ಪುತ್ತೂರು: ಮಾಡಾವು ನೂಜಿ ಡಾ. ಪಿ. ಬಿ. ರೈ ಪ್ರತಿಷ್ಠಾನದಿಂದ ನೀಡಲಾಗುವ ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ಪ್ರದಾನ ಸಮಾರಂಭವು ಏ.16 ರಂದು ಬೆಳಗ್ಗೆ ದಂಬೆಕಾನ ಬಾಳಮೂಲೆ ಪಟ್ಟೆ ಮನೆಯಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಗೌರವಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ 100 ಕ್ಕೂ ಅಧಿಕ ಮಂದಿ ಸಮಾಜದ ವಿವಿಧ ಕ್ಷೇತ್ರಗಳ ಮೇರು ಸಾಧಕರು ಹಾಗೂ ತೆರೆಮರೆಯ ಸಾಧಕರನ್ನು ಗುರುತಿಸಿ ಪ್ರಶಸ್ತಿಯ ಗೌರವ ನೀಡಲಾಗಿದೆ ಎಂದರು.
ಸಾಧಕರಾದ ದಂಬೆಕಾನ ಐತಪ್ಪ ರೈ, ಚಿಲ್ಮೆತ್ತಾರು ಸಂಜೀವ ರೈ, ಸುಳ್ಯ ಕೆ.ವಿ.ಜಿ. ಸಂಸ್ಥೆಯ ಡಾ. ಚಿದಾನಂದ ಕೆ.ವಿ. ಹಾಗೂ ಸುಳ್ಯದ ಹಿರಿಯ ಜನಪ್ರತಿನಿಧಿ ಎಸ್. ಅಂಗಾರ ಅವರಿಗೆ ಈ ವರ್ಷ ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಡಾ. ಚಿದಾನಂದ ಕೆ.ವಿ. ಹಾಗೂ ಎಸ್. ಅಂಗಾರ ಅವರಿಗೆ ಅವರ ಮುಕ್ತ ದಿನವನ್ನು ತಿಳಿದುಕೊಂಡು ಮನೆಗೆ ತೆರಳಿ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.
ಡಾ.ಪಿ. ಬಿ. ರೈ ಪ್ರತಿಷ್ಠಾನದ ಗೌರವಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಐಎಎಸ್ ಅಧಿಕಾರಿ ಪ್ರಮೋದ್ ಕುಮಾರ್ ಮತ್ತು ವಿಜಯಾಬ್ಯಾಂಕ್‌ನ ನಿವೃತ್ತ ಎಜಿಎಂ ಎ. ಕೃಷ್ಣ ರೈ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬೆಂಗಳೂರಿನ ಹಿರಿಯ ಪತ್ರಿಕೋದ್ಯಮಿ ಮೂಡಂಬೈಲು ನಾರಾಯಣ ಶೆಟ್ಟಿ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಸಹಕಾರ ರತ್ನ ದಂಬೆಕಾನ ಸದಾಶಿವ ರೈ ತಿಸಿದರು.