ಪುತ್ತೂರು: ಕಾಂಗ್ರೆಸ್ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದ್ದ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಅವರು ಇಂದು ಜೆಡಿಎಸ್ ಸೇರ್ಪಡೆಗೊಳ್ಳಲಿದ್ದು, ಕರಾವಳಿ ಭಾಗದಲ್ಲಿ ನೆಲೆ ಕಂಡುಕೊಳ್ಳಲು ಶ್ರಮಿಸುತ್ತಿದ್ದ ಜೆಡಿಎಸಿಗೆ ಹೊಸ ಭರವಸೆ ಸಿಕ್ಕಂತಾಗಿದೆ.
ಸೂಕ್ತ ನಾಯಕತ್ವವನ್ನು ಎದುರು ನೋಡುತ್ತಿದ್ದ ಪುತ್ತೂರು ಜೆಡಿಎಸ್ ಅಭ್ಯರ್ಥಿಯಾಗಿ ದಿವ್ಯಪ್ರಭಾ ಚಿಲ್ತಡ್ಕ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಅವರು, “ಕಾಂಗ್ರೆಸಿನಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ. ಇದು ಮಹಿಳೆಯರಿಗಾದ ಅನ್ಯಾಯ. ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆಯಾಗಿದ್ದ ಸಂದರ್ಭ, ತಾನು ಹಲವು ಸಮಾಜಮುಖಿ ಕೆಲಸಗಳನ್ನು, ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಹಾಗಿದ್ದು ತನ್ನ ಶ್ರಮವನ್ನು, ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್ ಗುರುತಿಸದೇ ಹೋಯಿತು. ಆದ್ದರಿಂದ ಜೆಡಿಎಸ್ ಸೇರುವ ತೀರ್ಮಾನ ಕೈಗೊಂಡಿದ್ದೇನೆ” ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಜೆಪಿ ಭವನದಲ್ಲಿ ಇಂದು (ಏ. 14) ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಳ್ಳಿದ್ದಾರೆ. ಬಳಿಕ ಸೂಕ್ತ ದಿನ ನೋಡಿ ಪುತ್ತೂರಿನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಜೆಡಿಎಸ್ ಭರವಸೆ:
ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಆಕಾಂಕ್ಷಿಯಾಗಿದ್ದುಕೊಂಡು ಕೆಲಸ ಮಾಡುತ್ತಿದ್ದ ದಿವ್ಯಪ್ರಭಾ ಚಿಲ್ತಡ್ಕ ಅವರು, ಜೆಡಿಎಸ್ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಂತೆ ಪಕ್ಷ ಚುರುಕು ಪಡೆದುಕೊಂಡಿದೆ. ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆಯಾಗಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡ ನಾಯಕಿ ದಿವ್ಯಪ್ರಭಾ ಚಿಲ್ತಡ್ಕ. ಹಾಗಾಗಿ ಚಿಲ್ತಡ್ಕ ಅವರ ರಾಜಕೀಯ ಪ್ರಭಾವ, ಸಾಮಾಜಿಕ ನೆಲೆಗಟ್ಟು ಪುತ್ತೂರು ಜೆಡಿಎಸ್ ಪಕ್ಷಕ್ಕೆ ಹೊಸ ಭರವಸೆ ನೀಡಿದೆ ಎಂದು ವ್ಯಾಖ್ಯಾನಿಸಲಾಗಿದೆ.