ಒಂದು ತಿಂಗಳ ಹುಡುಕಾಟದ ಬಳಿಕ ಸಿಕ್ಕಿದ ಖಲಿಸ್ಥಾನಿ ಪ್ರತ್ಯೇಕವಾದಿ ನಾಯಕ
ದೆಹಲಿ : ತಲೆಮರೆಸಿಕೊಂಡಿದ್ದ ಖಲಿಸ್ಥಾನಿ ಪ್ರತ್ಯೇಕವಾದಿ ಹೋರಾಟಗಾರ ಅಮೃತ್‌ಪಾಲ್ ಸಿಂಗ್ ಪೊಲೀಸರ ಮುಂದೆ ಶರಣಾಗಿದ್ದಾನೆ. ಆತನನ್ನು ವಶಕ್ಕೆ ಪಡೆದಿರುವ ಪಂಜಾಬ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹಲವು ದಿನಗಳಿಂದ ಅಮೃತ್‌ಪಾಲ್ ಸಿಂಗ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
ಅಮೃತ್‌ಪಾಲ್ ಸಿಂಗ್ ಪಂಜಾಬ್‌ನ ಮೋಗಾದಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಮಾರ್ಚ್ 18ರಿಂದ ಪೊಲೀಸರು ವಿಶೇಷ ತಂಡಗಳನ್ನು ರಚನೆ ಮಾಡಿಕೊಂಡು ಅಮೃತ್‌ಪಾಲ್ ಸಿಂಗ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಅಮೃತ್‌ಪಾಲ್ ಸಿಂಗ್‌ರನ್ನು ಪೊಲೀಸರು ವಶಕ್ಕೆ ಪಡೆದು ಅಸ್ಸಾಂಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಇದೆ. ಅಮೃತ್‌ಪಾಲ್ ಸಿಂಗ್‌ನ 8 ಬೆಂಬಲಿಗರನ್ನು ಈಗಾಗಲೇ ಬಂಧಿಸಲಾಗಿದ್ದು, ಅವರು ಅಸ್ಸಾಂನಲ್ಲಿದ್ದಾರೆ. ಆದ್ದರಿಂದ ಶರಣಾಗಿರುವ ಸಿಂಗ್‌ರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಮಾರ್ಚ್‌ನಲ್ಲಿ ಆತ ಸಿನಿಮೀಯ ರೀತಿಯಲ್ಲಿ ಪರಾರಿಯಾದ ಬಳಿಕ ಹುಡುಕಾಟಕ್ಕೆ ವಿಶೇಷ ತಂಡಗಳನ್ನು ರಚನೆ ಮಾಡಿ ಅಮೃತ್‌ಪಾಲ್ ಸಿಂಗ್ ಬಗ್ಗೆ ಸುಳಿವು ಕೊಟ್ಟವರಿಗೆ ಬಹುಮಾನ ಘೋಷಣೆ ಮಾಡಿತ್ತು. ಪಂಜಾಬ್ ಪೊಲೀಸರು ಸಿನಿಮಾ ಮಾದರಿಯಲ್ಲಿ ಸುಮಾರು 50 ಕಾರುಗಳಲ್ಲಿ ಅಮೃತ್‌ಪಾಲ್ ಸಿಂಗ್ ಹಿಂಬಾಲಿಸಿದ್ದರು. ಆದರೆ ಆತ ತಪ್ಪಿಸಿಕೊಂಡಿದ್ದ. ಅಮೃತ್ ಪಾಲ್ ಸಿಂಗ್ ಬಂಧಿಸಲು ವಿಫಲರಾದ ಪೊಲೀಸರನ್ನು ಪಂಜಾಬ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಅಮೃತ್‌ಪಾಲ್ ಸಿಂಗ್ ಖಾಸಗಿ ಭದ್ರತಾ ಸಿಬ್ಬಂದಿಯಾದ ತೇಜಿಂದರ್ ಸಿಂಗ್ ಗಿಲ್‌ನನ್ನು ಸಹ ಪೊಲೀಸರು ಬಂಧಿಸಿದ್ದರು.
ಪೊಲೀಸರ ಕೈಗೆ ಸಿಗದ ಅಮೃತ್‌ಪಾಲ್ ಸಿಂಗ್ ಅಜ್ಞಾತ ಸ್ಥಳದಿಂದ ಮಾರ್ಚ್ 30ರಂದು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ. ಸಿಖ್ ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಬೈಸಾಖಿಯಲ್ಲಿ ‘ಸರಬತ್ ಖಾಲಸಾ’ ಸಭೆ ಕರೆ ನೀಡಲಾಗಿದ್ದು, ಇದರಲ್ಲಿ ಪಾಲ್ಗೊಳ್ಳಲು ನಾನು ಉತ್ಸುಕನಾಗಿದ್ದೇನೆ ಎಂದು ಘೋಷಣೆ ಹೇಳಿದ್ದ.