ಕೋಲಾರ : ರಾಜ್ಯದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ ಆಗಲಿ, ಆ ಸ್ಥಾನ ನನಗೆ ಬೇಡ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಅಷ್ಟೇ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ಜಿಲ್ಲೆಯಲ್ಲಿ ರಾಜ್ಯ ಕಾಂಗ್ರೆಸ್ ಆಯೋಜಿಸಿದ ಜೈ ಭಾರತ ಸಮಾವೇಶದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಾರಾಗಬೇಕೆಂದು ಕಾಂಗ್ರೆಸ್ ನಾಯಕರು ತಲೆ ಕೆಡಿಸಿಕೊಳ್ಳಬೇಡಿ. ರಾಜ್ಯದ ಜನರ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳಿ. ಪಕ್ಷಕ್ಕೆ ಬಹುಮತ ಬಂದಾಗ ಸಿಎಂ ಬಗ್ಗೆ ಶಾಸಕರು ನಿರ್ಧರಿಸುತ್ತಾರೆ. ಡಬಲ್ ಇಂಜಿನ್ ಸರ್ಕಾರ ಅಂತಾರೆ, ಹೊಸ ಯೋಜನೆ ತಂದಿಲ್ಲ. ಹಳೇ ಡಬ್ಬಿಗೆ ಹೊಸ ಇಂಜಿನ್ ಕಲರ್ ಹಚ್ಚುತ್ತಿದ್ದಾರೆ. ಈ ಬಿಜೆಪಿ ಸರ್ಕಾರ ತೆಗೆಯದಿದ್ದರೆ ಯಾವುದೇ ಅಭಿವೃದ್ಧಿ ಆಗಲ್ಲ ಎಂದರು
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮೂಲಕ ಅನೇಕ ಜನರನ್ನು ಭೇಟಿಯಾಗಿ ಜನರ ದುಃಖ ದುಮ್ಮಾನ ಕೇಳಿದ್ದಾರೆ ಎಂದು ಹೇಳಿದ ಖರ್ಗೆ, ಕೋಲಾರ ಜಿಲ್ಲೆ ಬಂಗಾರದ ಜಿಲ್ಲೆ. ಮೂರು ಬಂಗಾರದ ಗಣಿಗಳು ಕರ್ನಾಟಕದಲ್ಲೇ ಇವೆ. ಇಡೀ ದೇಶದ ಬಂಗಾರ ಇರೋದು ಸಿಗುವುದು ಇಲ್ಲಿಂದಲೇ. ಕೋಲಾರದಲ್ಲಿ ಬರಗಾಲಕ್ಕೆ ತುತ್ತಾದ ಜಿಲ್ಲೆ ನೀರಾವರಿಗಾಗಲಿ ಕೃಷಿಗಾಗಲಿ ಅಷ್ಟೊಂದು ಮಹತ್ವ ಕೊಡುತ್ತಾ ಇರಲಿಲ್ಲ. ಅನೇಕ ಶಾಸಕರು ಒಗ್ಗಟ್ಟಾಗಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕೆರೆಗಳನ್ನು ತುಂಬಿಸಿದ್ದು ಕಾಂಗ್ರೆಸ್ ಪಕ್ಷ. ಲಕ್ಷಾಂತರ ಎಕರೆ ಇದರಿಂದ ನೀರಾವರಿ ಆಗುತ್ತಿದೆ ಎಂದರು.
ರೇಷ್ಮೆಗೂ, ಬಂಗಾರಕ್ಕೂ ಪ್ರಸಿದ್ಧವಾಗಿರುವ ಜಿಲ್ಲೆಯಿಂದ ಕಾಂಗ್ರೆಸ್ ಪ್ರಚಾರ ಪ್ರಾರಂಭ ಮಾಡಿದ್ದೇವೆ. ಇಲ್ಲಿಂದ ಯಶಸ್ಸು ಖಚಿತವಾಗಲಿದೆ ಎಂದು ಹೇಳಿದ ಖರ್ಗೆ, 40 ಪರ್ಸೆಂಟ್ ಸರ್ಕಾರದ ಮೇಲೆ ಜನ ರೊಚ್ಚಿಗೆದ್ದು ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡುತ್ತಾರೆ. ಸ್ವಯಂ ಪ್ರೇರಿತರಾಗಿ ಜನ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿರುವುದು ನಮಗೆ ಲಾಭ ಇದೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಕೈ ಕೆಳಗೆ ಕೆಲಸ ಮಾಡುವುದನ್ನು ಇಷ್ಟಪಡುತ್ತೇನೆ. ಖರ್ಗೆ ಅವರು ಏನು ಬಯಸುತ್ತಾರೋ ಅದನ್ನು ಈಡೇರಿಸುವ ಕೆಲಸ ನನ್ನದು ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದರು. ಇತ್ತ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ ಸಿದ್ದರಾಮಯ್ಯ ಅವರು, ಯಾರು ಸಿಎಂ ಆಗಬೇಕೆಂದು ಹೈಕಮಾಂಡ್ ತೀರ್ಮಾನಿಸಲಿದೆ. ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದಿದ್ದರು. ಮಾತ್ರವಲ್ಲದೆ, ರಾಜ್ಯ ರಾಜಕಾರಣಕ್ಕೆ ಖರ್ಗೆ ಆಗಮನದ ಬಗ್ಗೆ ಕಾಂಗ್ರೆಸ್ನಲ್ಲಿ ಆಂತರಿಕ ಚರ್ಚೆಗಳು ಆರಂಭವಾಗಿದ್ದವು. ಇದೀಗ ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರೇ ಸಿಎಂ ಸ್ಥಾನವನ್ನು ನಿರಾಕರಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.