ಪುತ್ತೂರು: ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಹೊರತಾಗಿಯೂ ಸಂಜೀವ ಮಠಂದೂರು ಅವರಿಗೆ ಟಿಕೇಟ್ ನಿರಾಕರಿಸಿರುವ ಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ಭಿನ್ನ ನಿಲುವಿನ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಅಭಿವೃದ್ಧಿ ಕಾರ್ಯಗಳು ಮಾತ್ರವಲ್ಲ ಮುಂದಿನ 50 ವರ್ಷಗಳಲ್ಲಿ ಪುತ್ತೂರಿನ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಆದರೆ ಇವ್ಯಾವುದನ್ನು ಲೆಕ್ಕಿಸದೇ, ಹಾಲಿ ಶಾಸಕ ಸಂಜೀವ ಮಠಂದೂರು ಅವರನ್ನು ಬಿಜೆಪಿ ವರಿಷ್ಠರು ನಿರ್ಲಕ್ಷಿಸಿದ್ದಾರೆ. ಕಾರಣವೇ ಇಲ್ಲದೇ, ಹಾಲಿ ಶಾಸಕರಿಗೆ ಟಿಕೇಟ್ ನಿರಾಕರಿಸಿರುವುದು ಸರಿಯಲ್ಲ. ಇದರ ಪರಿಣಾಮವನ್ನು ಚುನಾವಣೆಯಲ್ಲಿ ಎದುರಿಸಬೇಕಾಗುವ ಪ್ರಸಂಗ ಬರಬಹುದು. ರೇಸಿನಲ್ಲಿ ಗುರುತಿಸಿಕೊಂಡಿರದೇ ಇರುವ ವ್ಯಕ್ತಿಯನ್ನೇ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಆದ್ದರಿಂದ ಮುಂದಿನ ಎಲ್ಲಾ ಬೆಳವಣಿಗೆಗೂ ಬಿಜೆಪಿ ಹೈಕಮಾಂಡೇ ನೇರ ಕಾರಣ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಸಂಜೀವ ಮಠಂದೂರು ಅವರ ಪರವಾಗಿ ಕಾರ್ಯಕರ್ತರು ಧನಾತ್ಮಕ ಅಭಿಪ್ರಾಯವನ್ನೇ ಹೈಕಮಾಂಡಿಗೆ ನೀಡಿದ್ದರು. ಇತ್ತೀಚೆಗೆ ನಡೆದ ಆಂತರಿಕ ಸಮೀಕ್ಷೆಯಲ್ಲೂ ಕೂಡ ಸಂಜೀವ ಮಠಂದೂರು ಪರವಾಗಿಯೇ ಅಭಿಪ್ರಾಯ ಸಂಗ್ರಹವಾಗಿತ್ತು. ಮಂಗಳೂರಿನಲ್ಲಿ ನಡೆದ ಸಭೆಯಲ್ಲೂ ಮುಖಂಡರು, ಕಾರ್ಯಕರ್ತರು ಮಠಂದೂರು ಪರವಾಗಿಯೇ ಮತ ಚಲಾಯಿಸಿದ್ದರು. ಸಮುದಾಯದ ಪ್ರಮುಖರು ಮಠಂದೂರು ಪರವಾಗಿಯೇ ನಿಂತಿದ್ದರು. ಆದರೂ ಬಿಜೆಪಿ ಹೈಕಮಾಂಡ್ ಟಿಕೇಟ್ ನಿರಾಕರಣೆ ಮಾಡಿ, ಕಾರ್ಯಕರ್ತರ ಶ್ರಮವನ್ನು ಕಡೆಗಣಿಸಿದೆ. ಬಿಜೆಪಿ ಕಾರ್ಯಕರ್ತರ ಪಕ್ಷ ಎನ್ನುವುದು ಮಾತಿಗೆ ಮಾತ್ರ ಎಂಬಂತಾಗಿದೆ. ಕಾರ್ಯದಲ್ಲಿ ಮಾತ್ರ ಇದನ್ನು ಅನುಷ್ಠಾನಕ್ಕೆ ತರುತ್ತಿಲ್ಲ. ಇಲ್ಲಿ ಕಾರ್ಯಕರ್ತರ ಅಭಿಪ್ರಾಯಕ್ಕೆ, ಭಾವನೆಗೆ ಬೆಲೆಯೇ ಇಲ್ಲವಾಗಿದೆ ಎಂದು ಬೇಸರ ತೋಡಿಕೊಂಡಿದ್ದಾರೆ.