತಮ ಪರಿಣಾಮ ನೀಡುತ್ತದೆ. ಸೌತೆ ರಸವನ್ನು ಸೇವಿಸಿರಿ.
- ಸೌತೆಕಾಯಿಯನ್ನು ಕಟ್ ಮಾಡಿ ಕಣ್ಣಿನ ಮೇಲೆ ಇಟ್ಟರೆ ಕಣ್ಣನ್ನು ತಂಪು ಮಾಡುವುದರ ಜೊತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
- ಸೌತೆಕಾಯಿಯ ರಸವನ್ನು ಮುಖಕ್ಕೆ ಲೇಪಿಸಿದರೆ ಮೊಡವೆ ಹಾಗೂ ಪಿಗ್ಮೆಂಟೇಷನ್ ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ಆಗುವ ಸನ್ ಬರ್ನ್ ನಿಂದ ರಕ್ಷಣೆ ನೀಡುತ್ತದೆ.ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಸೌತೆಕಾಯಿ ರಸದ ಜೊತೆ ಹಸಿಹಾಲು ಕೂಡಬ ಬೆರೆಸ ಬಹುದುಬ. ಮುಖಕ್ಕೆ ಹಚ್ಚಿ ಒಣಗಿದ ನಂತರ ನೀರಿನಿಂದ ತೊಳೆಯಿರಿ.
- ಸೌತೆಕಾಯಿಯಲ್ಲಿ ನೀರಿನ ಅಂಶ ಜಾಸ್ತಿ ಇರುವುದರಿಂದ ಬೇಸಿಗೆಯಲ್ಲಿ ಇದು ಒಳ್ಳೆಯ ಪಾನಿಯ. ಸೌತೆಕಾಯಿಯ ಜ್ಯೂಸ್ ಮಾಡಿ ಕುಡಿಯಿರಿ. ಬೇಕಾದರೆ ಅದಕ್ಕೆ ಬೆಲ್ಲ ಸೇರಿಸಿ ಕುಡಿಯಬಹುದು.
- ಅಧಿಕ ಜ್ವರ ಇದ್ದಾಗ ಇದರ ರಸದ ಸೇವನೆ ಒಳ್ಳೆಯದು.
- ರಾತ್ರಿ ನಿದ್ದೆ ಬಾರದವರಿಗೆ ಜ್ಯೂಸ್ ಕುಡಿದು ಮಲಗಿದರೆ ಒಳ್ಳೆಯ ನಿದ್ದೆ ಬರಲು ಸಹಾಯ ಮಾಡುತ್ತದೆ.
- ಒಂದು ಬೌಲ್ ನೀರಿನಲ್ಲಿ ಸೌತೆಕಾಯಿ ತುಂಡು ಹಾಗೂ ಶುಂಠಿಯ ತುಂಡನ್ನು ಹಾಕಿ ರಾತ್ರಿ ಇಡಿ ಇಟ್ಟು ಮರುದಿನ ಆ ನೀರನ್ನು ಇಡೀ ದಿನ ಸೇವಿಸುವುದರಿಂದ ಬೇಸಿಗೆಯಲ್ಲಿ ನಮ್ಮ ದೇಹವು ತಂಪಿರುತ್ತದೆ ಹಾಗೂ ಜೀರ್ಣಕಾರಿಯೂ ಕೂಡ.
ಹೇಗೆ ಬಳಸುವುದು?
ಸೌತೆಕಾಯಿಯನ್ನ ಹಸಿಯಾಗಿ ಬಳಸಿದರೆ ಒಳ್ಳೆಯದು ಬೇಯಿಸಿ ಸೇವಿಸಿದರೆ ಅದರ ಪೌಷ್ಟಿಕಾಂಶ ಗುಣಗಳು ಕಡಿಮೆಯಾಗುತ್ತದೆ. ಸೌತೆಕಾಯಿ ಹುಳಿ, ಗೊಜ್ಜು, ಜ್ಯೂಸ್, ಸಾಂಬಾರ್, ದೋಸೆ, ಬೆಲ್ಲದ ಜೊತೆ ಸೇವಿಸಬಹುದು.
ಯಾರು ಸೇವಿಸಬಾರದು –
ಕಫ ಪ್ರಕೃತಿಯವರು ಇದನ್ನು ಕಮ್ಮಿ ಸೇವಿಸಿ ಅಥವಾ ಬೇಯಿಸಿ ಸೇವಿಸಿ. ಇದು ಕಫ ದೋಷವನ್ನು ಹೆಚ್ಚಿಸುತ್ತದೆ. ಆದ್ದರಿಂದ ಕೆಮ್ಮು, ಆಸ್ತಮ ಇದ್ದವರು ಇದನ್ನ ಕಡಿಮೆ ಸೇವಿಸಿ. ಸೌತೆಕಾಯಿ ವಾತಾವನ್ನು ಹೆಚ್ಚಿಸುತ್ತದೆ ಆದ್ದರಿಂದ ಮಂಡಿ ನೋವು ಅಥವಾ ಯಾವುದೆ ತರಹದ ನೋವು ಇದ್ದಲ್ಲಿ ಕಮ್ಮಿ ಸೇವಿಸಿ. ಸೌತೆಕಾಯಿಯನ್ನು ಹಿತ ಮಿತವಾಗಿ ಬಳಸಿ ಆರೋಗ್ಯದಿಂದಿರಿ.
✒️ಡಾ. ಹರ್ಷಾ ಕಾಮತ್