ಕಗ್ಗದ ಸಂದೇಶ- ಆಸಕ್ತಿ ಮತ್ತು ವಿರಕ್ತಿ ಸಮನ್ವಯತೆಯಿಂದ ಜೀವನ ಸಾರ್ಥಕ…

ಹೊರಗೆ ಲೊಕಾಸಕ್ತಿಯೊಳಗೆ ಸಕಲ ವಿರಕ್ತಿ|
ಹೊರಗೆ ಕಾರ್ಯಧ್ಯಾನವೊಳಗುದಾಸೀನ||
ಹೊರಗೆ ಸಂಸ್ಕೃತಿ ಭಾರವೊಳಗದರ ತಾತ್ಸಾರ|
ವರಯೋಗಮಾರ್ಗವಿದು ಮಂಕುತಿಮ್ಮ||

ಹೊರಗೆ ನೋಡುವಾಗ ಲೌಕಿಕವಾದ ಕಾರ್ಯಗಳಲ್ಲಿ ಆಸಕ್ತಿ, ಆದರೆ ಒಳಗೆ ಎಲ್ಲದರಲ್ಲೂ ಅನಾಸಕ್ತಿ. ಹೊರಗೆ ಸದಾಕಾಲ ಕಾರ್ಯಮಗ್ನತೆ ಆದರೆ ಒಳಗೆ ಯಾವದರಲ್ಲೂ‌ ಆಸಕ್ತಿಯಿಲ್ಲದಂತಹ ಉದಾಸೀನತೆ. ಹೊರಗೆ ಸಂಸ್ಕೃತಿಯ ಬಗಗೆ ಪ್ರೀತಿ ಆದರೆ ಒಳಗೆ ಅದರ ಬಗೆಗೆ ತಾತ್ಸಾರ ಭಾವನೆ. ಈ ರೀತಿಯಲ್ಲಿ‌ ನಡತೆಯನ್ನು ರೂಪಿಸಿಕೊಳ್ಳುವುದೇ ಶ್ರೇಷ್ಠವಾದ ಯೋಗದ ಮಾರ್ಗವೆಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
ಲೌಕಿಕ ಜೀವನದಲ್ಲಿ ಸಂಪೂರ್ಣವಾಗಿ ಮುಳುಗದೆ ಶಾಶ್ವತವಾದ ಅಲೌಕಿಕ ಸುಖವನ್ನು‌ ಪಡೆಯಬೇಕಾದರೆ ಮನಸ್ಸಿನಲ್ಲಿ ಪರಬ್ರಹ್ಮನ ಧ್ಯಾನ ಮಾಡುವುದನ್ನು ಬಿಡಬಾರದು. ಮನೆಕೆಲಸದವಳು ಬಂದು ನಮ್ಮ ಮನೆಯ ಎಲ್ಲ ಕೆಲಸವನ್ನು‌ ನಿಷ್ಠೆಯಿಂದ ಮಾಡುತ್ತಿದ್ದರೂ ಅವಳ ಒಳ ಮನಸ್ಸು ತನ್ನ ಮನೆ ಹಾಗೂ ಮನೆಯವರ ಬಗೆಗೆ ಚಿಂತಿಸುತ್ತಾ ಇರುತ್ತದೆ. ಅವಳಿಗೆ ನಮ್ಮ ಮನೆಯ ಕೆಲಸ ತಾತ್ಕಾಲಿಕ ಮತ್ತು ವ್ಯವಹಾರಿಕ, ಆದರೆ ತನ್ನ ಮನೆ ಮತ್ತು ಮನೆಯವರ ಬಂಧುತ್ವ ಶಾಶ್ವತವಾದದ್ದು ಎನ್ನುವ ಪ್ರಜ್ಞೆ ಜಾಗೃತವಾಗಿರುತ್ತದೆ. ಇದನ್ನೇ ಪ್ರಾಜ್ಞರು “ಅಲ್ಲಿ ಇದೆ ನಮ್ಮನೆ ಇಲ್ಲಿ ಬರಿ ಸುಮ್ಮನೆ” ಎಂದಿರುವುದು.
‌‌‌‌ ಅಲೌಕಿಕತೆಯನ್ನು ಅಲ್ಲಗಳೆದು ಲೌಕಿಕ ಜೀವನದ ಸಾರ್ಥಕತೆ ಸಾಧ್ಯವಿಲ್ಲ. ಲೌಕಿಕ ಜೀವನದಲ್ಲಿಯೇ ಮುಳುಗಿ ಅಲೌಕಿಕತೆಯನ್ನು ಮರೆಯಬಾರದು. ಮುಳುಗದಿರು ತೆರೆಯ ಮೇಲೆ ಈಜುತಿರು ಎಂದಿದ್ದಾರೆ.

ಜಗದೊಳಗೆ ಬಹುಪಾಲು ನಿಜಸೊಗವ ಕಂಡಿಲ್ಲ|
ನಗುತಿಹರು ಹೊರಗೆ ನರಳುತೊಳಗೊಳಗೆ||
ಸೊಗದೊಳಿದ್ದೇವೆಂದು ಪೇಳುವರು ಹೊರಗದರ|
ಮೊಗವಾಡವನು ಧರಿಸಿ–ಬೋಳುಬಸವ||































 
 

ಎಂಬ ನಿಜಗುಣ ಕವಿಯ ನುಡಿಯಂತೆ ಹೊರಗಡೆ ತೋರಿಕೆಗೆ ಸಂತೋಷವಾಗಿ ಇರುತ್ತಾರೆ, ಆದರೆ ಒಳಗೊಳಗೆ ಕೊರಗುತ್ತಿರುತ್ತಾರೆ. ಲೌಕಿಕತೆ ಮತ್ತು ಅಲೌಕಿಕತೆಯ ಸಮನ್ವತೆಯಿಂದ ಜೀವನದಲ್ಲಿ ಒಳಹೊರಗು ನೆಮ್ಮದಿಯನ್ನು ಕಾಣಬಹುದು. ಆಸಕ್ತಿ ಮತ್ತು ವಿರಕ್ತಿಯ ಸಮನ್ವಯತೆಯನ್ನು ಸಾಧಿಸಿದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?

✒️ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕಸಾಪ ಕಾರ್ಕಳ ಘಟಕ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top