ಸುಳ್ಯ: 2022-23ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಕಲಾ ವಿಭಾಗದಲ್ಲಿ ಭಾರತ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ವಂಶಸ್ಥೆ ಮಂಜುಶ್ರೀ ಕೆದಂಬಾಡಿ 591 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಮಂಜುಶ್ರೀ ಕೆದಂಬಾಡಿ ಸುಳ್ಯದ ಉಬೇರಡ್ಕದ ತೀರ್ಥರಾಮ ಕೆದಂಬಾಡಿ ಹಾಗೂ ಸಂಧ್ಯಾ ಕೆದಂಬಾಡಿ ದಂಪತಿ ಪುತ್ರಿ. ಕೆದಂಬಾಡಿ ರಾಮಯ್ಯ ಗೌಡರ ಐದನೇ ತಲೆಮಾರಿನ ಮಂಜುಶ್ರೀ ಆಗಿದ್ದು, ರಾಮಯ್ಯ ಗೌಡರು ಬ್ರಿಟಿಷರ ವಿರುದ್ಧ ನಾನಾ ತಂತ್ರಗಾರಿಕೆಯಿಂದ ಹೋರಾಡಿದ್ದರು. ಮಂಜುಶ್ರೀ ಸುಳ್ಯದ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಾರೆ.
ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲು ನಡೆದ ಅಮರ ಸುಳ್ಯ ದಂಗೆಯ ರೂವಾರಿ ಕೆದಂಬಾಡಿ ರಾಮಯ್ಯ ಆಗಿದ್ದರು. ಅವರೊಬ್ಬ ಹೋರಾಟಗಾರ ಮತ್ತು ಕ್ರಾಂತಿಕಾರಿಯಾಗಿದ್ದು, ಬ್ರಿಟಿಷರ ವಿರುದ್ಧ ಸುಳ್ಯದಿಂದ ರೈತರನ್ನು ಒಗ್ಗೂಡಿಸಿ 1837 ರಲ್ಲಿ ಅಮರ ಸುಳ್ಯ ದಂಗೆಯನ್ನು ಮುನ್ನಡೆಸಿದ್ದರು.