ದೈನಂದಿನ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಎಚ್ಚರಿಕೆ
ದೆಹಲಿ : ವಿಧಾನಸಭೆ ಚುನಾವಣೆ ನಡೆಯುತ್ತಿರುವ ಕರ್ನಾಟಕ ಸೇರಿ ಎಂಟು ರಾಜ್ಯಗಳಿಗೆ ಕೊರೊನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಪತ್ರ ಬರೆದಿದೆ.
ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂಬಂಧ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕರ್ನಾಟಕ ಸೇರಿ 8 ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಎಂಟು ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಸಾಕ್ಷಿಯಾಗುತ್ತಿರುವ ಈ ರಾಜ್ಯಗಳಲ್ಲಿ ಆಸ್ಪತ್ರೆ ಮೂಲಸೌಕರ್ಯ ಸುಧಾರಿಸುವುದು ಹಾಗೂ ಕಣ್ಗಾವಲು ಕ್ರಮಗಳನ್ನು ಹೆಚ್ಚಿಸಬೇಕೆಂದು ತಿಳಿಸಿದ್ದಾರೆ.
ಕರ್ನಾಟಕ, ತಮಿಳುನಾಡು, ದಿಲ್ಲಿ, ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಕೇರಳ ಹಾಗೂ ಹರ್ಯಾಣಕ್ಕೆ ಪತ್ರ ಬರೆದಿರುವ ಭೂಷಣ್ ಕೊರೊನಾ ದೂರವಾಗಿಲ್ಲ, ಸೋಂಕು ಹರಡುವುದನ್ನು ನಿಯಂತ್ರಿಸುವುದು ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 66,170 ಇದೆ. ದೈನಂದಿನ ಪಾಸಿಟಿವ್ ದರವು ಶೇ. 5.09ಕ್ಕೆ ತಲುಪಿದೆ. ವಾರದ ಪಾಸಿಟಿವ್ ದರ ಶೇ. 5.33 ರಷ್ಟು ಇದೆ. ಹೆಚ್ಚು ಪಾಸಿಟಿವ್ ಪ್ರಕರಣಗಳ ಕಂಡು ಬರುತ್ತಿರುವ ಪ್ರದೇಶಗಳ ಮೇಲೆ ಕೇಂದ್ರೀಕರಿಸಲು ಭೂಷಣ್ ಸಲಹೆ ನೀಡಿದ್ದಾರೆ.
ಆಸ್ಪತ್ರೆಯ ಸನ್ನದ್ಧತೆಯನ್ನು ಖಾತ್ರಿಪಡಿಸಿಕೊಳ್ಳುವುದರ ಜತೆಗೆ ಅಗತ್ಯ ಔಷಧಗಳು, ಸಲಕರಣೆಗಳ ಸಾಕಷ್ಟು ಸರಬರಾಜು ನಿರ್ವಹಿಸಬೇಕು. INSACOG ನೆಟ್‌ವರ್ಕ್ ಆಫ್ ಲ್ಯಾಬೋರೇಟರಿಗಳ ಮೂಲಕ ಸಂಪೂರ್ಣ ಜೀನೋಮಿಕ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾದ ಕೋವಿಡ್-19-ಪಾಸಿಟಿವ್ ಮಾದರಿಗಳ ಸಂಖ್ಯೆಯನ್ನು ಹೆಚ್ಚಿಸಿ, ವಿಶೇಷವಾಗಿ ಸಮುದಾಯದಲ್ಲಿ ಪತ್ತೆಯಾದ ಪ್ರಕರಣಗಳ ಬಗ್ಗೆ ನಿಗಾವಹಿಸಬೇಕಂದು ಹೇಳಿದ್ದಾರೆ.