ರಾಮ ಮಾತ್ರವಲ್ಲ ರಾವಣನಂತಾಗುವುದು ಕೂಡ ಕಷ್ಟ

ರಾಮನ ಪಾತ್ರ ವಿಶ್ವದ ಅದ್ಭುತ

ನನ್ನ ಜನ್ಮ ನಕ್ಷತ್ರ ಪುನರ್ವಸು. ಅದು ಶ್ರೀ ರಾಮಚಂದ್ರನ ಜನ್ಮ ನಕ್ಷತ್ರ ಕೂಡ. ನಾನು ಕೂಡ ರಾಮನ ಹಾಗೆ ನನ್ನ ಹೆತ್ತವರಿಗೆ ಹಿರಿಯ ಮಗ. ಆದರೆ ನಮ್ಮ ಹೋಲಿಕೆಯು ಅಷ್ಟಕ್ಕೇ ನಿಂತು ಬಿಡುತ್ತದೆ.
ಏಕೆಂದರೆ ಶ್ರೀರಾಮನ ಹಾಗೆ ಬದುಕುವುದು ತುಂಬಾನೆ ಕಷ್ಟ. ಶ್ರೀಕೃಷ್ಣನ ಹಾಗೆ ಯೋಚನೆ ಮಾಡುವುದು ಕೂಡ ಕಷ್ಟ. ನನಗೆ ಎರಡೂ ಈವರೆಗೆ ಸಾಧ್ಯವಾಗಲೇ ಇಲ್ಲ. ಅದರಲ್ಲಿಯೂ ಮೊದಲನೆಯದ್ದು ಭಾರಿ ಕಷ್ಟ.

ವಾಲ್ಮೀಕಿ ಕೆತ್ತಿದ್ದು ಅದ್ಭುತ ವ್ಯಕ್ತಿತ್ವ ರಾಮ



































 
 

ಶ್ರೀ ರಾಮನ ಬಗ್ಗೆ ಬೇರೆ ಬೇರೆ ವೇದಿಕೆಗಳಲ್ಲಿ ಗಂಟೆಗಳ ಕಾಲ ಮಾತಾಡಿದ್ದೇನೆ. ಅವನ ಜೀವನದ ಪ್ರತಿ ಒಂದು ಘಟನೆ ಕೂಡ ನನಗೆ ಬೆರಗನ್ನೇ ಮೂಡಿಸುತ್ತದೆ. ಆದಿಕವಿ ವಾಲ್ಮೀಕಿ ರಾಮಾಯಣದ ಮೂಲಕ ಕೆತ್ತಿದ ಶ್ರೀ ರಾಮನ ಪಾತ್ರ ಅದು ವಿಶ್ವದ ಅದ್ಭುತ.

ಅಚ್ಚರಿ ಮೂಡಿಸಿದ ಒಂದೆರಡು ಘಟನೆಗಳು

ರಾಮನಿಗೆ ಪಟ್ಟಾಭಿಷೇಕದ ಸಂಕಲ್ಪ ದಶರಥ ಮಹಾರಾಜನು ತೆಗೆದುಕೊಂಡಾಗಿತ್ತು. ಅದಕ್ಕಾಗಿ ಹಂಬಲಪಟ್ಟವರು ಅಯೋಧ್ಯೆಯ ಪ್ರತಿ ಒಬ್ಬ ನಾಗರಿಕ. ರಾಮ ಅರಸ ಆಗಬಾರದು ಅಂತ ಒಬ್ಬರೂ ಹೇಳಿರಲಿಲ್ಲ. ಪಟ್ಟಾಭಿಷೇಕಕ್ಕೆ ದಿನ ನಿಗದಿ ಮಾಡಿದ ದಶರಥ ಮಹಾರಾಜನು ಇಡೀ ಅಯೋಧ್ಯಾ ನಗರವನ್ನು ಸಿಂಗಾರ ಮಾಡಿ ಪಟ್ಟಕ್ಕೆ ಸಿದ್ಧತೆ ಮಾಡಿದ್ದ.
ಆದರೆ ಮಂಥರೆ ಎಂಬ ಅತೃಪ್ತ ಆತ್ಮ ಕೈಕೇಯಿ ರಾಣಿಯ ತಲೆಯನ್ನು ಕೆಡಿಸಿ ರಾಮನ ಪಟ್ಟಾಭಿಷೇಕಕ್ಕೆ ವಿಘ್ನವನ್ನು ಒಡ್ಡಿದ್ದು ನಮಗೆಲ್ಲ ಗೊತ್ತಿದೆ. ಹಿಂದೆ ಯಾವುದೋ ಒಂದು ಕಾಲದಲ್ಲಿ ಕೊಟ್ಟಿದ್ದ ಎರಡು ವರಗಳನ್ನು ಕೈಕೇಯಿ ರಾಣಿ ಆ ಮಧ್ಯರಾತ್ರಿ ದಶರಥ ಮಹಾರಾಜನಿಗೆ ಕೇಳಿದಾಗ ರಾಜನು ಅದನ್ನು ನೆರವೇರಿಸಲು ಆಗದೇ ಕುಸಿದು ಬಿದ್ದ ಕಥೆ ಕೂಡ ನಮಗೆ ಗೊತ್ತಿದೆ.

ಪಿತೃವಾಕ್ಯಂ ಶಿರೋಧಾರ್ಯಂ

ಆಗ ರಾಮನು ಕಟ್ಟುಬಿದ್ದದ್ದು ಯಾವುದೋ ಒಂದು ಗಳಿಗೆಯಲ್ಲಿ ತನ್ನ ಅಪ್ಪ ತನ್ನ ಚಿಕ್ಕಮ್ಮನಿಗೆ ಕೊಟ್ಟಿದ್ದ ಒಂದು ಮಾತಿಗೆ. ಅದನ್ನು ತಂದೆ ನೇರವಾಗಿ ಹೇಳದೆ ಕಣ್ಣೀರನ್ನು ಸುರಿಸುತ್ತ ನೆಲಕ್ಕೆ ಒರಗಿದಾಗಲೂ ರಾಮನಿಗೆ ಅದು ಖಂಡಿತವಾಗಿಯೂ ‘ಪಿತೃವಾಕ್ಯಮ್ ಶಿರೋಧಾರ್ಯಂ’!
ರಾಮ ಅರಸ ಆಗಬಾರದು ಎಂದು ರಾಣಿ ಕೈಕೇಯಿಯ ಮನಸ್ಸಿನಲ್ಲಿ ಕೂಡ ಇರಲಿಲ್ಲ. ಆದರೆ ಆಕೆಯಲ್ಲಿ ಆ ಭ್ರಮೆಯನ್ನು ಮತ್ತು ಪುತ್ರ ವಾತ್ಸಲ್ಯವನ್ನು ಹುಟ್ಟಿಸಿದವಳು ಗೂನಜ್ಜಿ ಮಂಥರೆ. ಅವಳು ಹೇಗೂ ಅಯೋಧ್ಯೆಯ ಪ್ರಜೆ ಆಗಿರಲಿಲ್ಲ. ಅವಳು ಕೈಕೇಯಿಯ ತಾಯಿಯ ಮನೆಯಿಂದ ಕೈಕೇಯಿ ಜತೆಗೆ ಬಂದವಳು. ಒಂದು ರೀತಿಯಲ್ಲಿ ಶ್ರೀರಾಮನು ಅರಸನಾಗಲು ಅಯೋಧ್ಯೆಯಲ್ಲಿ ನೂರು ಪ್ರತಿಶತ ಬಹುಮತದ ಮುದ್ರೆ ಇತ್ತು. ಆದರೆ ರಾಮ ತಂದೆ ಬಹಳ ಹಿಂದೆ ತನ್ನ ರಾಣಿಗೆ ಕೊಟ್ಟ ಒಂದು ಮಾತಿಗೆ ಕಟ್ಟುಬಿದ್ದು ಅರಸೊತ್ತಿಗೆಯನ್ನು ಎಡಗಾಲಿನಿಂದ ಒದ್ದು ಕಾಡಿಗೆ ಹೋದವನು. ತನ್ನ ಹಕ್ಕಿನ ರಾಜ್ಯವನ್ನು ತ್ಯಾಗ ಮಾಡಲು ಆತ ಹಿಂದೆ ಮುಂದೆ ನೋಡಲಿಲ್ಲ.
‘ನೀನು ಕೊಟ್ಟ ಮಾತಿಗೆ ನಾನು ಹೇಗೆ ಹೊಣೆ ಆಗಬೇಕು?’ ಎಂದು ಅಪ್ಪನನ್ನು ಒಂದು ಮಾತು ಕೂಡ ರಾಮ ಕೇಳಲಿಲ್ಲ. ಆ ರೀತಿಯ ಸಣ್ಣ ಯೋಚನೆ ಕೂಡ ಆತನ ಮನದಲ್ಲಿ ಬರಲಿಲ್ಲ ಅಂದರೆ ಅದು ಅದ್ಭುತವೇ. ಸರ್ವಾಲಂಕಾರ ಆಗಿದ್ದ ಅಯೋಧ್ಯೆಯ ನಡುವೆ ಯಾವ ವಿಷಾದ ಕೂಡ ಇಲ್ಲದೆ ಎದ್ದು ಹೋಗುವುದು ಸುಲಭ ಅಲ್ಲ. ಅದು ರಾಮನಿಗೆ ಮಾತ್ರ ಸಾಧ್ಯವಾಗುವ ನಡೆ.

ರಾಮನಿಗೆ ನೂರು ಪ್ರತಿಶತ ಜನಮತದ ಬೆಂಬಲ ಇತ್ತು

ಆಗ ಪೂರ್ಣ ಜನಮತ ತನ್ನ ಪರವಾಗಿ ಇದ್ದಾಗ ರಾಮ ಆಡಳಿತ ಮಾಡಬಹುದಿತ್ತು ಎಂದು ನನಗೆ ಹಲವರು ಕೇಳಿದ್ದಾರೆ. ಆದರೆ ಆಗ ರಾಮ ಕೇವಲ ದಶರಥನ ಮಗ ಮಾತ್ರ ಆಗಿದ್ದ. ಅರಸ ಆಗಿರಲಿಲ್ಲ ಅನ್ನುವುದು ನನ್ನ ಉತ್ತರ.
ಮುಂದೆ ರಾಣಿ ಕೈಕೇಯಿ ಕಾಡಿಗೆ ಬಂದು ತಮ್ಮ ತಪ್ಪಿಗೆ ಕ್ಷಮೆ ಕೇಳಿ ಮತ್ತೆ ಅಯೋಧ್ಯೆಗೆ ಬರಬೇಕು ಎಂದು ಎಷ್ಟು ವಿನಂತಿ ಮಾಡಿದರೂ ರಾಮಚಂದ್ರನ ಮನಸ್ಸು ಒಂದಿಷ್ಟೂ ವಿಚಲಿತ ಆಗಲಿಲ್ಲ. ಕಣ್ಣೀರು ಸುರಿಸುತ್ತಾ ಬಂದ ಭರತನನ್ನು ಧೈರ್ಯ ತುಂಬಿಸಿ ಅರಸನಾಗಲು ಮಾನಸಿಕವಾಗಿ ಸಿದ್ಧತೆ ಮಾಡಿ ಕಳುಹಿಸಿದ್ದು ಅದೇ ರಾಮ. ಈ ರೀತಿಯ ನಿರ್ಧಾರಗಳು ರಾಮನ ವ್ಯಕ್ತಿತ್ವದ ಕೈಗನ್ನಡಿ.
ಮುಂದೆ ಅದೇ ರಾಮ ರಾವಣನ ವಧೆಯಾದ ನಂತರ ಅತ್ಯಂತ ವಿಧಿವತ್ತಾಗಿ ಲಂಕೆಯಲ್ಲಿ ಆತನ ಅಂತಿಮ ಕ್ರಿಯಾಕರ್ಮಗಳನ್ನು ಮುಗಿಸುತ್ತಾನೆ. ಆಗ ರಾಮ ಹೇಳಿದ ಎರಡು ಮಾತುಗಳನ್ನು ಕೇಳಿ.

ರಾಮನು ದ್ವೇಷಸಿದ್ದು ರಾವಣನನ್ನು ಅಲ್ಲ

‘ನಾನು ದ್ವೇಷಿಸಿದ್ದು ರಾವಣನನ್ನು ಅಲ್ಲ. ಅವನ ಒಳಗಿದ್ದ ರಾವಣತ್ವವನ್ನು. ಯಾರನ್ನೇ ಆದರೂ ಮರಣದ ನಂತರ ದ್ವೇಷ ಮಾಡಬಾರದು. ಈ ರಾವಣನು ಮಹಾ ಬ್ರಾಹ್ಮಣ. ಆತನು ದೈವಭಕ್ತ. ಆದ್ದರಿಂದ ಅವನನ್ನು ಗೌರವಿಸುವುದು ನಮ್ಮ ಕರ್ತವ್ಯ’

ಸೀತೆಯನ್ನು ಅಗ್ನಿಪರೀಕ್ಷೆ ಒಡ್ಡಿದ್ದು ಸರಿಯಾ?

ಮುಂದೆ ಅದೇ ರಾಮಚಂದ್ರ ಅಯೋಧ್ಯೆಗೆ ಬಂದು ಪಟ್ಟಾಭಿಷೇಕ ಆಗುವ ಮೊದಲು ತನ್ನ ಪತ್ನಿ ಸೀತೆಯನ್ನು ಅಯೋಧ್ಯೆಯ ಜನರ ಮುಂದೆ ಅಗ್ನಿಪರೀಕ್ಷೆಗೆ ಒಡ್ಡಿದ ವಿಷಯದ ಬಗ್ಗೆ ತುಂಬಾ ಟೀಕೆಗಳು ಇವೆ. ಅದೇ ರೀತಿ ಒಬ್ಬ ಸಾಮಾನ್ಯ ಅಗಸನ ಮಾತನ್ನು ಕೇಳಿ ತನ್ನ ಕೈ ಹಿಡಿದ ಮಡದಿ ಸೀತೆಯನ್ನು ಮತ್ತೆ ಕಾಡಿಗೆ ಕಳುಹಿಸಿದ ನಿರ್ಧಾರದ ಬಗ್ಗೆ ಕೂಡ ಸಾಕಷ್ಟು ಟೀಕೆಗಳು ಬಂದಿವೆ.
ಆದರೆ ಅವೆರಡು ಕೂಡ ಆತನು ರಾಜಾರಾಮನಾಗಿ ತೆಗೆದುಕೊಂಡ ನಿರ್ಧಾರಗಳು. ಸೀತಾರಾಮನಾಗಿ ತೆಗೆದುಕೊಂಡ ನಿರ್ಧಾರಗಳು ಅಲ್ಲ.

ರಾಜನ ನಡೆಗಳು ಸಂಶಯಾಸ್ಪದ ಆಗಿರಬಾರದು

ರಾಜಾರಾಮನಾಗಿ ತನ್ನ ಪ್ರತಿಯೊಬ್ಬ ಪ್ರಜೆಯ ಮುಂದೆ ಸಂಶಯಾತೀತವಾಗಿ ಇರಬೇಕು ಮತ್ತು ಕಾಣಿಸಿಕೊಳ್ಳಬೇಕು ಎನ್ನುವುದು ರಾಜನ ಕರ್ತವ್ಯ. ತಾನು ನೆಟ್ಟಗಿರುವುದು ಮಾತ್ರವಲ್ಲ, ತನ್ನ ನೆರಳು ಕೂಡ ನೆಟ್ಟಗಿರಬೇಕು ಎಂದು ಭಾವಿಸುವುದು ಒಬ್ಬ ರಾಜನ ಆದ್ಯತೆ. ಒಬ್ಬ ಅಗಸನೂ ಅರಸನಿಗೆ ಒಬ್ಬ ಗೌರವಾನ್ವಿತ ಪ್ರಜೆಯೇ ಆಗಿದ್ದಾನೆ. ಆತನ ಸಂಶಯವನ್ನು ಕೂಡ ನಿವಾರಣೆ ಮಾಡುವುದು ಒಬ್ಬ ಅರಸನ ಆದ್ಯತೆ. ಹೀಗೆ ಯಾವ ಕೋನದಲ್ಲಿ ನೋಡಿದರೂ ರಾಮನ ವ್ಯಕ್ತಿತ್ವದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಕಂಡು ಬರುವುದೇ ಇಲ್ಲ. ಆದ್ದರಿಂದ ರಾಮ ಆಗುವುದು ಎಲ್ಲರಿಗೂ ಕಷ್ಟ.

ರಾವಣ ಆಗುವುದು ಕಷ್ಟವೇ

ರಾಮ ಆಗುವುದು ಎಷ್ಟು ಕಷ್ಟವೋ ರಾವಣ ಆಗುವುದು ಅಷ್ಟೇ ಕಷ್ಟ. ಕವಿ ವಾಲ್ಮೀಕಿಯು ಕಥಾನಾಯಕ ರಾಮನ ಪಾತ್ರಕ್ಕೆ ಎಷ್ಟು ಶಕ್ತಿ ತುಂಬಿದ್ದಾನೋ ಖಳನಾದ ರಾವಣನ ಪಾತ್ರಕ್ಕೆ ಅಷ್ಟೇ ಶಕ್ತಿಯನ್ನು ತುಂಬಿದ್ದಾನೆ. ಆತನ ಪಾತ್ರವೂ ಅಮೋಘವೇ ಆಗಿದೆ.
ಸೀತಾ ಸ್ವಯಂವರದಲ್ಲಿ ತನಗಾದ ಅಪಮಾನದಿಂದ ಕುದ್ದು ಹೋಗಿದ್ದ ರಾವಣನ ಅಂತರ್ಯ ಸೀತೆಯನ್ನು ಒಮ್ಮೆ ಗೆಲ್ಲಬೇಕು ಎಂದು ಮಾತ್ರ ಆಗಿತ್ತು. ಅನುಭವಿಸುವುದು ಆಗಿರಲಿಲ್ಲ. ಅನುಭವಿಸುವ ಆಸೆ ಇದ್ದಿದ್ದರೆ ಅವನದ್ದೇ ಲಂಕೆಯಲ್ಲಿ ಏಕಾಂಗಿ ಆಗಿದ್ದ ಸೀತೆಯು ತನ್ನ ಮಾನವನ್ನು ಉಳಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ.

ಹೀಗೊಂದು ಕಥೆಯನ್ನು ನಾನು ಓದಿದ್ದು

ಈ ಕಥೆಯು ಮೂಲ ರಾಮಾಯಣದಲ್ಲಿ ಇಲ್ಲ. ಆದರೆ ಅದ್ಭುತವಾಗಿದೆ. ಕಾಲ್ಪನಿಕ ಎಂದು ಬೇಕಾದರೂ ಕರೆಯಿರಿ. ಸೀತೆಯನ್ನು ಹುಡುಕುತ್ತಾ ಲಂಕೆಗೆ ಬಂದಿದ್ದ ಶ್ರೀರಾಮನಿಗೆ ರಾವಣನ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಅಲ್ಲಿ ಕೇಳಿಬರುತ್ತವೆ. ಆತನು ಮಹಾಯೋಧ. ಆತನನ್ನು ಸೋಲಿಸುವುದು ಖಂಡಿತ ಸುಲಭದ ಕೆಲಸ ಅಲ್ಲ ಎಂದು ಗೊತ್ತಾಗುತ್ತದೆ. ಅದಕ್ಕೆ ‘ಶತ್ರು ಸಂಹಾರ’ ಯಾಗವನ್ನು ಮಾಡಬೇಕು ಎಂದು ಅಲ್ಲಿದ್ದ ಹಿರಿಯರು ಹೇಳುತ್ತಾರೆ.
ಲಂಕೆ ಹೇಳಿ ಕೇಳಿ ರಾಕ್ಷಸರ ನಾಡು. ಅಲ್ಲಿ ಯಾಗ ಮಾಡಬೇಕು ಅಂತಾದರೆ ಪುರೋಹಿತರು ಯಾರು ಸಿಗುತ್ತಾರೆ? ಆಗ ಹಿರಿಯರು ಇನ್ನೊಂದು ಉಪಾಯವನ್ನು ಹೇಳುತ್ತಾರೆ. ಲಂಕೆಯಲ್ಲಿ ಒಬ್ಬನೇ ಬ್ರಾಹ್ಮಣ ಇರುವುದು ಅದು ರಾವಣ. ಆತನಿಗೆ ಎಲ್ಲಾ ವೇದ ವಿದ್ಯೆಗಳು ಗೊತ್ತಿವೆ. ಆತ ಪುರೋಹಿತನಾಗಿ ಬರಲು ಒಪ್ಪಿದರೆ ಆದೀತು ಎಂಬ ಅಭಿಪ್ರಾಯ ಬಂತು.
ತನ್ನದೇ ವಧೆ ಮಾಡುವ ‘ಶತ್ರುಸಂಹಾರ ಮಾಡುವ ಯಾಗ’ಕ್ಕೆ ಪುರೋಹಿತನಾಗಿ ರಾವಣನು ಬರಬಹುದೇ? ಈ ಪ್ರಶ್ನೆ ಎದ್ದಾಗ ನೋಡೋಣ, ಒಮ್ಮೆ ಪ್ರಯತ್ನ ಮಾಡೋಣ ಎಂಬ ಮಾತು ಬಂತು. ಆಗ ರಾವಣನಿಗೆ ಶ್ರೀರಾಮನ ಕಡೆಯಿಂದ ಗೌರವಪೂರ್ವಕ ಆಮಂತ್ರಣ ಹೋಯಿತು. ರಾವಣ ಬರಲು ಸಾಧ್ಯ ಇಲ್ಲವೇ ಇಲ್ಲ ಎಂದು ಎಲ್ಲರೂ ನಂಬಿದ್ದರು.
ಆದರೆ ಶ್ರೀರಾಮನ ಆಮಂತ್ರಣಕ್ಕೆ ತಲೆ ಬಾಗಿ ರಾವಣ ಬಂದೇ ಬಿಟ್ಟ. ಪುರೋಹಿತನಾಗಿ ಕೂತು ‘ಶತ್ರು ಸಂಹಾರ’ ಯಾಗವನ್ನು ಪೂರ್ತಿ ಮಾಡಿದ. ಪೂರ್ಣಾಹುತಿ ಆದ ನಂತರ ಶ್ರೀರಾಮನು ಪುರೋಹಿತ ರಾವಣನ ಪಾದ ಮುಟ್ಟಿ ನಮಸ್ಕಾರ ಮಾಡಿದ.
ಆಗ ರಾವಣ ರಾಮನಿಗೆ ಕೈ ಮುಗಿದು ಹೇಳಿದ ಮಾತು ಕೇಳಿ.
‘ಶ್ರೀರಾಮ, ಸೀತೆಯನ್ನು ಅಪಹರಣ ಮಾಡಿಕೊಂಡು ಬಂದ ನಂತರ ಪಾಪ ಪ್ರಜ್ಞೆಯಿಂದ ಸರಿಯಾಗಿ ನಿದ್ದೆ ಬರುತ್ತಿಲ್ಲ. ನಿದ್ದೆ, ವಿಶ್ರಾಂತಿ ಇಲ್ಲದೆ ದಣಿದು ಬಿಟ್ಟಿದ್ದೇನೆ. ನಿನ್ನ ಕಾಲ ಮೇಲೆ ಒಂದು ಗಳಿಗೆ ಮಲಗಬೇಕು ಅನ್ನಿಸ್ತಾ ಇದೆ. ಅನುಮತಿ ಕೊಡುವೆಯಾ?’
ತನ್ನ ಗೆಲುವಿಗೆ ಬೇಕಾಗಿ ದೊಡ್ಡ ಯಾಗವನ್ನೇ ಮಾಡಿಕೊಟ್ಟ ರಾವಣನ ವಿನಂತಿಯನ್ನು ಶ್ರೀರಾಮನು ಬೇಡ ಅನ್ನಲು ಸಾಧ್ಯವೇ ಇರಲಿಲ್ಲ. ಶ್ರೀರಾಮ ಅಸ್ತು ಅಂದ. ರಾವಣನು ಪುಟ್ಟ ಮಗುವಿನ ಹಾಗೆ ರಾಮನ ಕಾಲಿನ ಮೇಲೆ ದೀರ್ಘ ಕಾಲ ಮೈಮರೆತು ಮಲಗಿದ. ಎಲ್ಲವನ್ನೂ ಮರೆತು ಬಿಟ್ಟ. ತನ್ನ ಪಾಪದ ಭೀತಿಯನ್ನು ರಾಮನ ಪಾದಮೂಲದಲ್ಲಿ ಇಟ್ಟು ಎದೆಯ ಭಾರವನ್ನು ಇಳಿಸಿ ಹೊರಟು ಹೋದ!
ಈಗ ಹೇಳಿ ರಾವಣ ಆಗುವುದು ಅಷ್ಟು ಸುಲಭವಾ?
✒️ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top