ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಗುರುವಾರ ಬೃಹತ್ ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಸಿದರು.
ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಬೃಹತ್ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರೊಂದಿಗೆ ದೇವಸ್ಥಾನದ ವಠಾರದಿಂದ ಹೊರಟು ಮುಖ್ಯರಸ್ತೆಯಾಗಿ ಬಸ್ ನಿಲ್ದಾಣದ ತನಕ ಸಾಗಿ ಅಲ್ಲಿಂದ ಕೋರ್ಟ್ ರಸ್ತೆಯಾಗಿ ಕಿಲ್ಲೇ ಮೈದಾನದಲ್ಲಿ ಸಮಾಪನಗೊಂಡಿತು. ಬಳಿಕ ಕಿಲ್ಲೇ ಮೈದಾನದಲ್ಲಿ ಬಿಜೆಪಿ ಸಮಾವೇಶ ನಡೆಯಿತು.
ಕೇಸರಿ ರಂಗು :
ಬೃಹತ್ ಮೆರವಣಿಗೆಯಲ್ಲಿ ಬಿಜೆಪಿ ಮುಖಂಡರಿಂದ ಹಿಡಿದು ಬಹುತೇಕ ಕಾರ್ಯಕರ್ತರು ಕೇಸರಿ ಪೇಟ, ಶಾಲುಗಳನ್ನು ಧರಿಸಿರುವುದು ಇಡೀ ನಗರ ಮೆರವಣಿಗೆಗೆ ಕೇಸರಿ ರಂಗು ತಂದಿತು.
ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ನಟಿ ಶೃತಿ, ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಭಾಗೀರಥಿ ಮುರುಳ್ಯ, ಡಾ.ಎಂ.ಕೆ.ಪ್ರಸಾದ್ ಅವರು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿ ಮತದಾರರತ್ತ ಕೈಬೀಸುತ್ತಿದ್ದುದು ಬಿಜೆಪಿ ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ಮೂಡಿಸಿತು.