ಮುಂಬಯಿ : ಮಹಾರಾಷ್ಟ್ರ ಭೂಷಣ-2022 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 8 ಮಂದಿ ಬಿಸಿಲಿನ ಝಳದಿಂದ ಮೃತಪಟ್ಟಿದ್ದಾರೆ. ಅಲ್ಲದೆ 35ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜ್ಯ ಸರ್ಕಾರ ಕಾರ್ಯಕ್ರಮ ಆಯೋಜಿಸಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಮಾಜ ಸುಧಾರಕ ಅಪ್ಪಾ ಸಾಹೇಬ್ ಅವರಿಗೆ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ದುರಂತದ ಸುದ್ದಿ ತಿಳಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ ನವಿ ಮುಂಬಯಿಯ ಎಂಜಿಎಂ ಆಸ್ಪತ್ರೆಗೆ ದಾಖಲಾದವರ ಆರೋಗ್ಯ ವಿಚಾರಿಸಿದರು.
ಬಿಸಿಲಿನ ಝಳದಿಂದ 7-8 ಮಂದಿ ಸಾವನ್ನಪ್ಪಿದ್ದಾರೆ ಎಂದು ಶಿಂಧೆ ನಂತರ ಮಾಧ್ಯಮದವರಿಗೆ ತಿಳಿಸಿದ್ದಾರೆ. ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದ ಅವರು ಇತರ ರೋಗಿಗಳ ಆರೋಗ್ಯ ವೆಚ್ಚವನ್ನು ಸರಕಾರ ಭರಿಸಲಿದೆ ಎಂದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ ಕಾಂಗ್ರೆಸ್ ಮುಖ್ಯ ವಕ್ತಾರ ಅತುಲ್ ಲೋಂಧೆ, ಇದು ಸರ್ಕಾರಿ ಕಾರ್ಯಕ್ರಮ. ಅಲ್ಲಿ ಭಾಗವಹಿಸಿದವರ ಸುರಕ್ಷತೆಗೆ ಕ್ರಮಕೈಗೊಳ್ಳುವುದು ಆಯೋಜಕರ ಕರ್ತವ್ಯ. ಆದರೆ ಸರ್ಕಾರ ಈ ಬಗ್ಗೆ ಗಮನಹರಿಸಿದ ಕಾರಣ ದುರಂತ ಸಂಭವಿಸಿದೆ ಎಂದು ವಿವರಿಸಿದ್ದಾರೆ. ಅಪ್ಪಾ ಸಾಹೇಬ್ ಅವರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದರೂ ತಾಳ್ಮೆಯಿಂದ ಕುಳಿತಿದ್ದ ಜನರಿಗೆ ಗೃಹ ಸಚಿವ ಅಮಿತ್ ಶಾ ಶ್ಲಾಘನೆ ವ್ಯಕ್ತಪಡಿಸಿದ್ದರು.