ಕಗ್ಗದ ಸಂದೇಶ-ಬಹುವಿದ್ಯೆ, ಬಹುತರ್ಕ, ಬಹುನೇಮ ಬೇಕಿಲ್ಲ ಹಗುರ ಬದುಕಿಗೆ…

ಬಹುವಿದ್ಯೆ ಬಹುತರ್ಕ ಬಹುನೇಮ ಬೇಕಿಲ್ಲ|
ವಹಿಸೆ ಜೀವನಭರವನದು ಹಗುರೆನಿಪವೊಲ್||
ಸಹನೆ ಸಮರಸಭಾವವಂತಃ‌ ಪರೀಕ್ಷೆಗಳು|
ವಿಹಿತವಾತ್ಮದ ಹಿತಕೆ– ಮಂಕುತಿಮ್ಮ||

ಬದುಕಿನ ಭಾರವನ್ನು ಹಗುರವಾಗಿ ಹೊರಲು ಅನೇಕ ವಿದ್ಯೆಗಳ ಪಾಂಡಿತ್ಯವನ್ನು ಹೊಂದಿರಬೇಕಾಗಿಲ್ಲ, ಅತಿಯಾದ ತರ್ಕ ಮತ್ತು ಕಠೋರ ವ್ರತ ನಿಯಮಗಳನ್ನು ಪಾಲಿಸುವುದು ಅನಗತ್ಯ. ಸಹನೆ ಮತ್ತು ಸಮಭಾವದೊಂದಿಗೆ ಅಂತರಂಗದ ವಿಚಾರ ಮಂಥನವಾದರೆ ಸಾಕು ಆತ್ಮಕ್ಕೆ ಹಿತವಾಗುವುದಕ್ಕೆ ಎಂದು ಸರಳವಾಗಿ ಬಾಳುವ ಬಗೆಯನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.

ಅಂತರಂಗದ ವೀಕ್ಷಣೆ ಎನ್ನುವುದು ಮಹತ್ವದ ಗುಣ. ಕಾಡಿನ ರಾಜನಾದ ಸಿಂಹ ಸ್ವಲ್ಪ ದೂರ ಸಾಗಿದ ನಂತರ ಒಮ್ಮೆ ನಿಂತು ಸಾಗಿ ಬಂದ ದಾರಿಯನ್ನು ಅವಲೋಕನ ಮಾಡುತ್ತದೆ. ಮಾನವನು ಕೂಡ ತಾನು ಸಾಗಿ ಬಂದ ಬದುಕಿನ ದಾರಿಯನ್ನು ಅವಲೋಕನ ಮಾಡಬೇಕು. ಈ ರೀತಿಯ ಅತ್ಮಾವಲೋಕನ ತನ್ನನ್ನು ತಾನು ತಿದ್ದಿಕೊಳ್ಳುವುದಕ್ಕೆ ನೆರೆವಾಗುತ್ತದೆ.

ಜೀವನದ ಸೊಗಸು ಬರಿ ಶಾಸ್ತ್ರಿತನದಿಂದಲ್ಲ|
ಈ ಜೀವ ಬೇಡುವುದು ಮೋದ, ಆಮೋದ||
ಕೊಂಚ ಬಿಗಿ, ತುಸು ಸಡಿಲ ಸಂತಸಕೆ ರಹದಾರಿ|
ಒರಟುತನ ತರವಲ್ಲ- ಮುದ್ದುರಾಮ||































 
 
ಎಂಬ ಕವಿ ಕೆ. ಶಿವಪ್ಪನವರ ನುಡಿಯಂತೆ ಬರೀ ಶಾಸ್ತ್ರಗಳ ಪ್ರಕಾರ ನಡೆಯುವುದರಿಂದ ಜೀವನ ಸೊಗಸಾಗಿರುವುದಿಲ್ಲ. ಸ್ವಲ್ಪ ನೇಮದ ನಿಷ್ಠೆ ಮತ್ತು ಸ್ವಲ್ಪ ಸಡಿಲತೆಯಿಂದ ಕೂಡಿದ ಸಮರಸದ ಮಾರ್ಗದಲ್ಲಿ ನಡೆಯಬೇಕು.
ಉನ್ನತ ವಿದ್ಯಾಭ್ಯಾಸ ಮಾಡಿರುವ ಜ್ಞಾನಿಗಳಿಗಿಂತ, ತರ್ಕಶಾಸ್ತ್ರವನ್ನು ಬಲ್ಲ ಪಂಡಿತರಿಗಿಂತ ಹಾಗೂ ನೇಮ ನಿಷ್ಠೆಗಳನ್ನು ಹೇಳುವ ಶಾಸ್ತ್ರಜ್ಞರಿಗಿಂತ ಇದ್ಯಾವುದನ್ನು ಅರಿಯದ ಹಳ್ಳಿಯ ಮುಗ್ಧ ಜನರು ಸಮರಸದ ಸುಂದರವಾದ ಬದುಕನ್ನು ಸಾಗಿಸುತ್ತಿದ್ದಾರೆ. ತರ್ಕ ನೇಮಗಳಲ್ಲೆ ಬದುಕು ಕಳೆದು ಹೋಗಬಾರದು. ಇದನ್ನು ಮೀರಿ ನಿಜವಾದ ಅರಿವನ್ನು ಹೊಂದಬೇಕು. ಜೀವನವೆನ್ನುವುದು ಸವಾಲುಗಳ ಸರಣೆ. ಕಷ್ಟಸುಖ, ನೋವು-ನಲಿವುಗಳು ಸಾಮಾನ್ಯ. ಇದೆಲ್ಲವುಗಳಿಂದ ಕೂಡಿದ ಬದುಕಿನ ಹೊಣೆಯನ್ನು ಹಗುರವಾಗಿ ನಿರ್ವಹಿಸುವ ಕಲೆಯನ್ನು ರೂಢಿಸಿಕೊಳ್ಳಬೇಕು.

ಜೀವನವೆನ್ನುವುದು ಬಲು ಭಾರ ಎಂದು ನಿಟ್ಟುಸಿರು ಬಿಡುವವರು, ಮುಳ್ಳಿನ ಮೇಲಿನ ನಡಿಗೆ ಎಂದು ಮರುಗುವವರು ಬಹಳ; ಆದರೆ ಜೀವನ ಎನ್ನುವುದು ಒಂದು ಹೂವಿನ ಹಾರದಂತೆ ಬಲು ಹಗುರ, ಸುಮಧುರವೆಂದು ಭಾವಿಸಿಕೊಂಡು‌ ನೆಮ್ಮದಿಯಿಂದ ಆನಂದದೊಂದಿಗೆ ಬಾಳುವವರು ಇದ್ದಾರೆ. ಬದುಕನ್ನು ಭಾರ ಅಥವಾ ಹಗುರ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ‌. ಪದವಿ, ಪಾಂಡಿತ್ಯ ಪ್ರದರ್ಶನ ಹಾಗೂ ನೂರಾರು ನೇಮ ನಿಷ್ಠೆ, ತರ್ಕಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ಜೀವನವನ್ನು ಬಂದ ಹಾಗೆ ಸ್ವೀಕರಿಸುವುದನ್ನು ಕಲಿಯಬೇಕು.

ಬದುಕೊಂದು ಹೋರಾಟವೆನಲದನು ಹೋರಾಡು|
ಬದುಕೊಂದು ಕ್ರೀಡೆಯನೆ ಮುದದೊಳಾಡು||
ಬದುಕೊಂದು ಕರ್ತವ್ಯವೆನಲದನು ಪೂರೈಸು|
ಬದುಕು ನೀಂ ನಿಷ್ಠೆಯಿಂ||

ಎಂಬ ನಿಜಗುಣ ಕವಿಯ ಮಾತಿನಂತೆ ಬದುಕನ್ನು ಬಂದ ಹಾಗೆ ತಾಳ್ಮೆಯಿಂದ ಸಂತೋಷವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅತಿಯಾಗಿ ತಲೆಕೆಡಿಸಿಕೊಳ್ಳದೆ ಸಾಮರಸ್ಯ, ಸಹನೆ, ಸಹವಾಳ್ವೆ , ಶಾಂತಿ ಸಮಾಧಾನ ಇತ್ಯಾದಿ ಮೌಲ್ಯಗಳ ಆರಾಧನೆ ಹಾಗೂ ಅಂತರಂಗದ ಅವಲೋಕನದೊಂದಿಗೆ ಸಾಧ್ಯವಾದಷ್ಟು ಅಂದಗೊಳಿಸುತ್ತಾ ಸನ್ಮಾರ್ಗದಲ್ಲಿ ಸಾಗಿದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
✒️ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕಸಾಪ ಕಾರ್ಕಳ ಘಟಕ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top