ಪುತ್ತೂರು: ಹಿಂದುತ್ವದ ಆಧಾರದಲ್ಲಿ ಭಾರತೀಯ ಜನತಾ ಪಾರ್ಟಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದೇನೆ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.
ಅವರು ಮುಕ್ರಂಪಾಡಿ ಸುಭದ್ರ ಕಲ್ಯಾಣ ಸಭಾಭವನದಲ್ಲಿ ಶನಿವಾರ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿ, ಕಾರ್ಯಕರ್ತರ ನೋವಿನ ಹಿಂದೆ ಇರಬೇಕು. ಅವರ ಪರವಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತುವುದರ ಜತೆಗೆ ಕ್ಷೇತ್ರದಲ್ಲಿ ಏನೆಲ್ಲಾ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎಂಬ ನಿಟ್ಟಿನಲ್ಲಿ ಸ್ಪರ್ಧಿಸುತ್ತಿದ್ದು, ಈಗಾಗಲೇ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದೇವೆ ಎಂದು ತಿಳಿಸಿದರು.
ಕಳೆದ 15 ವರ್ಷಗಳಿಂದ ಭಾರೆತೀಯ ಜನತಾ ಪಾರ್ಟಿಯಲ್ಲಿ ಕಾರ್ಯಕರ್ತನಾಗಿ, ಕ್ರಿಯಾಶೀಲನಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ. ಬೂತ್ ಮಟ್ಟದಿಂದ ತೊಡಗಿ ಗ್ರಾಪಂ, ತಾಪಂ, ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳು ಗೆಲುವು ಸಾಧಿಸುವಲ್ಲಿ ನನ್ನ ಪಾತ್ರ ಬಹುಮುಖ್ಯಾವಾಗಿದ್ದು, ಪಕ್ಷದ ಸಿದ್ಧಾಂತಕ್ಕೆ ಬದ್ಧನಾಗಿ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಅಲ್ಲದೆ ನರೇಂದ್ರ ಮೋದಿಯವರ ಆಶಯದಂತೆ ನಮೋ ಸಂಘಟನೆ ಕಟ್ಟಿ ಬಿಜೆಪಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡಿದ್ದೇನೆ ಎಂದು ಹೇಳಿದರು.
ಇತ್ತೀಚಿಗಿನ ಚುನಾವಣೆ ಟಿಕೇಟ್ ಹಂಚಿಕೆ ಸಂದರ್ಭ ಕೊನೆಯ ಕ್ಷಣದ ವರೆಗೂ ನನ್ನ ಪರ ಒಲವಿತ್ತು. ಕೊನೆಯ ಕ್ಷಣದಲ್ಲಿ ಟಿಕೇಟ್ ಕಥ ತಪ್ಪಿರುವುದು ಒಟ್ಟು ಟಿಕೇಟ್ ಹಂಚಿಕೆಯಲ್ಲಿ ಗೊಂದಲ ಉಂಟಾಗಿದೆ. ಇದಕ್ಕೂ ಮುಂಚೆ ಜಿಲ್ಲೆಯ ಎಲ್ಲಾ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದೆ. ಇದೀಗ ಕಾರ್ಯಕರ್ತರ, ಹಿರಿಯದ ಆಶಯದಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ವಿಶ್ವಾವ ನನಗಿದೆ. ಚುನಾವಣಾ ಪ್ರಕ್ರಿಯೆಗೆ ಇನ್ನು ಎರಡು ದಿನಗಳಲ್ಲಿ ಕಚೇರಿ ತೆರೆಯಲಾಗುವುದು. ಗೆಲುವು ಸಾಧಿಸಿದಲ್ಲಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಭರವಸೆ ನೀಡಿದರು.
ಏ.17 ರಂದು ದರ್ಬೆ ವೃತ್ತದಿಂದ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಅನಿಲ್, ಪ್ರವೀಣ್ ಶೆಟ್ಟಿ, ಮನ್ಮಥ ಶೆಟ್ಟಿ, ಪುಷ್ಪಾ, ಪ್ರಸನ್ನ ಮಾರ್ತ, ಮನೀಶ್, ಅವಿನಾಶ್ ಪೂಜಾರಿ, ಭೀಮ್ ಭಟ್ ಉಪಸ್ಥಿತರಿದ್ದರು.