ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ವಿಜೃಂಭಣೆಯಿಂದ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ವೈಭವವನ್ನು ಪಡೆಯುತ್ತಿದೆ. ಭಾನುವಾರ ರಾತ್ರಿ ದೂರದ ಬಲ್ನಾಡಿನಿಂದ ವರ್ಷಂಪ್ರತಿ ಬರುವ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನವಾಯಿತು.
ರಾತ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಲಿ ಉತ್ಸವ ನಡೆದು ದೇವಸ್ಥಾನದ ಹೊರಾಂಗಣದಲ್ಲಿ ಬಲಿ ಉತ್ಸವ ಆಗುತ್ತಿದ್ದಂತೆ ರಾತ್ರಿ 11 ಗಂಟೆ ಸುಮಾರಿಗೆ ಬಲ್ನಾಡಿನಿಂದ ಶ್ರೀ ದೈವಗಳ ಕಿರುವಾಳು ಆಗಮಿಸಿ ಶ್ರೀ ಮಹಾಲಿಂಗೇಶ್ವರನ್ನು ಎದುರುಗೊಂಡು ಮಾತುಕತೆ ನಡೆಸಿ ಬಳಿಕ ಶ್ರೀ ದೇವರ ಬಲಿಯೊಂದಿಗೆ ದೇವಸ್ಥಾನದ ಒಳಾಂಗಣವನ್ನು ಪ್ರವೇಶಿಸಿತು. ಈ ಸಂದರ್ಭದಲ್ಲಿ ಕಿಕ್ಕಿರಿದ ಭಕ್ತಾದಿಗಳು ಈ ದೃಶ್ಯವನ್ನು ಕಂಡು ಪುನೀತರಾದರು. ರಾತ್ರಿ ಜೋಡು ತೆಪ್ಪದಲ್ಲಿ ಶ್ರೀ ದೇವರು ತೆರಳಿ ನೂತನವಾಗಿ ನಿರ್ಮಿಸಿದ ಶಿಲಾಮಯ ಕಟ್ಟೆಯಲ್ಲಿ ಕೆರೆ ಆಯನ, ತೆಪ್ಪೋತ್ಸವ ನಡೆಯಿತು.
ಲಕ್ಷಾಂತರ ಭಕ್ತರಿಗೆ ಅನ್ನಸಂತರ್ಪಣೆ :
ಏ.10 ರಿಂದ ಜಾತ್ರೋತ್ಸವ ಆರಂಭಗೊಂಡಿದ್ದು, ನಿತ್ಯ ಅನ್ನದಾನ ಸೇವೆ ನಡೆದಿದೆ. ಈ ವರೆಗೆ ಲಕ್ಷಾಂತರ ಭಕ್ತರಿಗೆ ಅನ್ನದಾಸೋಹ ನಡೆಸಲಾಗಿದೆ. ಅನ್ನದಾಸೋಹಕ್ಕಾಗಿ ಭಕ್ತರಿಗೆ ಸರತಿ ಸಾಲಿನ ವ್ಯವಸ್ಥೆಗಾಗಿ ಗೇಟ್‌ಗಳನ್ನುಅಳವಡಿಸಿ ಅಚ್ಚುಕಟ್ಟಾಗಿ ಮಾಡಲಾಗಿತ್ತು.
ಇಂದು ಬ್ರಹ್ಮರಥೋತ್ಸವ, ಬೆಡಿ ಉತ್ಸವ :
ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮರಥೋತ್ಸವ ಸೋಮವಾರ ರಾತ್ರಿ ಜರಗಲಿದೆ. ಇದಕ್ಕಾಗಿ ಈಗಾಗಲೇ ರಥ ಸಿದ್ಧಗೊಂಡಿದ್ದು, ಲಕ್ಷಾಂತರ ಭಕ್ತರು ವೀಕ್ಷಿಸಲಿದ್ದಾರೆ. ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆಯಾಗಲಿದೆ. ಸಂಜೆ ಶ್ರೀ ದೇವರ ಬಲಿ ಹೊರಟು ಉತ್ಸವ, ಬಳಿಕ ರಾತ್ರಿ ಬ್ರಹ್ಮರಥೋತ್ಸವ ನಡೆಯಲಿದೆ. ರಥೋತ್ಸವದ ಮೊದಲು ಪುತ್ತೂರು ಬೇಡಿ ಎಂದೇ ಪ್ರಸಿದ್ಧಿಯಾದ ಸುಡುಮದ್ದು ಪ್ರದರ್ಶನಗೊಳ್ಳಲಿದೆ. ರಾತ್ರಿ ಶ್ರೀ ದಂಡನಾಯಕ, ಉಳ್ಳಾಲ್ತಿ ದೈವಗಳು ಬಂಗಾರ್ ಕಾಯರ್‌ಕಟ್ಟೆಗೆ ಸವಾರಿ ನಡೆಸಿ ಅಲ್ಲಿಂದ ಶ್ರೀ ದೈವಗಳ ಭಂಡಾರವನ್ನು ಬೀಳ್ಕೊಡಲಿದೆ. ಇಂದಿನ ಬ್ರಹ್ಮರಥೋತ್ಸವ ನ್ಯೂಸ್ ಪುತ್ತೂರ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ.