ಆರೋಗ್ಯಧಾರಾ – ಅಡುಗೆಗೆ ಬಳಸುವ ವಿವಿಧ ಎಲೆಗಳ ಆರೋಗ್ಯದ ಗುಟ್ಟು

ಕರಾವಳಿ ಪ್ರದೇಶದ ಸಂಸ್ಕೃತಿ, ಕಲೆಗಳನ್ನು ನೋಡುವುದೇ ಒಂದು ಚಂದ. ಕರಾವಳಿ ಪ್ರದೇಶ ವಿಶಿಷ್ಟ ಖಾದ್ಯಗಳಿಗೂ ಪ್ರಸಿದ್ಧವಾಗಿದೆ. ಅಡುಗೆಗೆ ತರಕಾರಿ ಹಣ್ಣುಗಳನ್ನು ಮಾತ್ರ ಬಳಸದೆ ವಿವಿಧ ರೀತಿಯ ಎಲೆಗಳನ್ನು ಹೂಗಳನ್ನು ಬಳಸಿ ಅಡುಗೆ ಮಾಡುವುದು ಇಲ್ಲಿನ ವಿಶೇಷ. ಇದು ಬೇರೆ ಯಾವ ಪ್ರದೇಶದಲ್ಲೂ ನೋಡಲು ಸವಿಯಲು ಸಿಗುವುದು ಅಪರೂಪ.
ಎಲೆಯಲ್ಲಿ ಬೇಯಿಸಿದ ಆಹಾರದ ರುಚಿಯೇ ಅದ್ಭುತ. ಎಲೆಯಲ್ಲಿ ಮಾಡುವ ಊಟ ಆಹಾ ಎಂಥ ಪರಿಮಳ ಎಂಥ ರುಚಿ. ಕೆಲವು ಎಲೆಗಳನ್ನು ತಿನ್ನಲು ಸಾಧ್ಯವಾಗದ ಕಾರಣ ಆ ಎಲೆಯನ್ನು ಬಳಸಿ ಆಹಾರ ಬೇಯಿಸಲು ಉಪಯೋಗಿಸುತ್ತಾರೆ. ಈ ಕ್ರಮವು ಹಿಂದಿನ ಕಾಲದಿಂದಲೂ ರೂಢಿಯಲ್ಲಿದೆ. ಆಹಾರವನ್ನು ಎಲೆಯಲ್ಲಿಟ್ಟು ಬೇಯಿಸುವುದರಿಂದ ಎಲೆಯಲ್ಲಿರುವ ಸತ್ವ ಆಹಾರದಲ್ಲಿ ಸೇರುತ್ತದೆ. ಇದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಅಡುಗೆಗೆ ಬಳಸುವ ಕೆಲವು ಎಲೆಗಳ ಆರೋಗ್ಯದ ಗುಟ್ಟನ್ನು ತಿಳಿದುಕೊಳ್ಳೋಣ.

ಬಾಳೆ ಎಲೆ

ಬಾಳೆ ಎಲೆಯಲ್ಲಿ ಊಟ ಮಾಡುವ ಸಂಪ್ರದಾಯ ಹಿಂದಿನ ಕಾಲದಿಂದಲೂ ಚಾಲ್ತಿಯಲ್ಲಿದೆ. ಬಾಳೆ ಎಲೆ ದಪ್ಪ ಹಾಗೂ ವಾಟರ್ ಪ್ರೂಫ್ ಇರುವುದರಿಂದ ಊಟಕ್ಕೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಇದರ ಗುಣಗಳು ಆಹಾರದಲ್ಲಿ ಸೇರಿಕೊಳ್ಳಬೇಕಾದರೆ ಪದಾರ್ಥಗಳನ್ನು ಬಿಸಿಬಿಸಿಯಾಗಿ ಬಡಿಸಬೇಕು.
ಸಂಸ್ಕೃತದಲ್ಲಿ ಇದಕ್ಕೆ ಕದಲಿ ಎಂದು ಹೆಸರು. ಇದರ ಎಲ್ಲಾ ಭಾಗಗಳನ್ನು ಉಪಯೋಗಿಸುತ್ತಾರೆ. ಬಾಳೆದಿಂಡಿನ ಜ್ಯೂಸು ಕಿಡ್ನಿ ಸ್ಟೋನಿಗೆ ರಾಮಬಾಣ. ಬಾಳೆ ಎಲೆಯಲ್ಲಿ ಇಡ್ಲಿ ಹಿಟ್ಟನ್ನು ಹಾಕಿ ಬೇಯಿಸುತ್ತಾರೆ. ಕಡುಬು ಕೂಡ ಮಾಡಿ ಸವಿಯುತ್ತಾರೆ.



































 
 

ಬಾಳೆ ಎಲೆಯ ಆರೋಗ್ಯ ಲಾಭಗಳು

ಇದು ಜೀರ್ಣಕಾರಕ. ಮನಸ್ಸನ್ನು ಶಾಂತವಾಗಿ ಇರಿಸುತ್ತದೆ. ದೇಹಕ್ಕೆ ಬಲ ನೀಡುತ್ತದೆ. ವಾತ ಹಾಗೂ ಪಿತ್ತದೋಷವನ್ನು ಶಮನಗೊಳಿಸುತ್ತದೆ. ಶೀತ ವೀರ್ಯ ಸ್ವಭಾವ ಹೊಂದಿದೆ.

ಮುತ್ತುಗ ಎಲೆ

ಮುತ್ತುಗದ ಕೆಲವು ಎಲೆಗಳನ್ನು ಜೋಡಿಸಿ ಪ್ಲೇಟನಂತೆ ಮಾಡಿ ಇದರ ಮೇಲೆ ತಿಂಡಿ ತಿನ್ನಲು ಉಪಯೋಗಿಸುತ್ತಾರೆ. ಸಂಸ್ಕೃತದಲ್ಲಿ ಇದನ್ನು ಫಲಾಶವೆಂದು ಕರೆಯುವರು

ಲಾಭಗಳು

ಹೊಟ್ಟೆ ಉಬ್ಬರ ಹಾಗು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಮಾಡುತ್ತದೆ. ಇದರ ಎಲೆ, ಹೂ ಹಾಗೂ ತೊಗಟೆಯನ್ನು ಆಯುರ್ವೇದದಲ್ಲಿ ಔಷಧವಾಗಿ ಬಳಸಲಾಗುವುದು. ಮಂಡಿ ನೋವಿಗೆ ಎಲೆಯನ್ನು ಬಳಸಿ ಪಿಂಡ ಶ್ವೇದ ಮಾಡುವುದರಿಂದ ನೋವು ಉಪಶಮನವಾಗುತ್ತದೆ. ಬೀಜದ ಪುಡಿಯನ್ನು ಅಥವಾ ಕಷಾಯವನ್ನು ತ್ವಚೆಯ ಅಲರ್ಜಿಗೆ ಬಳಸಲಾಗುವುದು. ಕೂದಲು ಉದುರುವುದು ಕಡಿಮೆಯಾಗುತ್ತದೆ.

ಹಲಸಿನ ಎಲೆ

ಸಂಸ್ಕೃತದಲ್ಲಿ ಕಂಠಕಿ ಎಂದು ಹೆಸರು. ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಇದರ ಉಪಯೋಗ ಬಹಳ. ಇಡ್ಲಿ ಹಿಟ್ಟನ್ನು ಹಲಸಿನ ಎಲೆಯಲ್ಲಿ ತುಂಬಿಸಿ ಹಬೆಯಲ್ಲಿ ಬೇಯಿಸುತ್ತಾರೆ. ಇದನ್ನು ಕೊಟ್ಟು ಎಂದು ಕರೆಯುತ್ತಾರೆ. ಇದೊಂದು ವಿಶಿಷ್ಟ ಖಾದ್ಯ ಕೂಡ.
ರುಚಿಯಲ್ಲಿ ಮಧುರ ಹಾಗೂ ಕಷಾಯ ರಸ ಹೊಂದಿದೆ. ಸ್ವಭಾವದಲ್ಲಿ ಶೀತ ವೀರ್ಯ ಹಾಗೂ ಗುರು ಹಾಗೂ ಸ್ನಿಗ್ಧ ಗುಣದಿಂದ ಕೂಡಿದೆ. ವಾತ ಹಾಗೂ ಪಿತ್ತ ದೋಷವನ್ನು ಶಮನಗೊಳಿಸುತ್ತದೆ. ಹೃದಯಕ್ಕೆ ಒಳ್ಳೆಯದು. ಉರಿಯನ್ನು ಶಮನ ಮಾಡುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಮಾಡುತ್ತದೆ. ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡುತ್ತದೆ. ಕ್ಯಾನ್ಸರ್ ರೋಗವನ್ನು ತಡೆಯುತ್ತದೆ.

ಅರಿಶಿಣ ಎಲೆ

ಸಂಸ್ಕೃತದಲ್ಲಿ ಹರಿದ್ರ ಎಂದು ಹೆಸರು. ಈ ಎಲೆಯನ್ನು ಸಿಹಿ ಕಡಬು, ಸೌತೆಕಾಯಿ ಕಡಬು ಬೇಯಿಸಲು ಉಪಯೋಗಿಸುತ್ತಾರೆ.

ಅರಿಶಿಣ ಎಲೆಯಆರೋಗ್ಯ ಲಾಭಗಳು

ಅರಿಶಿಣ ಎಲೆಯು ಸ್ವಭಾವದಲ್ಲಿ ಉಷ್ಣವೀರ್ಯ. ಇದು ದೇಹಕ್ಕೆ ಬಲ ನೀಡುತ್ತದೆ. ಕ್ರಿಮಿಗಳನ್ನು ದೇಹದಿಂದ ಹೊರ ಹಾಕುತ್ತದೆ. ಜೀರ್ಣಕಾರಕ. ಸಂಧಿ ನೋವನ್ನು ಕಡಿಮೆ ಮಾಡುತ್ತದೆ. ತ್ವಚೆಯ ಸಮಸ್ಯೆಯನ್ನು ನಿವಾರಿಸುತ್ತದೆ. ನರಗಳಿಗೆ ಶಕ್ತಿ ನೀಡುತ್ತದೆ. ಯಕೃತಿಗೆ ಒಳ್ಳೆಯದು. ಹೃದಯಕ್ಕೆ ಒಳ್ಳೆಯದು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಾತ ಪಿತ್ತ ಹಾಗೂ ಕಫ ದೋಷವನ್ನು ಸಮತೋಲನದಲ್ಲಿಡುತ್ತದೆ.

ಕೆದಕಿ (ಮೂಡೆ ಎಲೆ)

ಇದರ ಎಲೆಯನ್ನು ಕೊಳವೆಯಾಕಾರದ ತರ ಮಾಡಿ ಇಡ್ಲಿ ಹಿಟ್ಟನ್ನು ತುಂಬಿಸಿ ಬೇಯಿಸುತ್ತಾರೆ.

ಆರೋಗ್ಯ ಲಾಭಗಳು

ಸಕ್ಕರೆ ಕಾಯಿಲೆ, ಜ್ವರ, ಮಂಡಿ ನೋವು, ಮಾನಸಿಕ ಕಾಯಿಲೆಗಳಲ್ಲಿ ಉಪಯೋಗಿಸುತ್ತಾರೆ..ಕಿವಿ ನೋವು, ಆಸ್ತಿಮ, ನೆಗಡಿ, ಕೆಮ್ಮು, ಬ್ರೋಕೈಟಿಸ್‌ಗೆ ಒಳ್ಳೆಯದು. ಕಣ್ಣಿಗೆ ಹಿತಕರ. ರುಚಿಯಲ್ಲಿ ಮಧುರ, ಕಹಿ ಹಾಗೂ ಖಾರ ರಸದಿಂದ ಕೂಡಿದೆ. ಲಘುು ಹಾಗು ಉಷ್ಣವೀರ ಸ್ವಭಾವ ಹೊಂದಿದೆ.

ಕೆಸುವಿನ ಎಲೆ

ಕೆಸುವಿನ ಎಲೆಯ ಪತ್ರೊಡೆ ಎಲ್ಲರಿಗೂ ಇಷ್ಟವಾದ ಖಾದ್ಯ. ಇದನ್ನು ವಿವಿಧ ರೀತಿಯ ಅಡುಗೆಯಲ್ಲಿ ಬಳಸುತ್ತಾರೆ.

ಆರೋಗ್ಯ ಲಾಭಗಳು

ಇದು ಬಲವರ್ಧಕ, ಮಲಬದ್ಧತೆಯನ್ನು ದೂರಮಾಡುತ್ತದೆ. ಪೈಲ್ಸ್, ಯಕೃತ್ ವಿಕಾರಗಳಲ್ಲಿ ಉಪಯೋಗಿಸುತ್ತಾರೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಕಣ್ಣಿಗೆ ಒಳ್ಳೆಯದು. ರಕ್ತ ಹೀನತೆಗೆ ಒಳ್ಳೆಯದು.

ನೆಲನೆಲ್ಲಿ

ಇದನ್ನು ಭೂಮ್ಯಾಮ್ಲಕಿ ಎಂದು ಕರೆಯುತ್ತಾರೆ. ನೆಲನೆಲ್ಲಿಯ ಕಷಾಯ ಯಕೃತ್ ಸಮಸ್ಯೆಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದನ್ನು ಅನೇಕ ಆಯುರ್ವೇದ ಔಷಧಗಳಲ್ಲಿ ಬಳಸಲಾಗುತ್ತದೆ. ಬ್ರೊಕೈಟಿಸ್, ಮೂತ್ರಪಿಂಡದ ಸಮಸ್ಯೆಗಳಲ್ಲಿ ಉಪಯೋಗಿಸುತ್ತಾರೆ. ರಕ್ತ ಹೀನತೆ, ಅಸ್ತಮಾ, ಕುಷ್ಟ ರೋಗಗಳಲ್ಲಿ ಬಳಸುತ್ತಾರೆ.
✒️ಡಾ.ಹರ್ಷಾ ಕಾಮತ್
ಖ್ಯಾತ ಆಯುರ್ವೇದ ತಜ್ಞರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top