ಕೇಂದ್ರದ 98, ರಾಜ್ಯದ 150ಕ್ಕೂ ಹೆಚ್ಚು ನಾಯಕರು ಭಾಗಿ
ಬೆಂಗಳೂರು : ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಉಭಯ ಪಕ್ಷಗಳು ಅಬ್ಬರದ ಪ್ರಚಾರ ಕೈಗೊಂಡಿದೆ. ಅದರಂತೆ ಇದೀಗ ಏಪ್ರಿಲ್ 25, 26 ರಂದು ಬಿಜೆಪಿಯಿಂದ ವಿಶೇಷ ಮಹಾ ಪ್ರಚಾರ ಅಭಿಯಾನ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ‘ಬಿಜೆಪಿಯಿಂದ ರಾಜ್ಯದ 224 ವಿಧಾನಸಭೆ ಕ್ಷೇತ್ರದಲ್ಲಿ ವಿಶೇಷ ಮಹಾ ಪ್ರಚಾರ ಅಭಿಯಾನ ನಡೆಯಲಿದ್ದು, 98 ಕೇಂದ್ರದ ನಾಯಕರು ಮತ್ತು 150ಕ್ಕೂ ಹೆಚ್ಚು ರಾಜ್ಯದ ನಾಯಕರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಇನ್ನು ನಡೆಯಲಿರುವ ಈ ಅಭಿಯಾನದಲ್ಲಿ ನಮ್ಮದು ಕಾರ್ಯಕರ್ತರ ಪಾರ್ಟಿಯಾದ್ದರಿಂದ ಕಾರ್ಯಕರ್ತರಿಂದ ಮನೆ ಮನೆ ಭೇಟಿ, ರೋಡ್ ಶೋ, ಸಾರ್ವಜನಿಕರ ಜೊತೆ ಹಾಗೂ ಫಲಾನುಭವಿಗಳ ಜೊತೆ ಸಭೆ ಇರಲಿದೆ. ಈ ವೇಳೆ ರಾಷ್ಟ್ರದ ಪುರುಷರಿಗೆ ಮಾಲಾರ್ಪಣೆ, ಬೀದಿಗಳಲ್ಲಿ ಸಾರ್ವಜನಿಕ ಸಭೆ ಇರಲಿದ್ದು, ಅಭಿಯಾನದಲ್ಲಿ ಅಮಿತ್ ಶಾ, ನಡ್ಡಾ, ಅರುಣ್ ಸಿಂಗ್, ಯೋಗಿ ಆದಿತ್ಯನಾಥ್, ದೇವೇಂದ್ರ ಫಡ್ನವಿಸ್, ಅಣ್ಣಾಮಲೈ, ಸ್ಮೃತಿ ಇರಾನಿ, ಸಿ.ಟಿ. ರವಿ, ಯಡಿಯೂರಪ್ಪ, ಅಶೋಕ್, ಸೋಮಣ್ಣ, ಈಶ್ವರಪ್ಪ, ಶೋಭಾ ಕರಂದ್ಲಾಜೆ ಸೇರಿ ಅನೇಕ ನಾಯಕರು ಪಾಲ್ಗೊಳ್ಳಲಿದ್ದಾರೆ.
ಇನ್ನು ಭಾಗೀರಥಿ ಮುರುಳ್ಯ, ಗುರುರಾಜ್ ಗಂಟಿಹೊಳೆ, ಈಶ್ವರ ಠಾಕೂರ್ ಅಂತಹ ಸಾಮಾನ್ಯ ಕಾರ್ಯಕರ್ತರಿಗೂ ಟಿಕೆಟ್ ನೀಡಿದ್ದೇವೆ. ಅರುಣ್ ಕುಮಾರ್ ಪುತ್ತಿಲ ಬಂಡಾಯ ಸ್ಪರ್ಧೆ ವಿಚಾರದಲ್ಲಿ ಈಗಾಗಲೇ ಮಾತುಕತೆ ನಡೆಯುತ್ತಿದೆ. ಬಿಜೆಪಿ ವಿರುದ್ಧ ಸ್ಪರ್ಧೆ ಮಾಡುತ್ತಿರುವ ಬಂಡಾಯ ಅಭ್ಯರ್ಥಿಗಳ ಜೊತೆಗೆ ಮಾತುಕತೆ ಆಗುತ್ತಿದೆ ಎಂದರು.