ಅನರ್ಹತೆಗೆ ಕಾರಣವಾಗಿದ್ದ ಸ್ಥಳದಿಂದಲೇ ಹೋರಾಟ ಶುರು
ಕೋಲಾರ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದಿನಿಂದ ಎರಡು ದಿನ ರಾಜ್ಯದಲ್ಲಿ ಚುನಾವಣೆ ಪ್ರಚಾರ ಮಾಡಲಿದ್ದು, ಇಂದು ಕೋಲಾರದಲ್ಲಿ ಸತ್ಯಮೇವ ಜಯತೆ, ಜೈ ಭಾರತ್ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ. ಕೋಲಾರ ಹೊರವಲಯದ ಟಮಕ ಬಳಿ ಸಮಾವೇಶ ಆಯೋಜನೆ ಮಾಡಲಾಗಿದೆ. ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನರು ಈ ಸಮಾವೇಶಕ್ಕೆ ಬರಲು ಕಾಂಗ್ರೆಸ್ ವ್ಯವಸ್ಥೆ ಮಾಡಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ರಾಷ್ಟ್ರ ಹಾಗೂ ರಾಜ್ಯದ ಎಲ್ಲಾ ನಾಯಕರು ಭಾಗಿಯಾಗಲಿದ್ದಾರೆ. 11.30ಕ್ಕೆ ಸಮಾವೇಶ ಆರಂಭವಾಗಲಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಬೆಳಗ್ಗೆ 11.50ಕ್ಕೆ ಬೆಂಗಳೂರು ಏರ್ಪೋರ್ಟ್ಗೆ ರಾಹುಲ್ ಗಾಂಧಿ ಆಗಮಿಸಲಿದ್ದು ಮಧ್ಯಾಹ್ನ 12.25ಕ್ಕೆ ಕೋಲಾರಕ್ಕೆ ಕಾಲಿಡಲಿದ್ದಾರೆ. ಕೋಲಾರದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಿ ಮಧ್ಯಾಹ್ನ 2.40ಕ್ಕೆ ಕೋಲಾರದಿಂದ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ. ಸಂಜೆ 5 ಗಂಟೆವರೆಗೆ ಶಾಂಗ್ರಿಲಾ ಹೋಟೆಲ್ನಲ್ಲಿ ವಿಶ್ರಾಂತಿ ಪಡೆದು ಸಂಜೆ 5.30ಕ್ಕೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ಬೀದಿಬದಿ ವ್ಯಾಪಾರಿಗಳು, ಪೌರಕಾರ್ಮಿಕರ ಜೊತೆ ಸಂವಾದ ನಡೆಸಲಿದ್ದಾರೆ. ಸಂಜೆ 6.45ಕ್ಕೆ ಇಂದಿರಾ ಗಾಂಧಿ ಭವನ ಉದ್ಘಾಟಿಸಲಿದ್ದಾರೆ. ನಾಳೆ ಬೀದರ್ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು ಭಾಲ್ಕಿ, ಹುಮ್ನಾಬಾದ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ರಾಹುಲ್ ಗಾಂಧಿಯವರ ಜೈ ಭಾರತ್ ಸಮಾವೇಶ ಮೂರು ಬಾರಿ ಮೂಂದೂಡಿದ ಬಳಿಕ ಈಗ ಕಾರ್ಯಕ್ರಮ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಕೋಲಾರ ಹೊರವಲಯದ ಟಮಕ ಬಳಿ ನಿರ್ಮಾಣ ಮಾಡಲಾಗಿರುವ ಬೃಹತ್ ವೇದಿಕೆ ನಿರ್ಮಾಣವಾಗಿದೆ. ಬೃಹತ್ತಾದ ಜರ್ಮನ್ ಟೆಂಟ್ ಹಾಕಲಾಗಿದೆ. ಸಮಾವೇಶದ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿಯವರು ರಾಹುಲ್ ಗಾಂಧಿಯವರ ಮಾತನ್ನು ಅಡಗಿಸಲು ಆರಂಭ ಮಾಡಿದಲ್ಲಿಂದಲೆ ಹೋರಾಟ ಮಾಡಲಾಗುತ್ತಿದೆ. ಗಾಂಧಿ ಕುಟುಂಬದ ತ್ಯಾಗ, ಬಲಿದಾನ ದೇಶಕ್ಕೆ ಒಂದು ದೊಡ್ಡ ಶಕ್ತಿ ಅದಕ್ಕಾಗಿ ಪಕ್ಷ ಭೇದ ಮರೆತು ಲಕ್ಷಕ್ಕೂ ಅಧಿಕ ಜನರು ಸಏರುವ ನಿರೀಕ್ಷೆ ಎಂದಿದ್ದಾರೆ.