ಪುತ್ತೂರು: ಪ್ರಜಾಪ್ರಭುತ್ವದ ಹಬ್ಬವನ್ನು ಒಗ್ಗಟ್ಟಾಗಿ ಆಚರಿಸಲು ನಾವು ಸಿದ್ಧರಾಗಿದ್ದೇವೆ. ಅಭಿವೃದ್ಧಿ ಕೆಲಸ, ಕಾರ್ಯಕರ್ತರ ಶ್ರಮ, ನಾಯಕರ ಪ್ರೋತ್ಸಾಹ ಮತವಾಗಿ ಪರಿವರ್ತನೆ ಆಗಲಿದೆ ಎಂದು ಆಶಾ ತಿಮ್ಮಪ್ಪ ಅವರ ಜೊತೆ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಜನರಧ್ವನಿಯಾಗಿ, ಮಹಿಳಾ ಮತದಾರರ ಪ್ರಾತಿನಿಧ್ಯವೆಂಬಂತೆ, ಪುತ್ತೂರು ತಾಲೂಕಿನ ಸೊಸೆ ಆಶಾ ತಿಮ್ಮಪ್ಪ ಅವರನ್ನು ಪಕ್ಷ ಆರಿಸಿದೆ. ಅವರನ್ನು 20000 ಮತಗಳ ಅಂತರದಿಂದ ಗೆಲುವು ಪಡೆದುಕೊಳ್ಳಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮಠಂದೂರು, ಆಶಾ ತಿಮ್ಮಪ್ಪ ಅವರ ಗೆಲುವಿಗೆ ಶ್ರಮಿಸಲಾಗುವುದು ಎಂದರು.
ಬಿಜೆಪಿ ಅನಿವಾರ್ಯ ಎಂದು ಜನರೇ ಹೇಳುತ್ತಿದ್ದಾರೆ. ಅಪಪ್ರಚಾರದ ನಡುವೆಯೇ ನಮ್ಮ ಪ್ರಚಾರದ ಕಾರ್ಯ ನಡೆಯುತ್ತಿದೆ. ನಾಳೆಯಿಂದಲೇ ಪ್ರತಿ ಬೂತಿಗೂ ಹೋಗಿ ಪ್ರಚಾರ ಕಾರ್ಯ ನಡೆಯಲಿದೆ ಎಂದರು.
35 ವರ್ಷದಿಂದ ಕಾರ್ಯಕರ್ತ:
ನನ್ನ ಕೆಲಸಗಳನ್ನು ಗಮನಿಸಿ 5 ವರ್ಷ ಶಾಸಕನಾಗಿ ಕೆಲಸ ನಿರ್ವಹಿಸಲು ಅವಕಾಶ. ಪಕ್ಷದ ತೀರ್ಮಾನದಂತೆ ಆಶಾ ತಿಮ್ಮಪ್ಪ ಅವರನ್ನು ಕಣಕ್ಕಿಳಿಸಲಾಗಿದೆ. ಅವರ ಪರವಾಗಿ ಕೆಲಸ ಮಾಡಲಾಗುವುದು.
ಹಿಂದುತ್ವದ ಆಧಾರದಲ್ಲಿ ಕೆಲಸ:
ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಎನ್.ಐ.ಎ. ತನಿಖೆಗೆ ನೀಡಲಾಗಿದೆ. ಗೋ ಸಾಗಾಟ – ಹತ್ಯೆಯನ್ನು ತಡೆಗಟ್ಟಲಾಗಿದೆ. ಕಾರ್ಯಕರ್ತರ ಮೇಲಿನ ಸುಳ್ಳು ಕೇಸುಗಳನ್ನು ಹಿಂಪಡೆಯಲಾಗಿದೆ. ಹೀಗೆ ಅನೇಕ ಹಿಂದು ಪರ ಕೆಲಸಗಳನ್ನು ಮಾಡಲಾಗಿದೆ. ಹಾಗಾಗಿ ಅಪಪ್ರಚಾರಗಳಿಗೆ ಜನರು ಕಿವಿಕೊಡುತ್ತಿಲ್ಲ. ಅಭಿವೃದ್ಧಿ ಕೆಲಸಗಳನ್ನು, ಹಿಂದು ಪರ ಕೆಲಸವನ್ನು ಜನರು ಗಮನಿಸಿದ್ದಾರೆ ಎಂದು ಮಠಂದೂರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಭ್ಯರ್ಥಿ ಆಶಾ ತಿಮ್ಮಪ್ಪ, ಸಾಜ ರಾಧಾಕೃಷ್ಣ ಆಳ್ವ, ಗೋಪಾಲಕೃಷ್ಣ ಹೇರಳೆ, ಅಪ್ಪಯ್ಯ ಮಣಿಯಾಣಿ, ಚನಿಲ ತಿಮ್ಮಪ್ಪ ಶೆಟ್ಟಿ, ಬೂಡಿಯಾರ್ ರಾಧಾಕೃಷ್ಣ ರೈ, ಕಿಶೋರ್ ಬೊಟ್ಯಾಡಿ, ಜೀವಂಧರ್ ಜೈನ್, ಜಯಂತಿ ನಾಯಕ್, ಆರ್.ಸಿ. ನಾರಾಯಣ್, ಸಹಜ್ ರೈ ಬಳಜ್ಜ ಉಪಸ್ಥಿತರಿದ್ದರು.