ಮಂಗಳೂರು : ವಿಧಾನಸಭೆ ಚುನಾವಣೆಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಕ್ಷಿಣ ಕನ್ನಡದ ವಿವಿಧ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಕುಟುಂಬಸಮೇತರಾಗಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳಕ್ಕೆ ಭೇಟಿ ನೀಡಿರುವ ಅವರು, ಮಂಜುನಾಥನ ದರ್ಶನ ಪಡೆಯಲಿದ್ದಾರೆ. ದೇವಾಲಯದಲ್ಲಿ ವಿಷೇಶ ಪೂಜೆ ಸಲ್ಲಿಸಿದ ಬಳಿಕ ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೂ ಭೇಟಿ ನೀಡಲಿದ್ದಾರೆ. ಇಂದು ರಾತ್ರಿ ಮಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಗುರುವಾರ ಮುಂಜಾನೆ ಕೊಲ್ಲೂರಿಗೂ ತೆರಳಲಿರುವ ಅವರು ನಂತರ ಕಟೀಲು ದೇಗುಲ ಮತ್ತು ಉಳ್ಳಾಲದ ಪುರಾಣ ಪ್ರಸಿದ್ದ ಸೋಮನಾಥ ದೇಗುಲಕ್ಕೆ ತೆರಳಿ ದರ್ಶನ ಪಡೆಯಲಿದ್ದಾರೆ.
ಹೆಲಿಕಾಪ್ಟರ್, ಸೂಟ್ಕೇಸ್ ತಪಾಸಣೆ
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಅಧಿಕಾರಿಗಳ ತಂಡ ಬೊಮ್ಮಾಯಿ ಅವರ ಹೆಲಿಕಾಪ್ಟರ್ ಪರಿಶೀಲನೆ ನಡೆಸಿತು. ಹೆಲಿಕಾಪ್ಟರ್, ಸೂಟ್ಕೇಸ್ ಅನ್ನು ಅಧಿಕಾರಿಗಳು ಪರಿಶೀಲಿಸಿದರು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅಧಿಕಾರಿಗಳು ರಾಜಕಾರಣಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಗುರುವಾರ ಮುಂಜಾನೆ ಕೊಲ್ಲೂರಿಗೂ ತೆರಳಲಿರುವ ಅವರು ನಂತರ ಕಟೀಲು ದೇಗುಲ ಮತ್ತು ಉಳ್ಳಾಲದ ಪುರಾಣ ಪ್ರಸಿದ್ದ ಸೋಮನಾಥ ದೇಗುಲಕ್ಕೆ ತೆರಳಿ ದರ್ಶನ ಪಡೆಯಲಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಮಂಗಳವಾರ ರಾತ್ರಿ ಬಿಡುಗಡೆಯಾಗಿತ್ತು. ನಿರೀಕ್ಷೆಯಂತೆಯೇ ಬೊಮ್ಮಾಯಿ ಅವರಿಗೆ ಶಿಗ್ಗಾಂವಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. 52 ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಒಬಿಸಿಯ 32 ಮಂದಿ, ಎಸ್ಸಿ 30, ಎಸ್ಟಿ 16 ಹಾಗೂ 9 ವೈದ್ಯರು, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಟಿಕೆಟ್ ನೀಡಲಾಗಿದೆ. 8 ಮಂದಿ ಮಹಿಳೆಯರು, ಐವರು ವಕೀಲರು, ಮೂವರು ಶಿಕ್ಷಕರು, 9 ಸ್ನಾತಕೋತ್ತರ ಪದವೀಧರರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಲಾಗಿದೆ.