ಪುತ್ತೂರು : ಮೂಲತಃ ಕೃಷಿರಾದ ತುಳುವರ ಹಬ್ಬಗಳು ಕೃಷಿ ಆಧಾರಿತ ಹಿನ್ನಲೆಯಲ್ಲಿ ಆಚರಿಸಲಾಗುತ್ತಿದ್ದು, ಈ ಪೈಕಿ ಕೆಡ್ಡಸ ತುಳುವರ ಪೊನ್ನಿ ಅಥವಾ ಪುಯಿಂತೆಲ್ (ಫೆಬ್ರವರಿ) ತಿಂಗಳಿನ 27 ರಿಂದ ಕುಂಭ ಸಂಕ್ರಮಣದ ವರೆಗೆ ಅಂದರೆ ಮೂರು ದಿನ ಕೆಡ್ಡಸ ಆಚರಿಸಲ್ಪಡುತ್ತದೆ. ಶುರು ಕೆಡ್ಡಸ, ನಡುಕೆಡ್ಡಸ ಹಾಗೂ ಕಡೆಕೆಡ್ಡಸ ಎಂದು ಆಚರಣೆಗೊಳ್ಳುತ್ತದೆ.
ಏನಿದು ಕೆಡ್ಡಸ :
ನಮ್ಮ ಪೂರ್ವಿಕರು ಭೂಮಿಯನ್ನು ಹೆಣ್ಣೆಂದು ಪರಿಗಣಿಸಿ ಆರಾಧಿಸಿಕೊಂಡು ಬಂದಿದ್ದು, ಹೆಣ್ಣಾದ ಭೂಮಿತಾಯಿಯು ವರ್ಷಕ್ಕೆ ಮೂರುದಿನ ರಜಸ್ವಲೆಯಾಗುತ್ತಾಳೆ (ಋತುಮತಿ) ಎಂದು ನಂಬಿಕೆಯಿದೆ. ಈ ಹಿನ್ನಲೆಯಲ್ಲಿ ಕೆಡ್ಡಸವನು ಭೂಮಿತಾಯಿ ಮೀಯುವ ಹಬ್ಬವೆಂದು ಕರೆಯುತ್ತಾರೆ. ಋತುಮತಿ ಅಥವಾ ಪುಷ್ಪವತಿಯಾದ ಹೆಣ್ಣು ಹೆಂಗಸಾದಳು ಎಂದು ಅರ್ಥ. ಈ ಮೂಕ ಭೂಮಿತಾಯಿಯು ಫಲವತಿಯಾಗುವ ಅರ್ಹತೆಯನ್ನು ಪಡೆಯುತ್ತಾಳೆ ಆದ್ದರಿಂದ ಕೆಡ್ಡಸ ಹಬ್ಬವು ಫಲವಂತಿಕೆಯ ಸಂಕೇತವಾಗಿ ಆಚರಣೆಗೆ ಒಳಪಡುವ ತುಳುವರ ಪ್ರಮುಖ ಹಬ್ಬವಾಗಿದೆ.

ಕೆಡ್ಡಸ ಸಮಯದಲ್ಲಿ ಮೂಡಣ ದಿಕ್ಕಿನಿಂದ ವಿಲಕ್ಷಣವಾದ ಗಾಳಿ ಬೀಸುತ್ತದೆ. ಇದನ್ನು ಕೆಡ್ಡಸದ ಗಾಳಿ ಎಂದು ಕರೆಯುತ್ತಾರೆ. ಈ ಸಂದರ್ಭ ಋತುಸ್ನಾನ ಮುಗಿಸಿ ಹೆಣ್ಣು ಹೋಗಿ ಹೆಂಗಸಾಗಿರುವ ಭೂಮಿದೇವಿಯು ಈ ಗಾಳಿಯಿಂದ ಪುಳಕಗೊಂಡು ಫಲವತಿಯಾಗಲು ಸಜ್ಜಾಗುತ್ತಾಳೆಂದು ನಂಬಿಕೆ.
ಕೆಡ್ಡಸದ ಮೂರುದಿನ ಭೂಮಿದೇವಿ ರಜಸ್ವಲೆಯಾದ ಕಾರಣ ಆಕೆ ಸೂಕ್ಷಮತಿಯಾಗಿರುತ್ತಾಳೆ. ಆದ್ದರಿಂದ ಈ ದಿನಗಳಲ್ಲಿ ನೆಲ ಅಗೆಯುವುದು, ಊಳುವುದು, ಮರ ಕಡಿಯುವುದು ನಿಷಿದ್ಧ. ಕೃಷಿ ಕಾರ್ಯದಲ್ಲಿ ತೊಡಗಿದರೆ ಭೂಮಿದೇವಿಯು ನೋವನ್ನನುಭವಿಸಿ ಬಂಜೆಯಾಗುತ್ತಾಳೆ ಎಂದು ನಂಬಿರುವ ತುಳುವರು ಕೃಷಿ ಕೆಲಸವನ್ನು ಸಂಪೂರ್ಣ ಸ್ಥಗಿತಗೊಳಿಸುತ್ತಾರೆ.
ಶುರು ಕೆಡ್ಡಸ :
ಕೆಡ್ಡಸದಂದು ಸ್ತ್ರೀಯರು ಅಂಗಳದ ಮೂಲೆಯಲ್ಲಿ ನೆಲವನ್ನು ಸಾರಿಸಿ, ಗೋಮಯದಿಂದ ಶುದ್ಧೀಕರಿಸಿ ವಿಭೂತಿಯಿಂದ ಅಗಲವಾದ ವೃತ್ತವನ್ನು ರಚಿಸುತ್ತಾರೆ. ಅದರಲ್ಲಿ ಬಿಳಿಯ ಮಡಿಬಟ್ಟೆ, ಗೆಜ್ಜಕತ್ತಿ, ತೆಂಗಿನ ಸೋದೆಯ ಹಸಿಕಡ್ಡಿ ಇಟ್ಟು ಭೂಮಿದೇವಿಯ ಸಾನಿಧ್ಯ ರಚಿಸಿ ಪೂಜಿಸುತ್ತಾರೆ.

ಕೆಡ್ಡಸದ ಪ್ರಾರಂಭದ ದಿನ ಬೆಳಿಗ್ಗೆ ನವಧಾನ್ಯಗಳನ್ನು (ಹುರುಳಿ ಪ್ರಮುಖ) ಹುರಿದು ಪುಡಿಮಾಡಿ ಬೆಲ್ಲ, ಅರಳು, ತೆಂಗಿನ ಚೂರುಗಳನ್ನು ಬೆರೆಸಿ ಭೂಮಿದೇವಿಯ ಸಾನಿಧ್ಯದೆದುರು ತುದಿ ಬಾಳೆಯಲ್ಲಿ ಬಡಿಸಿ ನಮಿಸುತ್ತಾರೆ. ಇವು ಬಯಕೆಯ ಸಂಕೇತ. ನಂತರ ಇದನ್ನು ಮನೆಮಂದಿ ಹಂಚಿ ತಿನ್ನುತ್ತಾರೆ. ಇದನ್ನು ಕುಡುಅಡಿ ಅಥವಾ ನನ್ನೆರಿ ಎಂದು ಕರೆಯುತ್ತಾರೆ.
ನಡು ಕೆಡ್ಡಸ :
ನಡು ಕೆಡ್ಡಸದಂದು ಮೀನು-ಮಾಂಸ ತಿನ್ನುವ ಜಾತಿಯ ಗಂಡರು ಬೇಟೆಯಾಡಿ ಲಭಿಸಿದ ಮಾಂಸದ ಅಡುಗೆಯನ್ನು ಮನೆಮಂದಿಯೆಲ್ಲಾ ಸಂಭ್ರಮದಿಂದ ಸವಿಯುತ್ತಾರೆ. ಈ ದಿನ ಪುಂಡದ ಹಕ್ಕಿಯ ಬೇಟೆ ವಿಶೇಷ. ಕೆಡ್ಡಸದ ಸಮಯದಲ್ಲಿ ಪುಂಡದ ಹಕ್ಕಿಗೆ ಜ್ವರ ಬರುತ್ತದೆ ಎಂಬ ಪ್ರತೀತಿಯಿದೆ. ಜ್ವರಿದಿಂದ ಬಳಲುವ ಈ ಹಕ್ಕಿ ಕೆರೆಯ ಬದಿಯಲ್ಲಿ ಪೊದೆಗಳ ಬದಿಯಲ್ಲಿ ಸುಲಭವಾಗಿ ಸಿಗುತ್ತದೆಯಂತೆ.
ಕಡೆ ಕೆಡ್ಡಸ :
ಮೂರನೆಯ ದಿನ ಮುಂಜಾನೆ ಮುತ್ತೈದೆಯರು ಸ್ನಾನ ಮಾಡಿ ಏಳು ಲೋಳೆಸರದ ಎಲೆಗಳನ್ನು ಪಶ್ಚಿಮಕ್ಕೆ ತುದಿ ಬರುವಂತೆ ಸಾಲಾಗಿ ಇರಿಸಿ ದೀಪ, ಊರುಬತ್ತಿ ಹಚ್ಚಿ, ಮಣೆಯ ಮೇಲೆ ಎಣ್ಣೆ, ಸೀಗೆಪುಡಿ, ಅರಸಿನ ಕುಂಕುಮ, ಪಚ್ಚೆ ಹೆಸರು ಪುಡಿ, ವೀಳ್ಯದೆಲೆ ಇತ್ಯಾದಿಗಳನ್ನು ಭೂಮಿದೇವಿಯ ಸ್ನಾನಕ್ಕೋಸ್ಕರ ಇಡುತ್ತಾರೆ. ನಂತರ ಭೂಮಿದೇವಿಯ ಅಲಂಕಾರಕ್ಕಾಗಿ ಕನ್ನಡಿ, ಬಾಚಣಿಗೆ, ಕರಿಮಣಿಗಳನ್ನು ಇರಿಸುತ್ತಾರೆ. ಈ ಪ್ರಕಾರ ರಜಸ್ವಲೆಯಾದ ಭೂಮಿದೇವಿಯು ಮಿಂದು ಶುದ್ಧಳಾಗಿ ಫಲವತಿಯಾಗುತ್ತಾಳೆ ಎಂದು ತುಳುವರ ನಂಬಿಕೆ.

ಪ್ರಕೃತಿ ಮಾತೆಯಾದ ಭೂಮಿದೇವಿಯನ್ನು ಪೂಜಿಸುವ ಈ ಹಬ್ಬವು ಇಂದು ಸಂಪೂರ್ಣ ನಗಣ್ಯಕ್ಕೊಳಗಾಗಿದ್ದು, ಅತ್ಯಂತ ಖೇದಕರ ಸಂಗತಿ. ಇನ್ನಾದರೂ ನಮ್ಮ ಪೂರ್ವಿಕರು ಹಬ್ಬ-ಹರಿದಿನಗಳಿಗೆ ನೀಡಿದ ಮಹತ್ವದ ಹಿನ್ನಲೆಯನ್ನು ಅರಿತು ಅವುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಆಚರಿಸಲು ಪ್ರಯತ್ನ ಪಡೋಣ.