ಭಾರತದ ಮಹಾ ಕ್ರಾಂತಿಕಾರಿಗಳ ಪರಿಚಯ ಮಾಡಿದ ಅದ್ಭುತ ಕೃತಿ
ನಾನು ಒಂಬತ್ತನೇ ತರಗತಿಯಲ್ಲಿ ಇದ್ದಾಗ 600 ಪುಟಗಳ ಆ ಪುಸ್ತಕ ನನ್ನ ಕೈ ಸೇರಿತ್ತು. ನನ್ನ ತೀವ್ರ ಓದಿನ ಹುಚ್ಚಿನ ದಿನಗಳು ಅವು. ಬಾಬು ಕೃಷ್ಣಮೂರ್ತಿ ಎಂಬ ಮಹಾನ್ ಲೇಖಕ ಈ ಪುಸ್ತಕವನ್ನು ಎಷ್ಟೊಂದು ಅದ್ಭುತವಾಗಿ ಬರೆದಿದ್ದರು ಎಂದರೆ ಅದನ್ನು ಓದಿದ ನಂತರ ನನ್ನ ಬದುಕಿನ ರೀತಿಯೇ ಬದಲಾಯ್ತು. ರಾಷ್ಟ್ರಪ್ರೇಮ ನನ್ನ ರಕ್ತದ ಒಳಗೆ ಇಂಜೆಕ್ಟ್ ಮಾಡಿದ ಪುಸ್ತಕ ಅದು.
ಇದು ಚಂದ್ರಶೇಖರ್ ಆಜಾದ್ ಕತೆ
1974ರಲ್ಲಿ ಈ ‘ಅಜೇಯ’ ಪುಸ್ತಕವನ್ನು ಪತ್ರಕರ್ತರಾದ ಬಾಬು ಕೃಷ್ಣಮೂರ್ತಿ ಬರೆಯುವ ಮೊದಲು ಭಾರತೀಯರಿಗೆ ಭಗತ್ ಸಿಂಗ್ ಬಹಳ ದೊಡ್ಡ ಸ್ವಾತಂತ್ರ್ಯ ಹೋರಾಟಗಾರ ಎಂದು ಗೊತ್ತಿತ್ತು. ಆದರೆ ಆತನಿಗೆ ಪ್ರೇರಣೆ ನೀಡಿದ ಮತ್ತು ಮಾರ್ಗದರ್ಶಕನಾಗಿ ನಿಂತಿದ್ದ ಚಂದ್ರಶೇಖರ್ ಆಜಾದ್ ಅವರ ಹೋರಾಟದ ಕತೆ ಹೆಚ್ಚಿನವರಿಗೆ ತಿಳಿದಿರಲಿಲ್ಲ. ಹಾಗೆಯೇ ಭಗತ್ ಸಿಂಗ್ ಅವರ ಜತೆಗೆ ಇತರ ಕ್ರಾಂತಿಕಾರಿ ಹೋರಾಟಗಾರರಾದ ರಾಮಪ್ರಸಾದ್ ಬಿಸ್ಮಿಲ್, ಅಶ್ಫಾಕ್ ಉಲ್ಲಾ ಖಾನ್, ರಾಜೇಂದ್ರನಾಥ್ ಲಾಹಿರಿ, ರೋಷನ್ ಸಿಂಗ್, ಬಟುಕೇಶ್ವರ ದತ್ತ ಇಂತಹವರ ಬಗ್ಗೆ ಭಾರತೀಯರಿಗೆ ಹೆಚ್ಚು ಗೊತ್ತಿರಲಿಲ್ಲ. ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಸೇರಿ ಹೇಗೆ ಬ್ರಿಟಿಷ್ ಸರಕಾರವನ್ನು ನಡುಗಿಸಿದ್ದರು ಅನ್ನುವುದು ಆ ಕಾಲದ ರೋಚಕ ಅಧ್ಯಾಯವೇ ಆಗಿತ್ತು.
ಪ್ರತಿಯೊಂದು ಘಟನೆಯನ್ನು ಎಳೆ ಎಳೆಯಾಗಿ ಓದುಗರ ಮುಂದೆ ದಾಖಲೆಗಳ ಸಹಿತ ಇಡುತ್ತಾ ಲೇಖಕರು ಈ ಪುಸ್ತಕದ ನಿರೂಪಣೆ ಮಾಡಿದ ರೀತಿ ನಿಜಕ್ಕೂ ಅದ್ಭುತ. ಭಾರತದ ಸ್ವಾತಂತ್ರ್ಯ ಹೋರಾಟದ ಮೇಲೆ ನೂರಾರು ಜನಪ್ರಿಯ ಪುಸ್ತಕಗಳು ಬಂದಿವೆ. ಆದರೆ ಈ ‘ಅಜೇಯ’ ಪುಸ್ತಕದ ತೂಕವೇ ಬೇರೆ, ಘನತೆಯೇ ಬೇರೆ ಎಂಬ ಮಾತಿನಲ್ಲಿ ಯಾವ ಉತ್ಪ್ರೇಕ್ಷೆ ಕೂಡ ಇಲ್ಲ.
ಬಾಬು ಕೃಷ್ಣಮೂರ್ತಿ ಮಕ್ಕಳಿಗಾಗಿ ಬರೆದ ಪುಸ್ತಕ
ಕನ್ನಡ ಸಾಹಿತ್ಯದ ಈ ಅಪೂರ್ವ ಪುಸ್ತಕವನ್ನು ಹಲವು ವರ್ಷಗಳ ಅಧ್ಯಯನದ ನಂತರ ಬಾಬು ಕೃಷ್ಣಮೂರ್ತಿ ಬರೆದದ್ದು ನಾಡಿನ ಮಕ್ಕಳಿಗಾಗಿ. ಆದರೆ ಈ ಪುಸ್ತಕವನ್ನು ಎಲ್ಲ ವಯಸ್ಸಿನ ಓದುಗರೂ ಓದುತ್ತಾ ಅದರ ಪ್ರಭಾವಕ್ಕೆ ಒಳಗಾದರು. ರಕ್ತ ಬಿಸಿ ಮಾಡಿಕೊಂಡರು. ರಾಷ್ಟ್ರ ಸೇವೆಗೆ ಸಮರ್ಪಣೆ ಆದರು. ಭಾರತಕ್ಕೆ ಕೇವಲ ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ದೊರೆಯಿತು ಎಂಬ ಅರ್ಧ ಸತ್ಯವನ್ನು ನಂಬಿದ್ದ ನಮಗೆ ಸತ್ಯದರ್ಶನ ಮಾಡಿದ ಕೃತಿಯಿದು.
ಈ ಕೃತಿಗಾಗಿ ಲೇಖಕರು ಸಾವಿರಾರು ದಾಖಲೆಗಳನ್ನು ಒಟ್ಟು ಮಾಡಿದ್ದಾರೆ ಮತ್ತು ಇಡೀ ಭಾರತವನ್ನು ಹಲವು ಬಾರಿ ಸಂಚಾರ ಮಾಡಿದ್ದಾರೆ. ಆದರೆ ನಿರೂಪಣೆಗೆ ಬಂದಾಗ ಯಾವ ರೋಚಕತೆಯೂ ಕಡಿಮೆ ಆಗದ ಹಾಗೆ ಅವರು ನೋಡಿಕೊಂಡಿದ್ದಾರೆ. ಕ್ರಾಂತಿಕಾರಿಗಳ ರಕ್ತಸಿಕ್ತ ಸ್ವಾತಂತ್ರ್ಯ ಹೋರಾಟದ ಹಸಿಹಸಿ ಚಿತ್ರಣ ಈ ಪುಸ್ತಕದಲ್ಲಿ ಇರುವುದರಿಂದ ಅಜೇಯ ಯಾವ ಕಾಲಕ್ಕೂ ಸಲ್ಲುವ ಪುಸ್ತಕ.
ಆಜಾದ್ ಎಂಬ ನಿಜ ಅರ್ಥದ ಕ್ರಾಂತಿರತ್ನ
ಚಂದ್ರಶೇಖರ್ ಆಜಾದ್ ಎಂಬ ಸ್ವಾತಂತ್ರ್ಯದ ಕಿಡಿ ಭಾರತದ ಪುಣ್ಯಭೂಮಿಯಲ್ಲಿ ಹೇಗೆ ಬದುಕಿದ್ದರು? ತಾನು ಬದುಕಿದ್ದ 24 ವರ್ಷಗಳ ಕಿರು ಅವಧಿಯಲ್ಲಿ ಹೇಗೆ ಭೂಗತನಾಗಿದ್ದು ಕ್ರಾಂತಿಕಾರಿ ಚಟುವಟಿಕೆ ರೂಪಿಸಿದ್ದರು? ಬಾಲ್ಯದಲ್ಲಿ ಕೋರ್ಟಲ್ಲಿ ಬ್ರಿಟಿಷ್ ನ್ಯಾಯಾಧೀಶನು ‘ನೀನು ಯಾರು ಹುಡುಗ?’ ಎಂದು ಜೋರಾಗಿ ಕೇಳಿದಾಗ ‘ನಾನು ಆಜಾದ್ ‘ ಎಂದು ಗುಂಡು ಸಿಡಿದ ಹಾಗೆ ಘರ್ಜನೆ ಮಾಡಿದ್ದು, ಹದಿನಾರು ಛಡಿಯೇಟು ಶಿಕ್ಷೆಗೆ ಒಳಗಾದದ್ದು, ಮುಂದೆ ಎಂದಿಗೂ ಪೊಲೀಸರ ಕೈಗೆ ಸಿಗುವುದಿಲ್ಲ ಎಂದು ಬಾಲ್ಯದಲ್ಲಿಯೇ ಪ್ರತಿಜ್ಞೆ ಮಾಡಿದ್ದು, ಅದಕ್ಕೆ ಪೂರಕವಾಗಿ ಮುಂದೆ ಆಲ್ಫ್ರೆಡ್ ಪಾರ್ಕಿನಲ್ಲಿ ತನ್ನ ಹಣೆಗೆ ತಾನೇ ಗುಂಡು ಹೊಡೆದುಕೊಂಡು ಹುತಾತ್ಮ ಆದದ್ದು… ಈ ಎಲ್ಲ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಲೇಖಕರು ಅದ್ಭುತವಾಗಿ ಈ ಪುಸ್ತಕದಲ್ಲಿ ಬರೆಯುತ್ತಾ ಹೋಗಿದ್ದಾರೆ. ಈ ಬೃಹತ್ ಪುಸ್ತಕದಲ್ಲಿ ಭಾರತದ ಇತಿಹಾಸದ ಕ್ರಾಂತಿಯ ನೂರಾರು ಕಿಡಿಗಳನ್ನು ಪರಿಚಯ ಮಾಡಿದ ರೀತಿಗೆ ನೀವು ಖಂಡಿತ ಫಿದಾ ಆಗುತ್ತೀರಿ.
ಅಜೇಯ ಪುಸ್ತಕ ಬೀರಿದ ಪ್ರಭಾವ ಅದು ಅನನ್ಯ
ಈ ಪುಸ್ತಕ ಅದುವರೆಗೆ ಅನಾಮಿಕರಾಗಿ ಉಳಿದ ಸಾವಿರಾರು ಕ್ರಾಂತಿಕಾರಿಗಳ ಬದುಕನ್ನು ನಾಡಿನ ಯುವಜನತೆಗೆ ಪರಿಚಯ ಮಾಡಿತು. ಇತಿಹಾಸದ ಪಠ್ಯಪುಸ್ತಕದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ನೂರಾರು ಸಂಗತಿಗಳನ್ನು ತೆರೆದು ತೋರಿಸಿತು. ಅದನ್ನು ಓದಿದ ನೂರಾರು ಯುವಕರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ರಾಷ್ಟ್ರದ ಸೇವೆಗೆ ಹೊರಟರು. ಅನೇಕರು ಬ್ರಹ್ಮಚರ್ಯದ ದೀಕ್ಷೆ ಕೈಗೊಂಡರು. ರಾಷ್ಟ್ರಪ್ರೇಮದ ಹಲವು ಆಯಾಮಗಳ ಸೇವೆಯನ್ನು ಮಾಡಲು ತೊಡಗಿದರು.
ಈ ಪುಸ್ತಕ ಪ್ರಕಾಶನದ ಬೆನ್ನಿಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಆದಾಗ ಅದರ ಪ್ರತಿಭಟನೆಯ ಹೋರಾಟಕ್ಕೆ ಕೂಡ ಈ ಪುಸ್ತಕ ಪ್ರೇರಣೆ ನೀಡಿತು. ಭಾರತದ ಹಲವು ಭಾಷೆಗಳಿಗೆ ಈ ಪುಸ್ತಕ ಅನುವಾದ ಆಯಿತು. ಅನೇಕ ಯುವಕರು ಆಜಾದ್ ಬದುಕಿನ ಪ್ರೇರಣೆಯಿಂದ ವ್ಯಾಯಾಮ ಶಾಲೆಗಳನ್ನು ತೆರೆದರು. ಹಲವು ಹೆತ್ತವರು ತಮ್ಮ ಮಕ್ಕಳಿಗೆ ಅಜೇಯ ಎಂದು ಹೆಸರಿಟ್ಟರು. ಹೀಗೆ ಒಂದು ಪುಸ್ತಕವು ಯುವ ಸಮುದಾಯದ ಮೇಲೆ ಬೀರಿದ ಪ್ರಭಾವವು ಅದು ಬರೆದು ಮುಗಿಯುವುದೇ ಇಲ್ಲ.
ಚಂದ್ರಶೇಖರ್ ಆಜಾದ್ ಅವರ ಬದುಕಿನಂತೆ ತನ್ನ ಬದುಕಿನ ಬಹು ದೊಡ್ಡ ಭಾಗವನ್ನು ಅಗ್ನಿದಿವ್ಯಕ್ಕೆ ಲೇಖಕ ಬಾಬು ಕೃಷ್ಣಮೂರ್ತಿ ಅವರು ಒಡ್ಡಿಕೊಂಡ ಕಾರಣ ಮಾತ್ರ ಇಂತಹ ಪುಸ್ತಕವು ಹುಟ್ಟಿತು.
‘ಅಜೇಯ’ ಪುಸ್ತಕದ ಮರು ಓದಿಗೂ ಈ ಸಂದರ್ಭವು ಅವಕಾಶ ನೀಡಲಿ. ಜೈ ಹಿಂದ್.
✒️ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.