ದಾನ ಪಡೆಯಲು ಸೇರಿದ ಜನಜಂಗುಳಿಯಿಂದಾಗಿ ನೂಕುನುಗ್ಗಲು
ಸನಾ : ಯೆಮೆನ್ ದೇಶದ ರಾಜಧಾನಿ ಸನಾದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ 85 ಜನರು ಸಾವಿಗೀಡಾಗಿದ್ದಾರೆ. ಶಾಲೆಯಲ್ಲಿ ಏರ್ಪಡಿಸಿದ್ದ ಜಕಾತ್ ಕಾರ್ಯಕ್ರಮದಲ್ಲಿ ದಾನ ಪಡೆಯಲು ಸೇರಿದ್ದ ಜನಜಂಗುಳಿಯಿಂದಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.
85 ಮಂದಿ ಸಾವಿಗೀಡಾಗಿ 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದುರ್ಘಟನೆ ಅಲ್ಲಿನ ಕಾಲಮಾನ ಪ್ರಕಾರ ಇಂದು ಬೆಳಗ್ಗೆ ಸಂಭವಿಸಿದೆ.
ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ಶವಗಳು ರಾಶಿ ಬಿದ್ದಿರುವುದು ಕಾಣಿಸುತ್ತದೆ.
ಜನಜಂಗುಳಿ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದಾಗ ಒಂದು ಗುಂಡು ವಿದ್ಯುತ್ ತಂತಿಗೆ ತಗಲಿ ಸ್ಫೋಟ ಸಂಭವಿಸಿದೆ. ಈ ಸ್ಫೋಟವನ್ನು ನೋಡಿ ಗಾಬರಿಯಾದ ಜನ ಓಡಲು ತೊಡಗಿದಾಗ ನೂಕುನುಗ್ಗಲು ಸಂಭವಿಸಿದೆ. ಹೌಥಿ ಬಂಡುಕೋರರ ಹೋರಾಟದಿಂದ ನಲುಗಿ ಹೋಗಿರುವ ಯೆಮೆನ್ನಲ್ಲಿ ಇತ್ತೀಚೆಗಿನ ವರ್ಷದಲ್ಲಿ ಸಂಭವಿಸಿದ ಭೀಕರ ದುರಂತ ಇದು.