ಧರ್ಮಸ್ಥಳ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.
ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಬೀಡಿನಲ್ಲಿ(ಹೆಗ್ಗಡೆಯವರ ಸಹೋದರ ಡಿ. ಹರ್ಷೇಂದ್ರ ಕುಮಾರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸ್ವಾಗತಿಸಿದರು. ಬಳಿಕ ಧರ್ಮಸ್ಥಳದ ಶ್ರೀ ಮಂಜುನಾಥ ಸ್ಚಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು. ಸಾಂಪ್ರಾದಾಯಿಕವಾಗಿ ಕ್ಷೇತ್ರದಿಂದ ದೇವಳದ ಕಚೇರಿ ಪ್ರಬಂಧಕ ಪಾರ್ಶ್ವನಾಥ್ ಜೈನ್, ದೇವಳ ಪಾರುಪಾತ್ಯಗಾರ ಲಕ್ಷ್ಮೀನಾರಾಯಣ ರಾವ್, ಮಹಾವೀರ ಅಜ್ರಿ, ದೀಕ್ಷಿತ್ ಅವರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಚುನಾವಣೆಗೆ ಮೊದಲು ದೇವಸ್ಥಾನಗಳ ಭೇಟಿ ನೀಡುತ್ತೇನೆ. ಈಗಾಗಲೇ ಟಿಕೆಟ್ ವಂಚಿತರೊಂದಿಗೆ ಮಾತನಾಡಿದ್ದೇವೆ. ಅವರನ್ನು ಶಾಸಕರಾಗಿ ಮಾಡಿರೋದು ಕೂಡಾ ಬಿಜೆಪಿ ಪಕ್ಷ. ಅವರನ್ನು ಬಿಜೆಪಿ ಗೌರವ ಪೂರ್ವಕವಾಗಿ ನಡೆಸಿಕೊಂಡಿದೆ. ರಾಜಕೀಯ ಭವಿಷ್ಯ ಕೂಡಾ ಸುರಕ್ಷಿತವಾಗಿ ಇರಲಿದೆ ಎಂದರು.
ಟಿಕೆಟ್ ದೊರಕದಿದ್ದಾಗ ಅಸಮಾಧಾನ ಸಹಜ. ಲಕ್ಷ್ಮಣ ಸವದಿಯವರು ಬೇಸರದಿಂದ ಪ್ರತಿಕ್ರಿಯೆ ನೀಡಿರಬಹುದು. ಆದರೆ ಲಕ್ಷ್ಮಣ ಸವದಿಗೆ ನನ್ನ ಮತ್ತು ಪಕ್ಷದ ಜೊತೆಗೆ ಭಾವನಾತ್ಮಕ ಸಂಬಂಧ ಇದೆ. ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ. ಎರಡು ದಿನದಲ್ಲಿ ಎರಡನೇ ಪಟ್ಟಿಯೂ ಬಿಡುಗಡೆಯಾಗಲಿದೆ ಎಂದು ಬೊಮ್ಮಾಯಿ ಹೇಳಿದರು.
ವಿನಯ ಕುಲಕರ್ಣಿ ಇದಿರಾಳಿಯಾಗಿ ಸ್ಪರ್ಧಿಸುವ ವಿಚಾರವಾಗಿ ಮಾತನಾಡಿದ ಬೊಮ್ಮಾಯಿಯರು, ಬಿಜೆಪಿ ಯಾರನ್ನೂ ಟಾರ್ಗೆಟ್ ಮಾಡಿಲ್ಲ. ನನ್ನ ಎದುರಾಳಿಯಾಗಿ ಯಾರು ಸ್ಪರ್ಧಿಸುವುದೆಂದು ನನಗೆ ಮುಖ್ಯವಲ್ಲ. ನನಗೆ ನನ್ನ ಕ್ಷೇತ್ರದ ಜನರು ಮುಖ್ಯ. ಯಾರೇ ಆದರೂ ನಾನು ಚುನಾವಣೆಯಲ್ಲಿ ಎದುರಿಸುತ್ತೇನೆ ಎಂದರು.
ಟಿಕೆಟ್ ಘೋಷಣೆ ಬೆನ್ನಲ್ಲೇ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗೋದಾಗಿ ಹೇಳುತ್ತಿದ್ದಾರೆ. ರಾಜಕೀಯದಿಂದ ನಿವೃತ್ತಿಯಾಗೋದಾಗಿ ಹೇಳಿಲ್ಲ. ಈಶ್ವರಪ್ಪ ರಾಜಕೀಯ ನಿವೃತ್ತಿ ಆಗಿಲ್ಲ, ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಅಷ್ಟೆ. ಈಶ್ವರಪ್ಪ ಜೊತೆ ವರಿಷ್ಠರು ಮಾತನಾಡುತ್ತಾರೆ. ಸುಳ್ಯದ ಎಸ್ ಅಂಗಾರ ಜಂಟಲ್‌ಮ್ಯಾನ್ ರಾಜಕಾರಣಿ. ಅವರೊಂದಿಗೆ ನಾನು ಮಾತನಾಡುತ್ತೇನೆ ಎಂದು ಹೇಳಿದರು.
ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಲಿಪ್ಯಾಡ್‌ನಿಂದ ವಾಹನಗಳ ಮೂಲಕ ದೇವಸ್ಥಾನಕ್ಕೆ ಆಗಮಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಜತೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಪ್ರಮುಖರಾದ ಪ್ರಣೀತ್ ಶೆಟ್ಟಿ ಪಡಂಗಡಿ, ಕಿರಣ್ ಮಂಜಿಲ ಆರಂಬೋಡಿ ಮೊದಲಾದವರು ಹಾಜರಿದ್ದರು.
ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅವರು ಕುಕ್ಕೆ ಶ್ರೀಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ, ಗುರುವಾರ ಕೊಲ್ಲೂರು, ಕಟೀಲು, ಸೋಮೇಶ್ವರ ದೇವಸ್ಥಾನ ಭೇಟಿ ನೀಡಲಿದ್ದಾರೆ.