ಪುತ್ತೂರು: ಈ ಬಾರಿಯೂ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಕುಂತಳಾ ಟಿ. ಶೆಟ್ಟಿಯವರಿಗೇ ಅವಕಾಶ ನೀಡಬೇಕು. ಇಲ್ಲದಿದ್ದಲ್ಲಿ ಪಕ್ಷದ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಪಕ್ಷದಲ್ಲಿ ತಟಸ್ಥವಾಗಿ ಉಳಿಯಲಿದ್ದೇವೆ ಎಂದು ಪುತ್ತೂರು ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಶಾರದಾ ಅರಸ್ ಹೇಳಿದ್ದಾರೆ.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಕುಂತಳಾ ಶೆಟ್ಟಿಯವರು ಈ ಹಿಂದಿನ ಶಾಸಕರಾಗಿದ್ದ ಅವಧಿಯಲ್ಲಿ ಮಹಿಳೆಯರ ಏಳಿಗೆಗಾಗಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಈ ಪೈಕಿ ಮಹಿಳಾ ಪೊಲೀಸ್ ಠಾಣೆಯನ್ನು ಪುತ್ತೂರಿಗೆ ಆರಂಭಿಸಲು ಶ್ರಮಿಸಿದವರು, , ಮಹಿಳೆಯರು ಆರ್ಥಿಕವಾಗಿ ಬೆಳೆಯಲು ಸ್ತ್ರೀ ಶಕ್ತಿ ಸಂಘಟನೆಗಳನ್ನು ಸ್ಥಾಪಿಸಿರುವುದು ಮುಂತಾದ ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದಲ್ಲದೆ ವಿಧಾನಸಭೆಯಲ್ಲಿ ಮಹಿಳೆಯರ ಪರ ಧ್ವನಿ ಎತ್ತುವ ಮೂಲಕ ಭರವಸೆಯ ಆಶಾಕಿರಣರಾಗಿದ್ದಾರೆ ಎಂದು ಹೇಳಿದರು.
ಈಗಾಗಲೇ ಬಿಜೆಪಿ ಪಕ್ಷದಿಂದ ಪುತ್ತೂರು, ಸುಳ್ಯಕ್ಕೆ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್‍ನಲ್ಲೂ ಈ ಬಾರಿ ಶಕುಂತಳಾ ಶೆಟ್ಟಿಯವರಿಗೆ ಕೊನೆಯ ಅವಕಾಶವನ್ನು ನಾವು ಕೇಳುತ್ತಿರುವುದು. ಈ ಕುರಿತು ಹಿಂದೆ ಮನವಿಯನ್ನು ಹೈಕಮಾಂಡ್‍ಗೆ ನೀಡಿದ್ದೇವೆ. ಇದೀಗ ಮತ್ತೊಮ್ಮೆ ಮಾಧ್ಯಮದ ಮೂಲಕ ಮನವಿ ಮಾಡುತ್ತಿದ್ದೇವೆ. ಕಾಂಗ್ರೆಸ್ ಹೈಕಮಾಂಡ್ ಈ ವಿಷಯದ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ದ.ಕ., ಉಡುಪಿ ಜಿಲ್ಲೆಯಲ್ಲಿ ಇದರ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಒಂದು ವೇಳೆ ಶಕುಂತಳಾ ಶೆಟ್ಟಿಯವರಿಗೆ ಟಿಕೇಟ್ ನಿರಾಕರಣೆ ಮಾಡಿದತೆ ಮಹಿಳಾ ಕಾಂಗ್ರೆಸ್ ಸಮಿತಿ ಸಾಮೂಹಿಕ ರಾಜೀನಾಮೆ ನೀಡುವುದರ ಜತೆಗೆ ಶಕುಂತಳಾ ಶೆಟ್ಟಿಯವರು ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಒತ್ತಾಯವನ್ನು ನಾವು ಮಾಡಲಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್‍ನ ವಿಶಾಲಾಕ್ಷಿ ಬನ್ನೂರು, ವಿಲ್ಮಾ ಗೊನ್ಸಾಲ್ವಿಸ್, ಸುಧಾ ಕುಂಜತ್ತಾಯ, ಸೀತಾ ಭಟ್ ಉಪಸ್ಥಿತರಿದ್ದರು.