ಆಡಳಿತ ವಿರೋಧಿ ಅಲೆ ಪ್ರಭಾವ ಕಡಿಮೆ ಮಾಡಲು ಬಿಜೆಪಿ ತಂತ್ರಗಾರಿಕೆ
ರಾಜ್ಯಕ್ಕೆ ಬರಲಿದ್ದಾರೆ ಅಮಿತ್ ಶಾ, ಯೋಗಿ ಆದಿತ್ಯನಾಥ್, ಸ್ಮೃತಿ ಇರಾನಿ…
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಏ.27 ರಂದು ರಾಜ್ಯದ ಕೆಲವೆಡೆ ಚುನಾವಣಾ ಪ್ರಚಾರ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ರಾಜ್ಯಕ್ಕೆ ಆಗಮಿಸಿ ಚುನಾವಣಾ ತಯಾರಿ ಬಗ್ಗೆ ಮಹತ್ವದ ಚರ್ಚೆಗಳನ್ನು ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಸಮಾವೇಶಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.
ರಾಜ್ಯದಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಮೋದಿಯನ್ನು ಆದಷ್ಟು ಬೇಗ ಪ್ರಚಾರ ಕಣಕ್ಕಿಳಿಸಬೇಕೆಂದು ಬಿಜೆಪಿ ಬಯಸುತ್ತಿದೆ. ಏ.27 ರಿಂದ ತೊಡಗಿ ಇಡೀ ಕರ್ನಾಟಕದಲ್ಲಿ ಮೋದಿ ಪರವಾದ ಅಲೆ ಎಬ್ಬಿಸುವ ಸಲುವಾಗಿ ಹಲವು ಸಮಾವೇಶ ಮತ್ತು ರೋಡ್ ಶೋ ಹಮ್ಮಿಕೊಳ್ಳಲು ಬಿಜೆಪಿ ಬಯಸಿದೆ. ಹೀಗಾಗಿ ಏ.27ರಿಂದಲೇ ರೋಡ್ ಶೋ ಪ್ರಾರಂಭಿಸಲು ಬಿಜೆಪಿ ಹೈಕಮಾಂಡ್ ಬಯಸಿದೆ. ರಾಜ್ಯದಲ್ಲಿ ಚುನಾವಣೆ ಮುಗಿಯುವವರೆಗೂ ಮೋದಿ ಮತ್ತು ಅಮಿತ್ ಶಾ ರಾಜ್ಯಕ್ಕೆ ನಿಯಮಿತವಾಗಿ ಭೇಟಿ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಈಗಾಗಲೇ ರಾಜ್ಯದಲ್ಲಿ ಠಿಕಾಣಿ ಹೂಡಿದ್ದಾರೆ. ಬುಧವಾರ ಹುಬ್ಬಳ್ಳಿಯಲ್ಲಿ ಪಕ್ಷದ ನಾಯಕರ ಜತೆ ಮಹತ್ವದ ಮಾತುಕತೆ ನಡೆಸಿದ್ದು, ಪಕ್ಷವನ್ನು ತೊರೆದು ಕಾಂಗ್ರೆಸ್‌ನಿಂದ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲೇಬೇಕು ಎಂದು ವರಿಷ್ಠರಿಗೆ ಸೂಚನೆ ನೀಡಿದ್ದಾರೆ. ಹುಬ್ಬಳ್ಳಿಯಿಂದ ಶಿಗ್ಗಾಂವಿಗೆ ತೆರಳಿದ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ನಾಮಪತ್ರ ಸಲ್ಲಿಸಲು ಸಾಥ್ ನೀಡಿದರು. ಚಿತ್ರ ನಟ ಸುದೀಪ್ ಕೂಡ ಜತೆಯಾದರು.
ಏ.27 ರಂದು ನಡೆಯುವ ಮೋದಿಯ ಬೃಹತ್ ಸಮಾವೇಶದ ಸ್ಥಳವನ್ನು ಇನ್ನೂ ಅಂತಿಮಗೊಳಿಸದಿದ್ದರೂ, ಮೋದಿ ಭಾಷಣವನ್ನು ರಾಜ್ಯದಾದ್ಯಂತ ಐದು ಸಾವಿರ ಕಡೆಗಳಲ್ಲಿ ಪ್ರಸಾರ ಮಾಡಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಶುಕ್ರವಾರ ಅಖಾಡಕ್ಕಿಳಿಯಲಿರುವ ಅಮಿತ್ ಶಾ ದೇವನಹಳ್ಳಿಯ ವಿಜಯಪುರದಲ್ಲಿ ರೋಡ್‌ಶೋ ನಡೆಸಲಿದ್ದು, ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಪ್ರಮುಖ ನಾಯಕರ ಜತೆ ಮಹತ್ವದ ಚರ್ಚೆ ನಡೆಸುವ ಸಾಧ್ಯತೆ ಇದೆ. ಚುನಾವಣೆಗೆ ಮುನ್ನ ಅವರು ನಾಲ್ಕೈದು ಬಾರಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಬಿಜೆಪಿ ಈಗಾಗಲೇ ಪಕ್ಷದ 40 ಸ್ಟಾರ್ ಪ್ರಚಾರಕರ ಹೆಸರನ್ನು ಬಿಡುಗಡೆ ಮಾಡಿದೆ. ಜೆ.ಪಿ. ನಡ್ಡಾ, ಯೋಗಿ ಆದಿತ್ಯನಾಥ್, ಸ್ಮೃತಿ ಇರಾನಿ ಸೇರಿದಂತೆ ಕೇಂದ್ರದ ಹಲವು ನಾಯಕರು ಬರಲಿದ್ದಾರೆ.