ಮಾಜಿ ಶಾಸಕ ಬಾವಾಗೆ ಕೊನೆಗೂ ಸಿಗಲಿಲ್ಲ ಟಿಕೆಟ್-ಬಂಡಾಯದ ಸುಳಿವು
ಕಾರ್ಕಳ : ಭಾರಿ ಕುತೂಹಲ ಕೆರಳಿಸಿದ್ದ ಮಂಗಳೂರು ಉತ್ತರ ಕ್ಷೇತ್ರದ ಟಿಕೆಟನ್ನು ಕಾಂಗ್ರೆಸ್ ಕೊನೆಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉದ್ಯಮಿ ಇನಾಯತ್ ಅಲಿಗೆ ನೀಡಿದೆ. ಕೊನೆಯ ಕ್ಷಣದವರೆಗೂ ರಹಸ್ಯವಾಗಿಟ್ಟಿದ್ದ ಹೆಸರನ್ನು ಕಾಂಗ್ರೆಸ್ ವರಿಷ್ಠರು ನಿನ್ನೆ ರಾತ್ರೋರಾತ್ರಿ ಘೋಷಿಸಿದ ಪಟ್ಟಿಯಲ್ಲಿ ಪ್ರಕಟಿಸಿದ್ದಾರೆ.
ಮಂಗಳೂರು ಉತ್ತರದ ಕಾಂಗ್ರೆಸ್ ಟಿಕೆಟ್ಗಾಗಿ ಮಾಜಿ ಶಾಸಕ ಮೊಯಿದ್ದಿನ್ ಬಾವಾ ಮತ್ತು ಇನಾಯತ್ ಅಲಿ ನಡುವೆ ತೀವ್ರ ಪೈಪೋಟಿಯಿದ್ದ ಕಾರಣ ಕೊನೆಯವರೆಗೂ ಕಾಂಗ್ರೆಸ್ ವರಿಷ್ಠರಿಗೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿತ್ತು.
ಟಿಕೆಟ್ ಆಕಾಂಕ್ಷಿಯಾಗಿದ್ದ ಅಲಿ ಸುಮಾರು ಎರಡು ವರ್ಷದಿಂದ ತಯಾರಿ ಮಾಡಿಕೊಂಡು ಕ್ಷೇತ್ರದಲ್ಲಿ ಓಡಾಡುತ್ತಿದ್ದರು.
ಮೊಯಿದ್ದಿನ್ ಬಾವಾಗೆ ನಿನ್ನೆಯೇ ಟಿಕೆಟ್ ಕೈತಪ್ಪುವ ಸುಳಿವು ಇತ್ತು. ಈ ಹಿನ್ನೆಲೆಯಲ್ಲಿ ಅವರು ತನ್ನ ಬೆಂಬಲಿಗರ ಜತೆ ನಿನ್ನೆ ಇಡೀ ದಿನ ಸಭೆ, ಸಮಾಲೋಚನೆ ನಡೆಸಿದ್ದು, ಟಿಕೆಟ್ ಸಿಗದಿದ್ದರೆ ಪಕ್ಷೇತ್ರನಾಗಿ ಸ್ಪರ್ಧಿಸಿ ಬಂಡಾಯದ ಬಾವುಟ ಹಾರಿಸುವ ತಯಾರಿ ನಡೆಸಿದ್ದಾರೆ.
ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಬಾವಾ ನಾಮಪತ್ರ ಹಾಕಿದರೆ ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಬಂಡಾಯ ಎದುರಿಸುವುದು ನಿಶ್ಚಿತ.
ಕಾಂಗ್ರೆಸ್ ಹಣದಾಸೆಗಾಗಿ ನನಗೆ ಟಿಕೆಟ್ ತಪ್ಪಿಸಿದೆ ಎಂದಿರುವ ಬಾವಾ ಇಂದು ಚೊಕ್ಕಬೆಟ್ಟವಿನಲ್ಲಿರುವ ಮನೆಯಲ್ಲಿ ಬೆಂಬಲಿಗರ ಸಭೆ ಕರೆದಿದ್ದಾರೆ. ಆ ಬಳಿಕ ತೀರ್ಮಾನ ಪ್ರಕಟಿಸಲಿದ್ದಾರೆ.