ಶತಮಾನ ಕಳೆದರೂ ಪತ್ರಿಕೆಗಳು ವಿಶ್ವಾಸಪೂರ್ಣ: ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಉಪನ್ಯಾಸದಲ್ಲಿ ಸುಧಾಕರ ಸುವರ್ಣ

ಪುತ್ತೂರು: ವರ್ಷಗಳು ಕಳೆದಂತೆ ಮಾಧ್ಯಮ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸುತ್ತಿವೆ. ಸುದ್ದಿಗಳು ವೇಗವಾಗಿ ಜನರನ್ನು ತಲುಪುತ್ತಿವೆ. ಆದರೆ ಟಿ.ವಿ., ೨೪*೭ ನ್ಯೂಸ್,  ವೆಬ್ ನ್ಯೂಸ್, ಯೂಟ್ಯೂಬ್ ಚಾನಲ್, ಲೈವ್ ನ್ಯೂಸ್ ಯುಗದಲ್ಲೂ ದಿನಪತ್ರಿಕೆಗಳು ತಮ್ಮ ವಿಶ್ವಾಸಾರ್ಹತೆ ಉಳಿಸಿಕೊಂಡಿವೆ. ನಿಖರ ಸುದ್ದಿಗಳಿಗಾಗಿ ಜನತೆ ದಿನಪತ್ರಿಕೆಯನ್ನೇ ಅವಲಂಬಿಸಿದ್ದಾರೆ ಎಂದು ಪುತ್ತೂರಿನ ವಿಜಯ ಕರ್ನಾಟಕ ದಿನಪತ್ರಿಕೆ ಜಿಲ್ಲಾ ವರದಿಗಾರ ಸುಧಾಕರ ಸುವರ್ಣ ತಿಂಗಳಾಡಿ ಹೇಳಿದರು.

ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಹಾಗೂ ಐಕ್ಯೂಎಸಿ ಘಟಕದ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಪತ್ರಿಕೋದ್ಯಮದ ಸಾಧ್ಯತೆ ಮತ್ತು ಸವಾಲುಗಳು’ ವಿಚಾರದ ಕುರಿತು ಶುಕ್ರವಾರ ಮಾತನಾಡಿದರು.

ಮಾಧ್ಯಮ ಜಗತ್ತು ಇಂದು ಉದ್ಯಮದ ರೂಪ ಪಡೆದಿದೆ. ಪತ್ರಕರ್ತನೂ ಖಾಸಗಿ ಕಂಪನಿಗಳಲ್ಲಿ ಗಳಿಸುವ ಗೌರವಯುತ ಸಂಪಾದನೆಗೆ ಸರಿಸಮವಾಗಿ ಗಳಿಸಬಹುದಾಗಿದೆ. ಉತ್ತಮ ಬರವಣಿಗೆ, ವಿಚಾರಗಳನ್ನು ಸಮರ್ಥವಾಗಿ ಜನತೆಯ ಮುಂದಿಡುವ ಕೌಶಲವನ್ನು ಹೊಂದಿರುವವರಿಗೆ ಹೆಚ್ಚಿನ ಬೇಡಿಕೆಯಿದೆ. ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್, ವೆಬ್ ಸೈಟ್ ಮೂಲಕ ಸ್ವ- ಉದ್ಯೋಗದ ಮಾದರಿಯಲ್ಲಿಯೂ ಬದುಕು ಕಟ್ಟಿಕೊಳ್ಳುವ ಅವಕಾಶಗಳಿವೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.



































 
 

ಸ್ವಾತಂತ್ರ್ಯ ಪೂರ್ವದಿಂದಲೇ ಪತ್ರಿಕೆಗಳು ದೇಶದಲ್ಲಿ ಪ್ರಭುತ್ವ ಸಾಧಿಸಿದ್ದವು. ಸ್ವಾತಂತ್ರ್ಯ ಪಡೆಯುವ ಸಲುವಾಗಿಯೇ ಮಹನೀಯರು ಪತ್ರಿಕೆಯಲ್ಲಿ ತಮ್ಮ ಸಂದೇಶಗಳನ್ನು ಅಥವಾ ಲೇಖನಗಳನ್ನು ಬರೆದು ಜನರನ್ನು ತಲುಪುತ್ತಿದ್ದರು. ಈಗೀಗ ವಿವಿಧ ನವ ಮಾಧ್ಯಮಗಳು ಅನಾವರಣಗೊಳ್ಳುತ್ತಿದ್ದರೂ ದಿನಪತ್ರಿಕೆಗಳ ಓದುಗರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ, ಇಂದು ವಿವಿಧ ರೀತಿಯ ನವ ಮಾಧ್ಯಮಗಳು ನಮ್ಮ ಸುತ್ತಮುತ್ತ ಕಾರ್ಯನಿರ್ವಹಿಸುತ್ತಿವೆ. ಡಿಜಿಟಲ್ ಮಾಧ್ಯಮಗಳ ಮೂಲಕ ಸುದ್ದಿಗಳು ವೇಗವಾಗಿ ಜನತೆಯನ್ನು ತಲುಪುತ್ತಿವೆ. ಆದರೂ ಮುದ್ರಣ ಮಾಧ್ಯಮ ತಮ್ಮದೇ ಆದ ಗಾಂಭಿರ್ಯ ಉಳಿಸಿಕೊಂಡಿವೆ. ಜನತೆ ಇಂದಿಗೂ ದಿನ ಪತ್ರಿಕೆಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ ಎಂದು ಹೇಳಿದರು.

ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ ಕುಮಾರ್ ಕಮ್ಮಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ದೀಪಿಕಾ, ನವ್ಯಾ ಪ್ರಾರ್ಥಿಸಿದರು. ಮೇಘಾ ಕಿರಿಮಂಜೇಶ್ವರ ವಂದಿಸಿ, ಪಂಚಮಿ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top