ದೆಹಲಿ : ಹತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯಿಂದ ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗಳಲ್ಲಿ ಕೊಳೆಯುತ್ತಿದ್ದ 35012 ಕೋಟಿ ರೂ. ಠೇವಣಿಯನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ)ಗೆ ವರ್ಗಾವಣೆ ಮಾಡಿವೆ. 2023ರ ಫೆಬ್ರವರಿ ಅಂತ್ಯಕ್ಕೆ ಅನುಗುಣವಾಗಿ 10.24 ಕೋಟಿ ಖಾತೆಗಳಲ್ಲಿ ಈ ಹಣ ಇತ್ತು ಎಂದು ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕಾರಡ್ ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಆರ್‌ಬಿಐಗೆ ವರ್ಗಾವಣೆಯಾದ 35012 ಕೋಟಿ ರೂ. ಪೈಕಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ)ನದ್ದೇ 8086 ಕೋಟಿ ರು. ಇದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ 5340 ಕೋಟಿ, ಕೆನರಾ ಬ್ಯಾಂಕ್‌ನಿಂದ 4558, ಬ್ಯಾಂಕ್ ಆಫ್ ಬರೋಡಾದಿಂದ 3904 ಕೋಟಿ ವರ್ಗಾವಣೆಯಾಗಿದೆ. ಖಾತೆದಾರ ಸಾವಿಗೀಡಾದಾಗ ಬ್ಯಾಂಕ್ ಅಧಿಕಾರಿಗಳು ಕುಟುಂಬ ಸದಸ್ಯರ ಕ್ಲೇಮು ಇತ್ಯರ್ಥಕ್ಕೆ ಸಾಧ್ಯವಿರುವ ಎಲ್ಲ ನೆರವನ್ನು ನೀಡುತ್ತಾರೆ ಎಂದು ಸಚಿವರು ತಿಳಿಸಿದರು.