ಜನರೇಶನ್ ಗ್ಯಾಪ್ ಗೆಲ್ಲೋದು ಹೇಗೆ?

ನಮ್ಮ ಕಾಲದಲ್ಲಿ ಹಾಗಿರಲಿಲ್ಲ ಸರ್ ಎನ್ನುವ ಅಮ್ಮ-ನನಗೆ ವೈಚಾರಿಕ ಸ್ವಾತಂತ್ರ್ಯ ಬೇಕು ಎನ್ನುವ ಮಗಳು

ಓರ್ವ ತಾಯಿ ಮತ್ತು ಹದಿಹರೆಯದ ಮಗಳು ನನ್ನ ಮುಂದೆ ಸಲಹೆ ಪಡೆಯಲು ಎಂದು ಬಂದಿದ್ದರು. ತಾಯಿ ಮತ್ತು ಮಗಳ ನಡುವೆ ಬಹಳ ದೊಡ್ಡ ಜನರೇಶನ್ ಗ್ಯಾಪ್ ಇದ್ದ ಹಾಗೆ ನನಗೆ ಮೇಲ್ನೋಟಕ್ಕೆ ಅನ್ನಿಸಿತ್ತು.
ಮಗಳು ತಲೆ ಎತ್ತದೆ ಮೊಬೈಲ್ ಮೇಲೆ ಕುಟ್ಟುತ್ತಾ ನನ್ನ ಮುಂದೆ ಕೂತಿದ್ದಳು. ತಾಯಿ ಒಮ್ಮೆ ಮಗಳ ಕಡೆಗೆ, ಮತ್ತೊಮ್ಮೆ ನನ್ನ ಕಡೆಗೆ ದೃಷ್ಟಿಯನ್ನು ಬದಲಾಯಿಸುತ್ತಾ ಸಂದಿಗ್ಧದಲ್ಲಿ ಇದ್ದ ಹಾಗೆ ಅನ್ನಿಸಿತು. ನಾನು ಆ ಮಗಳನ್ನು ಸ್ವಲ್ಪ ಹೊತ್ತು ಹೊರಗೆ ಕುಳಿತುಕೊಳ್ಳಲು ಹೇಳಿದೆ. ಅವಳು ಖುಷಿಯಿಂದ ಮೊಬೈಲ್ ಕುಟ್ಟುತ್ತ ಹೊರಗೆ ಹೋಗಿ ಕೂತಳು.
ಈಗ ಆ ಅಮ್ಮ ಬ್ಲಾಸ್ಟ್ ಆದರು. ಅವರ ಗಂಟಲು ಭಾರವಾಯಿತು. ಮಾತಾಡುವುದೇ ಕಷ್ಟ ಆಯಿತು. ನಾನು ಅವರಿಗೆ ನೀರು ಕುಡಿಸಿ ಕಂಫರ್ಟ್ ಝೋನ್ ಕ್ರಿಯೇಟ್ ಮಾಡಿದೆ.

ಈಗ ಆ ಅಮ್ಮನ ವರ್ಶನ್ ಆರಂಭ ಆಯಿತು



































 
 

ನನ್ನ ಮಗಳಿಗೆ ಈಗ 18 ವರ್ಷ ಸರ್. ಅವಳು ಚಿಕ್ಕಂದಿನಿಂದ ನನಗೆ ಅಂಟಿಕೊಂಡೇ ಬೆಳೆದವಳು. ತುಂಬಾ ಮುಗ್ಧೆ ಸರ್ ಅವಳು. ಬಾಯಲ್ಲಿ ಬೆರಳಿಟ್ಟರೂ ಅವಳಿಗೆ ಕಚ್ಚಲು ಗೊತ್ತಿರಲಿಲ್ಲ. ಮೊನ್ನೆ ಮೊನ್ನೆಯವರೆಗೆ ಅವಳು ಎಲ್ಲವನ್ನೂ ನನಗೆ ಹೇಳಿಯೇ ಮಾಡುತ್ತಿದ್ದಳು. ಅವಳ ಆನ್‌ಲೈನ್ ಕ್ಲಾಸಿಗೆ ಅನುಕೂಲ ಆಗಲಿ ಎಂದು ಮೊಬೈಲ್ ತೆಗೆಸಿಕೊಟ್ಟೆವು.
ಆನಂತರ ನನ್ನ ಮಗಳು ನನ್ನ ನಿಯಂತ್ರಣ ತಪ್ಪಿದಳು. ಕಲಿಕೆಯಲ್ಲಿ ಕೂಡ ಹಿಂದೆ ಬಿದ್ದಿದ್ದಾಳೆ. ತುಂಬ ಹೊತ್ತು ಮೊಬೈಲ್ ಚಾಟ್ ಮಾಡುತ್ತ ಇರುತ್ತಾಳೆ ಸರ್. ಮಧ್ಯರಾತ್ರಿಯ ನಂತರವೂ ಆನ್‌ಲೈನ್ ಇರುತ್ತಾಳೆ. ಯಾರೋ ಅವಳ ಫ್ರೆಂಡ್ಸ್ ಎಲ್ಲ ಸೇರಿ ಒಂದು ವಾಟ್ಸಾಪ್ ಗ್ರೂಪ್‌ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವಳ ಕ್ಲಾಸಿನ ಹುಡುಗರೂ ಇದ್ದಾರೆ. ರಾತ್ರಿ ಯಾರ್ಯಾರ ಜತೆಗೂ ನಗು ನಗುತ್ತಾ ಮಾತಾಡೋದು….ಹೊಟ್ಟೆ ಉರಿದು ಹೋಗುತ್ತೆ ಸರ್! ನಮ್ಮದು ಮರ್ಯಾದಸ್ಥ ಕುಟುಂಬ ಸರ್. ನಾನು, ನನ್ನ ಗಂಡ ಏನೂ ಹೇಳಿದರೂ ಅವಳಿಗೆ ಮೂಗಿನ ತುದಿಯಲ್ಲಿ ಸಿಟ್ಟು. ಉಡಾಫೆಯ ಉತ್ತರಗಳು.
ದಿನದ ಹೆಚ್ಚು ಹೊತ್ತು ಕನ್ನಡಿಯ ಮುಂದೆ ಕಳೆಯುತ್ತಾಳೆ. ಹದಿನೈದು ದಿನಕ್ಕೊಮ್ಮೆ ಬ್ಯೂಟಿ ಪಾರ್ಲರ್, ಫೇಶಿಯಲ್ ಎಂದು ಹೋಗುತ್ತಾಳೆ. ಖರ್ಚಿಗೆ ಎಷ್ಟು ಕೊಟ್ಟರೂ ಸಾಲದು ಅಂತಾಳೆ. ಪದೇ ಪದೆ ಸುಳ್ಳು ಹೇಳುತ್ತಾಳೆ.
ಯಾರ್ಯಾರೋ ಅವಳ ಗೆಳೆಯರು ಮನೆಗೆ ಹುಡುಕಿಕೊಂಡು ಬರುತ್ತಾರೆ. ನನ್ನ ಜತೆ ಅವರು ಮಾತಾಡೋದಿಲ್ಲ. ರೂಮಿನ ಒಳಗೆ ಬಾಗಿಲು ಹಾಕಿಕೊಂಡು ಮಾತಾಡೋದು ಏನುಂಟು ಅವರಿಗೆ? ಕೇಳಿದರೆ ಕಂಬೈನ್ಡ್ ಸ್ಟಡಿ ಅನ್ನುತ್ತಾರೆ. ಆವಾಗೆಲ್ಲ ರೂಮಿನ ಒಳಗೆ ಊಟ, ತಿಂಡಿ ಎಲ್ಲವೂ ಸಪ್ಲೈ ಮಾಡಬೇಕು. ನನಗೆ ಸಾಕಾಗಿ ಹೋಗಿದೆ. ಮೊನ್ನೆ ಕುತೂಹಲಕ್ಕೆ ಅವಳ ವ್ಯಾನಿಟಿ ಬ್ಯಾಗ್ ಚೆಕ್ ಮಾಡಿದೆ. ಭಾರಿ ಸಿಟ್ಟು ಮಾಡಿಕೊಂಡಳು. ಇನ್ನೊಮ್ಮೆ ಅವಳ ಮೊಬೈಲ್ ಚೆಕ್ ಮಾಡಿದೆ. ಯಾರ್ಯಾರದೋ ಮೆಸೇಜ್, ಎಮೋಜಿಗಳು, ಅದಕ್ಕೆಲ್ಲ ಇವಳ ಅದೇ ರೀತಿಯ ರೆಸ್ಪಾನ್ಸಗಳು… ಛೀ! ನನಗೇ ನಾಚಿಕೆ ಆಯಿತು. ನಾನು ಮೊಬೈಲ್ ಚೆಕ್ ಮಾಡಿದ್ದು ಗೊತ್ತಾಗಿ ಭಾರಿ ದೊಡ್ಡ ರಾದ್ಧಾಂತ ಮಾಡಿದಳು. ಈಗ ಒಂದು ತಿಂಗಳಿಂದ ನನ್ನ ಹತ್ತಿರ ಸರಿಯಾಗಿ ಮಾತಾಡುತ್ತಿಲ್ಲ.
ಮೊನ್ನೆ ಪೇರೆಂಟ್ಸ್ ಮೀಟಿಂಗಗೆ ನಮಗೆ ಹೇಳದೆ ಬೇರೆ ಯಾರನ್ನೋ ಕರೆದುಕೊಂಡು ಹೋಗಿದ್ದಾಳೆ. ಅಪ್ಪ ಮೊನ್ನೆ ಯಾವುದೋ ಕಾರಣಕ್ಕೆ ಸಿಟ್ಟು ಮಾಡಿಕೊಂಡು ಹೊಡಿತೇನೆ ನೋಡು ಎಂದು ಮುಂದೆ ಹೋದಾಗ, ಹೊಡೀರಿ ನೋಡುವ ಎಂದು ಬೆನ್ನು ಕೊಟ್ಟು ನಿಂತು ಬಿಟ್ಟಿದ್ದಾಳೆ. ಎಷ್ಟು ಧಿಮಾಕು ಅವಳಿಗೆ?
ನೀವು ಹೇಳಿ ಸರ್, ನಾವೇನು ತಪ್ಪು ಮಾಡಿದ್ದೇವೆ? ಎಷ್ಟು ಪ್ರೀತಿ ಮಾಡಿದ್ದೆ ಅವಳನ್ನು? ಅವಳಿಗೇನೂ ಕಡಿಮೆ ಮಾಡಲಿಲ್ಲ ನಾವು. ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಸರ್. ನೀವೇ ಬುದ್ಧಿ ಹೇಳಬೇಕು ಅವಳಿಗೆ ಎಂದು ಹೇಳಿ ಅಮ್ಮ ಕಣ್ಣೀರನ್ನು ಒರೆಸಿಕೊಂಡರು.
ನಾನವರಿಗೆ ತುಂಬಾ ಹೇಳಲು ಬಾಕಿ ಇತ್ತು. ಆದರೆ ಏನೂ ಹೇಳಲಿಲ್ಲ. ಅವರನ್ನು ಹೊರಹೋಗಲು ಹೇಳಿ ಮಗಳನ್ನು ಒಳಗೆ ಕರೆದೆ. ಒಂದಿಷ್ಟೂ ಅಳುಕದೆ ಮಗಳು ನನ್ನ ಮುಂದೆ ಬಂದು ಕುಳಿತಳು. ಅಮ್ಮನ ಹಾಗೆ ಕಣ್ಣೀರು ಸುರಿಯಲೆ ಇಲ್ಲ. ಅಳುಕಲೆ ಇಲ್ಲ ಮಗಳು.

ಈಗ ಮಗಳ ವರ್ಶನ್ ಆರಂಭ ಆಯಿತು

ನಾನೀಗ ಸಣ್ಣವಳು ಅಲ್ಲ ಸರ್. ಯಾವುದು ಸರಿ, ಯಾವುದು ತಪ್ಪು ಎಂದು ನನಗೆ ಅರ್ಥ ಆಗುತ್ತದೆ. ನನಗೂ ಬುದ್ಧಿ ಇದೆ. ಅಮ್ಮ ನನ್ನನ್ನು ತುಂಬಾ ಪ್ರೀತಿ ಮಾಡ್ತಾರೆ ಸರ್. ಆದರೆ ಅತಿಯಾದ ಪ್ರೀತಿಯೇ ನನಗೆ ಬಂಧನ ಆಗಿದೆ. ನನ್ನ ಅಮ್ಮ ಹಳೆಯ ಕಾಲದವರು ಸರ್. ಅವರಿಗೆ ನನ್ನ ಫ್ರೆಂಡ್ಸ್ ಫೀಲಿಂಗ್ ಅರ್ಥವೇ ಆಗುವುದಿಲ್ಲ. ನಾವೆಲ್ಲರೂ ಮಾಡರ್ನ್ ಮಕ್ಕಳು. ನಮಗೆ ಬೇಕಾದದ್ದು ವೈಚಾರಿಕ ಸ್ವಾತಂತ್ರ್ಯ. ಅದನ್ನು ಕೊಡದೆ ಹೊಟ್ಟೆ ತುಂಬಾ ಊಟ ಕೊಟ್ಟರೆ ಏನು ಫಲ?
ಇಡೀ ದಿನ ಮೊಬೈಲು ಮುಟ್ಟಬೇಡ, ಹುಡುಗರಿಗೆ ನಂಬರ್ ಕೊಡಬೇಡ, ಚಾಟ್ ಮಾಡಬೇಡ ಅಂದರೆ ಏನರ್ಥ? ಮೊನ್ನೆ ನಾನು ಸ್ನಾನಕ್ಕೆ ಹೋದಾಗ ನನ್ನ ಮೊಬೈಲ್ ಲಾಕ್ ಓಪನ್ ಮಾಡಿ ಮೆಸೇಜ್ ಬಾಕ್ಸ್ ಚೆಕ್ ಮಾಡಿದ್ದಾಳೆ ಅಮ್ಮ. ಅದು ಸರಿಯಾ? ನನ್ನ ವ್ಯಾನಿಟಿ ಬ್ಯಾಗ್ ಚೆಕ್ ಮಾಡುವ ಬುದ್ಧಿ ಯಾಕೆ?
ನಾನೀಗ ಮೇಜರ್ ಸರ್. ನನಗೆ ನನ್ನ ಮನೆಯಲ್ಲಿ ಪ್ರೈವೆಸಿ ಬೇಡವಾ? ಅಮ್ಮ ಯಾಕೆ ಪತ್ತೆದಾರಿಕೆ ಮಾಡಬೇಕು?
ನಾನು ಕಲಿಕೆಯಲ್ಲಿ ಹಿಂದೆ ಬಿದ್ದಿಲ್ಲ ಸರ್. ಹತ್ತನೇ ತರಗತಿಯವರೆಗೆ ಕನ್ನಡ ಮೀಡಿಯಮಲ್ಲಿ ಓದಿದವಳು ನಾನು. ಈಗ ಸಯನ್ಸ್ ತೆಗೆದುಕೊಂಡಿರುವ ಕಾರಣ ಸ್ವಲ್ಪ ಮಾರ್ಕ್ ಹಿಂದೆ ಬಂದಿದೆ. ನಾನು ಕೇಳಿಕೊಂಡ ಮೇರೆಗೆ ನನ್ನ ಒಬ್ಬ ಕ್ಲಾಸ್ಮೇಟ್ ಹುಡುಗ ಮನೆಗೆ ಬಂದು ನನಗೆ ಹೇಳಿಕೊಡುತ್ತಾನೆ. ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್ ಸರ್. ಅಮ್ಮ ನಮ್ಮ ಮಾತಿಗೂ ಕಿವಿ ಕೊಡುತ್ತಾರೆ. ಅದಕ್ಕೆ ನಾವು ರೂಮಿನಲ್ಲಿ ಬಾಗಿಲು ಹಾಕಿಕೊಂಡು ಕೂತು ಓದುತ್ತೇವೆ.
ನಾನು ಬಾಲ್ಯದಿಂದಲೂ ಸ್ವಲ್ಪ ಹೆಚ್ಚು ಬ್ಯೂಟಿ ಕಾನ್ಶಿಯಸ್ ಸರ್. ಚಂದ ಕಾಣಬೇಕು ಎಂದು ನಾನು ಆಸೆ ಪಡೋದು ತಪ್ಪಾ ಸರ್? ಪಾರ್ಲರ್‌ಗೆ ಹೋದರೂ ಬೈಗುಳ. ಫೇಶಿಯಲ್ ಮಾಡಿದರೂ ಬೈಗುಳ. ಕನ್ನಡಿ ಮುಂದೆ ನಿಂತರೂ ಬೈಗುಳ. ಮೊನ್ನೆ ಉದ್ದ ಕೂದಲು ಕಟ್ ಮಾಡಿಕೊಂಡು ಬಂದೆ. ಅದಕ್ಕೂ ಬೈಗುಳ. ಅಮ್ಮನ ಕಾಲವೇ ಬೇರೆ. ನನ್ನ ಕಾಲವೇ ಬೇರೆ.
ನಾನು ತುಂಬಾ ಸ್ವಾಭಿಮಾನಿ ಸರ್. ನಾನು ನನ್ನ ಸ್ವಂತ ಕಾಲ ಮೇಲೆ ನಿಲ್ಲಬೇಕು. ನನ್ನ ಕೆರಿಯರ್ ನಾನೇ ಬಿಲ್ಡ್ ಮಾಡಬೇಕು ಸರ್. ಅದಕ್ಕಾಗಿ ಯಾವ ಕಷ್ಟ ಪಡಲೂ ನಾನು ಸಿದ್ಧ ಸರ್. ನನಗೆ ಅಮ್ಮನ ಹಾಗೆ ಯೋಚನೆ ಮಾಡಲು ಬರೋದಿಲ್ಲ.
ದಯವಿಟ್ಟು ನನ್ನ ಅಮ್ಮನಿಗೆ ಎರಡು ಮಾತು ಹೇಳಿ ಸರ್. ನಾನು ಅಮ್ಮನನ್ನು ಪ್ರೀತಿ ಮಾಡುತ್ತೇನೆ ಸರ್. ಹಾಗೆಯೇ ಅಮ್ಮ ಹೇಳುವ ನಾನು ಹಾಗೆ ಯಾರ ಜತೆಗೂ ಓಡಿ ಹೋಗುವುದಿಲ್ಲ. ಇದನ್ನು ಅಮ್ಮನಿಗೆ ದಯವಿಟ್ಟು ಹೇಳಿ ಎಂದಳು.
ಅಮ್ಮನ ದುಗುಡ, ಆತಂಕ, ಒತ್ತಡ ಯಾವುದೂ ಆಕೆಯ ಮುಖದಲ್ಲಿ ನನಗೆ ಕಾಣಲೇ ಇಲ್ಲ. ತುಂಬಾ ಮೆಚ್ಯೂರ್ ಆದ ಹುಡುಗಿ ಎಂದು ನನಗೆ ಅನ್ನಿಸಿತು. ಅದಕ್ಕಿಂತ ಮುಖ್ಯವಾಗಿ ಅಮ್ಮ ಎತ್ತಿದ ಅಷ್ಟೂ ಆತಂಕಗಳಿಗೆ ಆಕೆ ಪ್ರಿಪೇರ್ ಮಾಡಿಕೊಂಡು ಬಂದು ಉತ್ತರ ಕೊಟ್ಟ ಹಾಗೆ ನನಗೆ ಅನ್ನಿಸಿತು. ಅದರ ಜತೆಗೆ ತಾಯಿ ಮಗಳ ಮಧ್ಯೆ ಇರುವ ಜನರೇಶನ್ ಗ್ಯಾಪ್ ಬಗ್ಗೆ ಅವರಿಬ್ಬರನ್ನೂ ಒಟ್ಟಿಗೆ ಕೂರಿಸಿ ತಿಳಿಸಿಹೇಳಬೇಕು ಎಂದು ನನಗೆ ಅನ್ನಿಸಿತು.
ನಾನೀಗ ಅವರಿಬ್ಬರನ್ನು ನನ್ನ ಮುಂದೆ ಕೂರಿಸಿ ಏನು ಹೇಳಬೇಕು? ನಿಮ್ಮ ವಿವೇಚನೆಗೆ ಬಿಟ್ಟಿದ್ದೇನೆ.
✒️ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top