ಜ್ವರ, ಶ್ವಾಸಕೋಶದ ಸೋಂಕು, ಧೂಳಿನ ಅಲರ್ಜಿ
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜ್ವರ ಮತ್ತು ಆಯಾಸದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಕುಮಾರಸ್ವಾಮಿ, “ಭಯಪಡುವ ಅಗತ್ಯವಿಲ್ಲ” ಮತ್ತು ವಿಶ್ರಾಂತಿ ಪಡೆದ ನಂತರ ಪ್ರಚಾರವನ್ನು ಪುನರಾರಂಭಿಸುತ್ತೇನೆ ಎಂದು ಹೇಳಿದ್ದಾರೆ. ಚುನಾವಣಾ ಪ್ರಚಾರದಲ್ಲಿ “ದಣಿವರಿಯದೆ” ತೊಡಗಿಸಿಕೊಂಡ ನಂತರ ಅವರಿಗೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ವೈದ್ಯರು ತಿಳಿಸಿದ್ದಾರೆ.ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಯಾರೂ ಕೂಡ ಆತಂಕಕ್ಕೆ ಒಳಗಾಗುವುದು ಬೇಡ ಶೀಘ್ರ ಗುಣಮುಖನಾಗುವೆ ಎನ್ನುವ ಸಂದೇಶ ನೀಡಿದ್ದಾರೆ.
ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ರಾಜ್ಯಾದ್ಯಂತ ಪಕ್ಷದ ಪ್ರಚಾರವನ್ನು ಜೆಡಿಎಸ್ ನಾಯಕ ಏಕಾಂಗಿಯಾಗಿ ಮುನ್ನಡೆಸುತ್ತಿದ್ದರು.
ಶ್ವಾಸಕೋಶದ ಸೋಂಕು ಮತ್ತು ಧೂಳಿನ ಅಲರ್ಜಿಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಭಾನುವಾರ ಸಂಜೆ ವೇಳೆಗೆ ಅವರನ್ನು ಬಿಡುಗಡೆ ಮಾಡಬಹುದು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಈ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಪಕ್ಷದ ಕಾರ್ಯಕರ್ತರು ಮತ್ತು ಕುಟುಂಬ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.