ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ಏ.16 ಹಾಗೂ 17 ರಂದು ವಾಹನದಟ್ಟಣಿ ಜಾಸ್ತಿಯಾಗುವ ಹಿನ್ನಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಹಾಗೂ ವಾಹನ ಪಾರ್ಕಿಂಗ್ ಗೆ ಸ್ಥಳ ಗುರುತಿಸಲಾಗಿದೆ ಎಂದು ಪುತ್ತೂರು ಸಂಚಾರ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.
ಏ.16 ಭಾನುವಾರ ಬಲ್ನಾಡಿನಿಂಡ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಿಂದ ಕಿರುವಾಳು ಆಗಮನ ಹಾಗೂ ಏ.17 ರ ಬ್ರಹ್ಮರಥೋತ್ಸವ ಇರುವುದರಿಂದ ಜನದಟ್ಟಣಿ ಜತೆಗೆ ವಾಹನದಟ್ಟಣಿ ಜಾಸ್ತಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಅಲ್ಲದೆ ನಿಗದಿಪಡಿಸಿದ ಸ್ಥಳದಲ್ಲೇ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಬೇಕಾದ್ದು ಕಡ್ಡಾಯವಾಗಿದೆ.
ಏ.16 ರಂದು ಕಿರುವಾಳು ಆಗಮನ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಸಂದರ್ಭದಲ್ಲಿ ಸಂಪ್ಯ ಕಡೆಯಿಂದ ಕಬಕ, ಮಂಗಳೂರು ಕಡೆಗೆ ಹೋಗುವ ವಾಹನಗಳು ದರ್ಬೆ ಅಶ್ವಿನಿ ವೃತ್ತ, ಬೆದ್ರಾಳ, ಸಾಲ್ಮರ, ಪಡೀಲ್ ಮೂಲಕ ಸಂಚರಿಸುವುದು. ಮಂಗಳೂರು, ವಿಟ್ಲ ಕಬಕ ಕಡೆಗಳಿಂದ ಬರುವ ವಾಹನಗಳು ಲಿನೆಟ್ ವೃತ್ತ, ಬೊಳುವಾರು ವೃತ್ತ, ಪಡೀಲ್, ಕೊಟೇಚಾ ಹಾಲ್ ಕ್ರಾಸ್, ಸಾಲ್ಮರ, ಎಪಿಎಂಸಿ ರಸ್ತೆಯಾಗಿ ದರ್ಬೆ ಅಶ್ವಿನಿ ವೃತ್ತವಾಗಿ ಸಂಚರಿಸುವುದು.
ಏ.16 ಹಾಗೂ 17 ರಂದು ಸಾರಿಗೆ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಂಜೆ 4 ರ ನಂತರ ಬಸ್ ನಿಲ್ದಾಣದಿಂದ ಹೊರಡುವ ಎಲ್ಲಾ ಸಾರಿಗೆ ಬಸ್ ಗಳು ಎಂಟಿ ರಸ್ತೆ ಮೂಲಕ ತೆರಳಿ, ಎಡಕ್ಕೆ ತಿರುಗಿ ಪರ್ಲಡ್ಕ ಬೈಪಾಸ್ ಮೂಲಕ ತೆರಳಬೇಕು. ಮಂಗಳೂರು ಕಡೆಯಿಂದ ಬರುವ ಎಲ್ಲಾ ಬಸ್ ಗಳು ಬೊಳುವಾರು-ಪಡೀಲ್-ಎಪಿಎಂಸಿ ಮೂಲಕ ಬಸ್ ನಿಲ್ದಾಣಕ್ಕೆ ಸಂಚರಿಸುವುದು. ಉಪ್ಪಿನಂಗಡಿ ಕಡೆಯಿಂದ ಬರುವ ಬಸ್ ಗಳು ಪಡೀಲ್-ಕೊಟೇಚಾ ಹಾಲ್-ಸಾಲ್ಮರ ಕ್ರಾಸ್, ಎಪಿಎಂಸಿ ಮೂಲಕ ಬಸ್ ನಿಲ್ದಾಣಕ್ಕೆ ಬರುವುದು. ಸುಳ್ಯ, ಮಡಿಕೇರಿ ಕಡೆಯಿಂದ ಬರುವ ಬಸ್ ಗಳು ಮುಖ್ಯರಸ್ತೆಯಿಂದ ಸಾಗಿ ಅರುಣಾ ಚಿತ್ರ ಮಂದಿರದ ಮೂಲಕ ಸಾಗಿ ಬಸ್ ನಿಲ್ದಾಣಕ್ಕೆ ಸಂಚರಿಸುವುದು.
ನೆಹರೂನಗರ, ಬೊಳುವಾರು ಕಡೆಗಳಿಂದ ಬರುವ ಆಟೋ ರಿಕ್ಷಾಗಳು ಮಯೂರ ಇನ್ ಲ್ಯಾಂಡ್ ಬಳಿ ಪ್ರಯಾಣಿಕರನ್ನು ಇಳಿಸಿ, ಉರ್ಲಾಂಡಿ ಕ್ರಾಸ್ ಮೂಲಕ ವಾಪಾಸು ಸಂಚರಿಸುವುದು. ದರ್ಬೆ ಕಡೆಯಿಂದ ಬರುವ ಆಟೋ ರಿ್ಕ್ಷಾಗಳು ಬಸ್ ನಿಲ್ದಾಣದ ಬಳಿ ಪ್ರಯಾಣಿಕರನ್ನು ಇಳಿಸಿ ವಾಪಾಸ್ ಸಂಚರಿಸುವುದು. ಪರ್ಲಡ್ಕ ಕಡೆಯಿಂದ ಬರುವ ರಿ್ಕ್ಷಾಗಳು ಕಿಲ್ಲೆ ಮೈದಾನದ ಬಳಿ ಪ್ರಯಾಣಿಕರನ್ನು ಇಳಿಸಿ ಸಂಚರಿಸುವುದು.
ವಾಹನ ಪಾರ್ಕಿಂಗ್ :
ಉಪ್ಪಿನಂಗಡಿ, ಬನ್ನೂರು ಕಡೆಯಿಂದ ಬರುವ ಭಕ್ತರ ವಾಹನಗಳಿಗೆ ಎಪಿಎಂಸಿ ಆವರಣ, ಕೊಂಬೆಟ್ಟು ಸರಕಾರಿ ಪ್ರೌಢಶಾಲಾ ಮೈದಾನ, ಕೊಂಬೆಟ್ಟು ಬಂಟರಭವನ, ನೆಲ್ಲಿಕಟ್ಟೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಾರ್ಕ್ ಮಾಡುವುದು, ಸಂಪ್ಯ, ಸುಳ್ಯ, ಬೆಟ್ಟಂಪಾಡಿ, ಪಾಣಾಜೆ, ಪರ್ಲಡ್ಕ ಪುರುಷರಕಟ್ಟೆಯಿಂದ ಬರುವ ವಾಹನಗಳಿಗೆ ತೆಂಕಿಲ ಗೌಡ ಸಮುದಾಯ ಭವನ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಕಿಲ್ಲೆ ಮೈದಾನದಲ್ಲಿ ಪಾರ್ಕ್ ಮಾಡುವುದು. ವಿಟ್ಲ, ಕಬಕ, ನೆಹರುನಗರದಿಂದ ಬರುವ ವಾಹನಗಳು ಜೈನಭವನದ ಬಳಿ, ದರ್ಶನ್ ಹಾಲ್ ಪಕ್ಕದ ಖಾಲಿ ಜಾಗದಲ್ಲಿ ಪಾರ್ಕ್ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.