ಉಡುಪಿಯಿಂದ ಯಶ್‌ಪಾಲ್ ಸುವರ್ಣ, ಕಾಪುವಿನಿಂದ ಗುರ್ಮೆ ಸುರೇಶ್ ಶೆಟ್ಟಿ ಕಣಕ್ಕೆ
ಪುತ್ತೂರು, ಸುಳ್ಯ ಟಿಕೆಟ್ ಮಹಿಳೆಯರಿಗೆ
ದೆಹಲಿ : ಗಜಪ್ರಸವದಂತಾಗಿದ್ದ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ರಾತ್ರಿ ಬಿಡುಗಡೆಗೊಳಿಸಲಾಗಿದೆ. ರಾತ್ರಿ 9 ಗಂಟೆ ವೇಳೆಗೆ ಕೇಂದ್ರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯದ 189 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದರು.
ನಿರೀಕ್ಷೆಯಂತೆಯೇ ಬಿಜೆಪಿ ಹಲವು ಪ್ರಯೋಗಗಳನ್ನು ಮಾಡಲು ಮುಂದಾಗಿದೆ. ಹಲವು ಅನಿರೀಕ್ಷಿತ ಹೆಸರುಗಳು ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ದೊಡ್ಡ ಮಟ್ಟದ ರಿಸ್ಕ್ ತೆಗೆದುಕೊಳ್ಳಲು ಬಿಜೆಪಿ ಮುಂದಾಗಿರುವುದು ಅಭ್ಯರ್ಥಿಗಳ ಪಟ್ಟಿಯಿಂದ ಸ್ಪಷ್ಟವಾಗುತ್ತದೆ. ಅಂತೆಯೇ ಕೆಲವು ರಾಜಕೀಯ ಘಟಾನುಘಟಿಗಳನ್ನು ಕಟ್ಟಿ ಹಾಕಲು ಸಮರ್ಥ ಹುರಿಯಾಳುಗಳನ್ನು ಕಣಕ್ಕಿಳಿಸದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಆರ್. ಅಶೋಕ್, ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಅವರಂಥ ದಿಗ್ಗಜರನ್ನು ಬಿಜೆಪಿ ಕಣಕ್ಕಿಳಿಸಿದೆ. ಇದು ಎಲ್ಲ ಲೆಕ್ಕಾಚಾರವನ್ನು ಮೀರಿದ ನಡೆಯಾಗಿದ್ದು, ಈ ಸಲದ ಚುನಾವಣೆಯನ್ನು ಹೈವೋಲ್ಟೇಜ್ ಮಾಡಲಿದೆ. ವಿರೋಧ ಪಕ್ಷದ ನಾಯಕರು ತಮ್ಮ ಕ್ಷೇತ್ರಗಳಿಗೇ ಹೆಚ್ಚು ಗಮನಹರಿಸುವಂತೆ ಮಾಡುವ ತಂತ್ರಗಾರಿಕೆ ಇದು.
ರಾಜ್ಯದಲ್ಲಿ ಹೊಸ ತಲೆಮಾರಿನ ನಾಯಕತ್ವ ಬಂದಿದೆ ಎಂದು ಹೇಳುವ ಮೂಲಕ ಹೊಸ ಅಭ್ಯರ್ಥಿಗಳಿಗೆ ಆದ್ಯತೆ ನೀಡಿರುವ ಸುಳಿವನ್ನು ಸುದ್ದಿಗೋಷ್ಠಿಯಲ್ಲಿ ಧರ್ಮೇಂದ್ರ ಸಿಂಗ್ ನೀಡಿದ್ದಾರೆ.
ಟಿಕೆಟ್ ಘೋಷಣೆಗೂ ಮುನ್ನ ಕೆಎಸ್ ಈಶ್ವರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಬೆಳವಣಿಗೆಗಳು ರಾಜ್ಯದಲ್ಲಿ ಹಲವು ಮಂದಿ ಹಾಲಿ ಶಾಸಕರಿಗೆ ಹಾಗೂ ಹಿರಿಯ ನಾಯಕರಿಗೆ ಈ ಬಾರಿ ಖೋಕ್ ನೀಡಲಾಗುತ್ತದೆ ಎಂಬ ಸುಳಿವು ನೀಡಿತ್ತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಈ ಬಾರಿ 52 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ, 9 ವೈದ್ಯರಿಗೆ, ನಿವೃತ್ತ ಐಎಸ್ಎಸ್, ಐಪಿಎಸ್‌ಗಳಿಗೆ ಟಿಕೆಟ್ ನೀಡಲಾಗಿದೆ. 32 ಒಬಿಸಿಗಳಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಿದರು. ಇತ್ತೀಚೆಗಷ್ಟೇ ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್‌ಗೆ ಟಿಕೆಟ್ ಸಿಕ್ಕಿದೆ.
ಕರಾವಳಿಯಲ್ಲಿ ಪ್ರಯೋಗ
ಕರಾವಳಿ ಪೈಕಿ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ದೊಡ್ಡ ಮಟ್ಟದ ಪ್ರಯೋಗಕ್ಕೆ ಮುಂದಾಗಿದೆ. ಮುಖ್ಯವಾಗಿ ಉಡುಪಿಯಿಂದ ಹಾಲಿ ಶಾಸಕ ರಘುಪತಿ ಭಟ್ ಅವರಿಗೆ ಟಿಕೆಟ್ ತಪ್ಪಿರುವುದು ಆಶ್ಚರ್ಯವುಮಟುಮಾಡಿದೆ. ಅವರ ಬದಲು ಮೊಗವೀರ ಮುಖಂಡ ಯಶ್‌ಪಾಲ್ ಸುವರ್ಣ ಅವರಿಗೆ ಟಿಕೆಟ್ ಸಿಕ್ಕಿದೆ.
ಕುಂದಾಪುರದಿಂದ ಚುನಾವಣೆ ನಿವೃತ್ತಿ ಘೋಷಿಸಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಅಪೇಕ್ಷೆಯಂತೆ ಅವರ ಶಿಷ್ಯ ಕಿರಣ್ ಕುಮಾರ್ ಕೊಡ್ಗಿಯವರಿಗೆ ಟಿಕೆಟ್ ಸಿಕ್ಕಿದೆ. ಕಾಪುವಿನಲ್ಲಿ ಲಾಲಾಜಿ ಮೆಂಡನ್ ಟಿಕೆಟ್ ವಂಚಿತರಾಗಿದ್ದು, ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಟಿಕೆಟ್ ನೀಡಲಾಗಿದೆ. ಬೈಂದೂರು ಟಿಕೆಟ್ ಮೊದಲ ಪಟ್ಟಿಯಲ್ಲಿ ಘೋಷಣೆಯಾಗದಿರುವುದು ಈ ಕ್ಷೇತ್ರ ಬಿಜೆಪಿ ಪಾಲಿಗೆ ಜಟಿಲವಾಗಿದೆ ಎನ್ನುವುದರ ಸೂಚನೆ.
ಕಾರ್ಕಳಕ್ಕೆ ಸುನಿಲ್ ಕುಮಾರ್
ಕಾರ್ಕಳ ಕ್ಷೇತ್ರಕ್ಕೆ ನಿರೀಕ್ಷೆಯಂತೆಯೇ ಸುನಿಲ್ ಕುಮಾರ್ ಅವರನ್ನು ಕಣಕ್ಕಿಳಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಾರ್ಕಳವೊಂದೇ ತಕರಾರು ಇಲ್ಲದ ಕ್ಷೇತ್ರವಾಗಿತ್ತು. ಉಳಿದ ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿ ಯಾರು ಎಂಬ ಸುಳಿವು ಇರಲಿಲ್ಲ.
ಸುಳ್ಯ, ಪುತ್ತೂರು ಮಹಿಳೆಯರಿಗೆ
ದಕ್ಷಿಣ ಕನ್ನಡದಲ್ಲಿ ಸುಳ್ಯ ಮತ್ತು ಪುತ್ತೂರಿನಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸಲಾಗಿದೆ. ಸುಳ್ಯ ಮೀಸಲು ಕ್ಷೇತ್ರದಲ್ಲಿ ಸಚಿವ ಅಂಗಾರ ಬದಲಾಗಿ ಭಾಗೀರಥಿ ಮುರುಳ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಪುತ್ತೂರಿನಿಂದ ಆಶಾ ತಿಮ್ಮಪ್ಪ ಅವರನ್ನು ಕಣಕ್ಕಿಳಿಸಲಾಗಿದೆ. ಈ ಎರಡು ಕ್ಷೇತ್ರಗಳ ಬಗ್ಗೆ ಹಿಂದಿನಿಂದಲೂ ಅಪಸ್ವರಗಳಿದ್ದವು. ಇಲ್ಲಿ ಮಹಿಳೆಯರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಹೊಸ ಪ್ರಯೋಗ ಮಾಡಿದೆ. ಉಳಿದಂತೆ ಬೆಳ್ತಂಗಡಿಯಿಂದ ಹರೀಶ್ ಪೂಂಜ, ಮೂಡಬಿದಿರೆಯಿಂದ ಉಮಾನಾಥ ಕೋಟ್ಯಾನ್, ಮಂಗಳೂರಿನಿಂದ ಸುರೇಶ್ ಕುಂಪಲ, ಮಂಗಳೂರು ನಗರ ಉತ್ತರದಿಂದ ಭರತ್ ಶೆಟ್ಟಿ, ಮಂಗಳೂರು ನಗರ ದಕ್ಷಿಣದಿಂದ ವೇದವ್ಯಾಸ ಕಾಮತ್, ಬಂಟ್ವಾಳದಿಂದ ರಾಜೇಶ್ ನಾಯ್ಕ್ ಟಿಕೆಟ್ ಪಡೆದುಕೊಂಡಿದ್ದಾರೆ.