ಬಿಜೆಪಿಯಲ್ಲಿ ಸಮರ್ಥ ನಾಯಕರಿಗೆ ಪ್ರತಿಸ್ಪರ್ಧಿಯಾಗುವುದಿಲ್ಲ ಎಂದ ಸಂತೋಷ್
ಬೆಂಗಳೂರು : ನಾನು ಮುಖ್ಯಮಂತ್ರಿ ಹುದ್ದೆಯ ಸ್ಪರ್ಧಿಯಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮದವರ ಜತೆ ಮಾತನಾಡುವ ವೇಳೆ ಈ ವಿಚರ ಪ್ರಸ್ತಾವಿಸಿದ ಅವರು ಬಿಜೆಪಿಯಲ್ಲಿ ಹಲವು ಶಕ್ತ ನಾಯಕರಿದ್ದಾರೆ ಮತ್ತು ನಾನು ಅವರಿಗೆ ಪ್ರತಿಸ್ಪರ್ಧಿಯಾಗಲು ಬಯಸುವುದಿಲ್ಲ ಎಂದು ತಿಳಿಸಿದರು.
ಟಿಕೆಟ್ ಹಂಚಿಕೆಯಲ್ಲಿ ಸಂತೋಷ್ ವ್ಯಾಪಕವಾಗಿ ಪ್ರಭಾವ ಬೀರಿದ್ದಾರೆ ಮತ್ತು ಬಿಜೆಪಿಗೆ ಬಹುಮತ ಬಂದರೆ ಮುಖ್ಯಮಂತ್ರಿಯಾಗಲು ಅವರು ರಾಜ್ಯ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗುತ್ತಿದ್ದಾರೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿಯ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಎಲ್ ಸಂತೋಷ್ ವಿರುದ್ಧ ತೀಕ್ಷ್ಣ ಟೀಕೆ ಮಾಡಿ ತನಗೆ ಹುಬ್ಬಳ್ಳಿ-ಧಾರವಾಡ (ಕೇಂದ್ರ) ಟಿಕೆಟ್ ತಪ್ಪಲು ಸಂತೋಷ್ ಕಾರಣವೆಂದು ಆರೋಪಿಸಿದ್ದಾರೆ. ಕರ್ನಾಟಕದ ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂಬುದು ಮೋದಿ ಅಥವಾ ಅಮಿತ್ ಶಾ ಅವರಿಗೆ ತಿಳಿಯುತ್ತಿಲ್ಲ. ಸಂತೋಷ್ ಅವರು ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ಗ್ರೌಂಡ್ ರಿಯಾಲಿಟಿ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದರು.
ಜಗದೀಶ್ ಶೆಟ್ಟರ್ ಹೇಳಿಕೆ ಬಳಿಕ ಸಂತೋಷ್ ಅವರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂಬ ಸುದ್ದಿಯನ್ನು ತೇಲಿಬಿಡಲಾಗಿದೆ. ಉಡುಪಿ ಮೂಲದ ಬ್ರಾಹ್ಮಣ ಸಮುದಾಯದವರಾದ ಸಂತೋಷ್ ಅವರು ಲಿಂಗಾಯತ ನಾಯಕರನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಒಂದು ದಶಕದಿಂದೀಚೆಗೆ ಮುಖ್ಯಮಂತ್ರಿ ಹುದ್ದೆಗೆ ಸಂತೋಷ್ ಹೆಸರು ಹರಿದಾಡುತ್ತಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಅವರು ನಾನು ಯಾರಿಗೂ ಪ್ರತಿಸ್ಪರ್ಧಿ ಆಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಸಂತೋಷ್ ಅವರನ್ನು ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ವಿರೋಧಿ ಎಂದೂ ಹೇಳಲಾಗುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನಂತರದ ಎರಡನೇ ಅತ್ಯಂತ ಶಕ್ತಿಶಾಲಿ ಹುದ್ದೆಯನ್ನು ಸಂತೋಷ್ ಹೊಂದಿದ್ದಾರೆ.