ರಾಜ್ಯದಲ್ಲಿ ಗುಜರಾತ್‌ ಮೋಡೆಲ್‌ ಅನುಷ್ಠಾನ : ಬಿಜೆಪಿಯಿಂದ 73 ಹೊಸ ಅಭ್ಯರ್ಥಿಗಳು ಕಣಕ್ಕೆ

ಪುತ್ತೂರು : ರಾಜ್ಯ ಬಿಜೆಪಿಯಲ್ಲಿ ಈ ಸಲ ಹೊಸ ಮುಖಗಳಿಗೆ, ಯುವಕರಿಗೆ ಹೆಚ್ಚು ಮನ್ನಣೆ ಸಿಕ್ಕಿದೆ. ಬಿಜೆಪಿ ಬರೋಬ್ಬರಿ 73 ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಪ್ರಯೋಗ ಮಾಡಿದೆ. ಇದು ಕಳೆದ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ಪ್ರಯೋಗದ ಫಲ. ಅಲ್ಲಿ ಹಳಬರನ್ನು ಸಾರಾಸಗಟು ಬದಿಗೆ ಸರಿಸಿ ಹೊಸಬರಿಗೆ ಅವಕಾಶ ನೀಡಲಾಗಿತ್ತು. ಇದರ ಫಲವಾಗಿ ಗುಜರಾತಿನಲ್ಲಿ ಬಿಜೆಪಿ ಹಿಂದೆಂದಿಗಿಂತಲೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದು ದಾಖಲೆ ಮಾಡಿದೆ. ಈಗ ಕರ್ನಾಟಕದಲ್ಲೂ ಇದೇ ಗುಜರಾತ್‌ ಮೋಡೆಲ್‌ ಅನುಷ್ಠಾನವಾಗುತ್ತಿರುವುದು ನಿಚ್ಚಳವಾಗಿ ಕಾಣಿಸುತ್ತಿದೆ.
ಈಗ ಬಿಜೆಪಿಯಲ್ಲಿ ಹಿರಿಯರಿಗಿಂತ ಕಿರಿಯರಿಗೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿದೆ. ಈ ಮೂಲಕ ಬಿಜೆಪಿ ಈ ಸಲದ ಚುನಾವಣೆಯಲ್ಲಿ ತನ್ನ ಭವಿಷ್ಯವನ್ನು ಪಣಕ್ಕೊಡ್ಡಿದೆ. ಎಲ್ಲ ಸಾಂಪ್ರದಾಯಿಕ ನಾಯಕರನ್ನು ಬದಿಗೆ ಸರಿಸಿ, ಹೊಸ ಮುಖಗಳಿಗೆ ಮನ್ನಣೆ ನೀಡಿದೆ. ಇದರಿಂದ ಪಕ್ಷದಲ್ಲಿ ಉಂಟಾಗಿರುವ ಬಂಡಾಯ ಕಡಿಮೆಯೇನಲ್ಲ. ಪ್ರಬಲ ನಾಯಕರನ್ನು ಬಿಜೆಪಿ ಕಳೆದುಕೊಂಡಿದೆ. ಆದರೂ ಬಿಜೆಪಿ ಹೈಕಮಾಂಡ್‌ ಮಾತ್ರ ಇದಕ್ಕೆಲ್ಲ ಜಗ್ಗುತ್ತಿಲ್ಲ.
ಐದಾರು ಬಾರಿ ಸತತವಾಗಿ ಆರಿಸಿ ಬರುತ್ತಿರುವ ಹಿರಿಯ ಶಾಸಕರನ್ನು ಬಿಟ್ಟು ಹೊಸಬರನ್ನು ಅಲ್ಲಿ ಕೂರಿಸಿದೆ. ಇದನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಹಲವರು ಧಿಕ್ಕರಿಸಿ ಕಮಲ ಬಿಟ್ಟು ಕೈ ಹಿಡಿದಿದ್ದಾರೆ. ಆದರೆ, ಮಾಜಿ ಸಿಎಂ ಕೆ.ಎಸ್. ಈಶ್ವರಪ್ಪ, ಮಾಜಿ ಸಿಎಂ ಯಡಿಯೂರಪ್ಪ, ಹಾಲಾಡಿ ಶ್ರೀನಿವಾಸ ಶೆಟ್ಟರಂತಹ ನಾಯಕರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ವಯಸ್ಸಿನ ಕಾರಣಕ್ಕೆ ಹಲವರನ್ನು ದೂರವಿಟ್ಟರೆ ಮತ್ತೆ ಕೆಲವರನ್ನು ಕಿರಿಯರಿಗೆ ಅವಕಾಶ ನೀಡಲು ಬದಿಗೆ ಸರಿಸಲಾಗಿದೆ.

ವ್ಯಕ್ತಿಗಿಂತ ಪಕ್ಷ ದೊಡ್ಡದು
ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಗುಜರಾತ್ ಚುನಾವಣಾ ಮಾಡೆಲ್‌ ಅನ್ನು ಜಾರಿಗೊಳಿಸಿದೆ. ಕಳೆದ ಗುಜರಾತ್ ಚುನಾವಣೆಯಲ್ಲಿ ಹಿರಿಯ ನಾಯಕರು, ಮಾಜಿ ಸಿಎಂಗಳಿಗೆ ಟಿಕೆಟ್ ನೀಡದೇ ಹೊಸಬರಿಗೆ ಮಣೆ ಹಾಕಲಾಗಿತ್ತು. ಇದು ಯಶಸ್ವಿ ಕೂಡ ಆಗಿತ್ತು. ಬಿಜೆಪಿಗೆ ಹೊಸ ನೀರು ಹರಿದು ಬಂದಂತೆ ಯುವ ನಾಯಕರ ಪಡೆ ನಿರ್ಮಾಣವಾಯಿತು. ಹೊಸ ಅಭ್ಯರ್ಥಿಗಳು ಚುನಾವಣೆಯನ್ನು ಗೆದ್ದು, ವಿಧಾನಸಭೆ ಪ್ರವೇಶಿಸಿದರು. ಇದನ್ನೇ ಕರ್ನಾಟಕದಲ್ಲೂ ಜಾರಿಗೊಳಿಸುತ್ತಿದೆ. ಆದರೆ ಇದರಿಂದಾಗಿ ದೊಡ್ಡ ಬಂಡಾಯವನ್ನೇ ಎದುರಿಸುತ್ತಿದೆ.
ಈ ಎಲ್ಲದರ ಹಿಂದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಾಸ್ಟರ್ ಮೈಂಡ್ ಕೆಲಸ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಾಜ್ಯ ರಾಜಕಾರಣದಲ್ಲಿ ಹೊಸಬರಿಗೆ ಅವಕಾಶ ನಿಡಬೇಕು. ವ್ಯಕ್ತಿಗಿಂತ ಪಕ್ಷಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಗಬೇಕು ಎಂಬ ಅಂಶದಲ್ಲಿ ಬಿ.ಎಲ್ ಸಂತೋಷ್ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಹಿರಿಯರನ್ನು ರಾಜಕೀಯದಿಂದ ದೂರವಿಡಲಾಗುತ್ತಿದೆ.

ಬಿಜೆಪಿ ತೆಗೆದುಕೊಳ್ಳುತ್ತಿರುವ ನಿರ್ಧಾರ ಈ ಬಾರಿ ಕೆಲಸ ಮಾಡದೇ ಇರಬಹುದು. ಕಾಂಗ್ರೆಸ್ ಸೇರಿರುವ ಬಿಜೆಪಿಯ ಹಿರಿಯ, ಪ್ರಭಾವಿ ನಾಯಕರು ಬಿಜೆಪಿಯ ಮತಗಳನ್ನು ಕಾಂಗ್ರೆಸ್‌ಗೆ ತೆಗೆದುಕೊಂಡು ಹೋಗಬಹುದು. ಆದರೆ, ಭವಿಷ್ಯದಲ್ಲಿ ಬಿಜೆಪಿಯ ಪ್ರಯೋಗಕ್ಕೆ ಜಯ ಸಿಗಬಹುದು. ಹಳಬರನ್ನು ಬಿಟ್ಟು ಹೊಸ ಅಭ್ಯರ್ಥಿ ಪಕ್ಷದಿಂದ ಸ್ವರ್ಧಿಸಿದರೆ ಪಕ್ಷ ಮುಖ್ಯವಾಗುತ್ತದೆ. ಅದೇ ಐದಾರು ಬಾರಿ ಶಾಸಕರಾದವರನ್ನು ಕಣಕ್ಕಿಳಿಸಿದರೆ ಅದು ಅವರ ವ್ಯಕ್ತಿತ್ವದ ಜಯ ಎಂಬ ಹೆಸರು ಬರುತ್ತದೆ. ಇಲ್ಲಿ ಪಕ್ಷ ಗೌಣವಾಗುತ್ತದೆ ಎಂಬುದನ್ನು ಹೈಕಮಾಂಡ್ ಗಮನಿಸಿದೆ. ಈ ಎಲ್ಲ ಕಾರಣಕ್ಕೆ ಬಿಜೆಪಿ ಹಿರಿಯರಿಗಿಂತ ಕಿರಿಯರಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದೆ.







































 
 

ಕೆಳವರ್ಗದವರಿಗೆ ಮಣೆ
ಈ ಸಲ ಮೇಲ್ವರ್ಗದ ನಾಯಕರಿಗೆ ಮಣೆ ಹಾಕದೆ ಕೆಳ ವರ್ಗದ ಮುಖಂಡರನ್ನು ಬಿಜೆಪಿ ಮುನ್ನೆಲೆಗೆ ತಂದಿದೆ. ಇದು ಕಾಂಗ್ರೆಸ್‌ ಪಕ್ಷದ ಮೂಲ ಮತದಾರರನ್ನು ಸೆಳೆಯುವ ಕಾರ್ಯತಂತ್ರದ ಭಾಗವಾಗಿದೆ ಎಂದು ಹೇಳಲಾಗುತ್ತಿದೆ. ಮೇಲ್ವರ್ಗದ ಮತಗಳನ್ನೇ ಹೆಚ್ಚು ಆಶ್ರಯಿಸಿದ್ದ ಬಿಜೆಪಿ ಈಗ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವತ್ತ ಚಿತ್ರ ಹರಿಸಿದೆ. ಈ ಕ್ರಾಂತಿಕಾರಿ ಬದಲಾವಣೆ ‘ಸೋಶಿಯಲ್‌ ಎಂಜನಿಯರಿಂಗ್‌’ನ ಭಾಗವಾಗಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top