ಪುತ್ತೂರು: ಹತ್ತೂರ ಭಕ್ತರಿಂದ ಆರಾಧನೆ ಪಡೆದುಕೊಳ್ಳುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಏ. 10ರಿಂದ 20ರವರೆಗೆ ನಡೆಯಲಿದೆ.
ಪುತ್ತೂರು ಜಾತ್ರೆಯ ಹಿನ್ನೆಲೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾಹಿತಿ ನೀಡುತ್ತಾ, ಏ. 1ರಂದು ಗೊನೆ ಮುಹೂರ್ತ ನಡೆಯಲಿದೆ. ಬೆಳಿಗ್ಗೆ ಪ್ರಾರ್ಥನೆ ನಡೆದು 9.35ರ ವೃಷಭ ಲಗ್ನದಲ್ಲಿ ಜಾತ್ರೆಗೆ ಗೊನೆ ಕಡಿಯಲಾಗುವುದು. ಏ. 10ರಂದು ಬೆಳಿಗ್ಗೆ 9.25ರ ವೃಷಭ ಲಗ್ನದಲ್ಲಿ ಧ್ವಜಾರೋಹಣ ನಡೆದು, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಅಂಕುರಾರ್ಪಣೆ, ಬಲಿ ಹೊರಟು ಉತ್ಸವ, ಪೇಟೆ ಸವಾರಿ ನಡೆಯಲಿದೆ. ಏ. 11, ಏ. 12, ಏ. 13, ಏ. 14ರಂದು ಸಂಜೆ ಬಲಿ ಹೊರಟು ಉತ್ಸವ, ಪೇಟೆ ಸವಾರಿ ನಡೆಯಲಿದೆ ಎಂದು ವಿವರಿಸಿದರು.
ಏ. 15ರಂದು ವಿಷು:
ಏ. 15ರಂದು ಸೌರಮಾನ ಯುಗಾದಿ ಅಥವಾ ವಿಷು ಹಬ್ಬದ ಪ್ರಯುಕ್ತ ಬೆಳಿಗ್ಗೆ ಉತ್ಸವ, ವಸಂತಕಟ್ಟೆ ಪೂಜೆ, ರಾತ್ರಿ ಉತ್ಸವ, ಬಂಡಿ ಉತ್ಸವ (ಚಂದ್ರಮಂಡಲ), ಪೇಟೆ ಸವಾರಿ ನಡೆಯಲಿದೆ.
ಉಳ್ಳಾಲ್ತಿ ಕಿರುವಾಳು ಭಂಡಾರ ಆಗಮನ:
ಏ. 16ರಂದು ಮಲ್ಲಿಗೆ ಪ್ರಿಯೆ ಬಲ್ನಾಡು ಶ್ರೀ ಉಳ್ಳಾಲ್ತಿ ದಂಡನಾಯಕ ಪರಿವಾರ ದೈವಗಳ ಕಿರುವಾಳು ಭಂಡಾರ ಆಗಮನದ ಸಂತಸ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 8.30ರಿಂದ ತುಲಾಭಾರ ಸೇವೆ, ಸಂಜೆ ಉತ್ಸವ, ಶ್ರೀ ಮಹಾಲಿಂಗೇಶ್ವರ ಹಾಗೂ ಶ್ರಿ ದಂಡನಾಯಕ ಉಳ್ಳಾಲ್ತಿ ಭೇಟಿ, ಪಾಲಕಿ ಉತ್ಸವ, ಸಣ್ಣ ರಥೋತ್ಸವ, ಕೆರೆ ಅಯನ, ತೆಪ್ಪೋತ್ಸವ ನಡೆಯಲಿದೆ.
ಬ್ರಹ್ಮರಥೋತ್ಸವ, ಸುಡುಮದ್ದು ಪ್ರದರ್ಶನ:
ಏ. 17ರಂದು ಬೆಳಗ್ಗೆ ಉತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಲಿ, ರಾತ್ರಿ ವೈಭವದ ಬ್ರಹ್ಮರಥೋತ್ಸವ ನಡೆಯಲಿದೆ. ಇದೇಸಂದರ್ಭ ಪುತ್ತೂರು ಬೆಡಿ ಖ್ಯಾತಿಯ ಸುಡುಮದ್ದು ಪ್ರದರ್ಶನ, ಬಂಗಾರ್ ಕಾಯರ್ ಕಟ್ಟೆ ಸವಾರಿ, ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆ, ಶ್ರೀ ಭೂತಬಲಿ, ಶಯನ ನಡೆಯಲಿದೆ.
ಅವಬೃತ ಸವಾರಿ
ಏ. 18ರಂದು ಬೆಳಿಗ್ಗೆ ಬಾಗಿಲು ತೆಗೆಯುವ ಮುಹೂರ್ತ, ತುಲಾಭಾರ ಸೇವೆ, ಸಂಜೆ ವೀರಮಂಗಲ ಅವಭೃತ ಸ್ನಾನಕ್ಕೆ ಸವಾರಿ ಹೊರಡಲಿದೆ.
ಏ. 19ರಂದು ಬೆಳಿಗ್ಗೆ ಧ್ವಜಾವರೋಹಣ, ರಾತ್ರಿ ಚೂರ್ಣೋತ್ಸವ, ವಸಂತ ಪೂಜೆ ಪ್ರಾರಂಭ, ಹುಲಿ ಭೂತ, ರಕ್ತೇಶ್ವರಿ ನೇಮ, ಏ. 20ರಂದು ಸಂಪ್ರೋಕ್ಷಣೆ, ರಾತ್ರಿ ಮಂತ್ರಾಕ್ಷತೆ, ಅಂಙಣತ್ತಾಯ, ಪಂಜುರ್ಲಿ ಮೊದಲಾದ ದೈವಗಳ ನೇಮ ನಡೆಯಲಿದೆ.
ಮಾ. 25ರಂದು ಆಹ್ವಾನ ಪತ್ರಿಕೆ ವಿತರಣೆ, ಮಾ. 9ರಂದು ಹಸಿರು ಹೊರೆಕಾಣಿಕೆ:
ಜಾತ್ರೋತ್ಸವದ ಸಿದ್ಧತೆ ಹಾಗೂ ಸ್ವಚ್ಛತೆ ಹಿನ್ನೆಲೆಯಲ್ಲಿ ಮಾ. 25ರಂದು ದೇವಾಲಯದಲ್ಲಿ ಭಕ್ತರು, ಸ್ವಯಂ ಸೇವಕರೊಂದಿಗೆ ಸಭೆ ನಡೆಯಲಿದೆ. ಅದೇ ದಿನ ಬೆಳಿಗ್ಗೆ ಪುತ್ತೂರು ಪೇಟೆಯಲ್ಲಿ ಜಾತ್ರೆಯ ಆಹ್ವಾನ ಪತ್ರಿಕೆ ವಿತರಣೆ ನಡೆಯಲಿದೆ ಎಂದು ಕೇಶವ ಪ್ರಸಾದ್ ಮುಳಿಯ ಹೇಳಿದರು.
ಏ. 9ರಂದು ಮಧ್ಯಾಹ್ನ 3 ಗಂಟೆಗೆ ಬೊಳುವಾರು ಮತ್ತು ದರ್ಬೆಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ವಿವಿಧ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೂಲಕ ಸಂಗ್ರಹಿಸಿದ ಹಸಿರು ಹೊರೆಕಾಣಿಕೆಯನ್ನು ದೇವಸ್ಥಾನಕ್ಕೆ ಸಮರ್ಪಿಸಲಾಗುವುದು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮಾಹಿತಿ ನೀಡಿದರು.
ಜಾತ್ರಾ ಗದ್ದೆಯ ಏಲಂ:
ಏ. 3 ಅಥವಾ 4ರಂದು ಈ ಹಿಂದಿನ ವರ್ಷದ ನಿಯಮದಂತೆ ಜಾತ್ರಾ ಗದ್ದೆಯ ಏಲಂ ನಡೆಯಲಿದೆ. ಕಾನೂನಿನ ಚೌಕಟ್ಟಿನಲ್ಲಿ ನಿಬಂಧನೆಗಳನ್ನು ಪಾಲಿಸಿಕೊಂಡೇ ಏಲಂ ಪ್ರಕ್ರಿಯೆ ನಡೆಯಲಿದೆ ಎಂದು ಕೇಶವ ಪ್ರಸಾದ್ ತಿಳಿಸಿದರು.
ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ:
ಜಾತ್ರೆಯ ನಡೆಯುವ ಏ. 10ರಿಂದ 20ರವರೆಗೆ ಜಾತ್ರಾ ಗದ್ದೆಯಲ್ಲಿ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ದೇವಾಲಯದಲ್ಲಿ ಮಹಾ ರುದ್ರಯಾಗ ನಡೆಯಲಿದೆ. ಏ. 11ರಂದು ರಾತ್ರಿ ದೇವರ ಉತ್ಸವ ಬಲಿ ಸಂದರ್ಭ ಅಷ್ಟಾವಧಾನ ಸೇವೆ ನಡೆಯಲಿದೆ. ಬಳಿಕ ದೇವರ ಪೇಟೆ ಸವಾರಿ ಎಂದಿನಂತೆ ನಡೆಯಲಿದೆ. ಈ ಬಾರಿ ಅನ್ನದಾನಕ್ಕೆ ವಿಶೇಷ ಆದ್ಯತೆ ನೀಡಿದ್ದು, ಸುಮಾರು 30ರಿಂದ 35 ಲಕ್ಷ ರೂ. ವೆಚ್ಚ ತಗಲುವ ಸಾಧ್ಯತೆ ಇದೆ. ಆದ್ದರಿಂದ ಭಕ್ತರಿಂದ ದೇಣಿಗೆ ನಿರೀಕ್ಷಿಸಲಾಗಿದೆ ಎಂದು ಕೇಶವ ಪ್ರಸಾದ್ ಮುಳಿಯ ತಿಳಿಸಿದರು.
ಜಾತ್ರೆಗೆ ಸಮೂಹ ವಿಮೆ:
ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಜಾತ್ರೆಗೆ ಸಮೂಹ ವಿಮೆ ಮಾಡಲಾಗಿದೆ. ಇದರ ಪ್ರಕ್ರಿಯೆಗಳು ನಡೆಯುತ್ತಿದ್ದು, ಶೀಘ್ರ ಅಂತಿಮಗೊಳ್ಳಲಿದೆ. ಸುರಕ್ಷತೆಯ ದೃಷ್ಟಿಯಿಂದ ಇದು ಅಗತ್ಯವಾಗಿದೆ ಎಂದು ಕೇಶವ ಪ್ರಸಾದ್ ಹೇಳಿದರು.
19.10 ಎಕರೆ ಜಾಗ ಮಂಜೂರು:
ದೇವಸ್ಥಾನದ ವತಿಯಿಂದ ನಡೆಯುತ್ತಿರುವ ಗೋ ಸಂವರ್ಧನಾ ಕೇಂದ್ರಕ್ಕಾಗಿ ನೈತಾಡಿಯಲ್ಲಿ 19.10 ಎಕರೆ ಜಾಗ ಮಂಜೂರಾಗಿದೆ. ಮೊಟ್ಟೆತ್ತಡ್ಕ ಡಿ.ಸಿ.ಆರ್. ಪಕ್ಕದಲ್ಲೇ ಈ ಜಾಗವಿದ್ದು, 17ರಂದು ದೇವಾಲಯಕ್ಕೆ ದಾಖಲೆ ಪತ್ರಗಳ ಹಸ್ತಾಂತರ ನಡೆಯಲಿದೆ. ದೇವಾಲಯದ ಅನ್ನಛತ್ರ ಮೇ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ರಾಮದಾಸ್ ಗೌಡ, ಬಿ.ಕೆ. ವೀಣಾ ಉಪಸ್ಥಿತರಿದ್ದರು.