ಪುತ್ತೂರು: ಮಹಿಳೆಯೊಂದಿಗಿನ ಜನಪ್ರತಿನಿಧಿಯ ಫೊಟೋ ವೈರಲ್ ಮಾಡಿರುವುದು ಯಾವ ಸಂದರ್ಭದಲ್ಲಿ ಎನ್ನುವುದು ಮುಖ್ಯವಾಗುತ್ತದೆ. ಚುನಾವಣೆ ಸಂದರ್ಭದಲ್ಲಿ, ಅದೂ ಅಭ್ಯರ್ಥಿ ಆಯ್ಕೆಗೆ ಮೊದಲೇ ಮಹಿಳೆಯೊಂದಿಗಿನ ಫೊಟೋವನ್ನು ವೈರಲ್ ಮಾಡಿರುವುದು ದ್ರೋಹಕ್ಕೆ ಸಮನಾದ ಕೃತ್ಯ. ಆದ್ದರಿಂದ ಮಹಿಳೆಗೆ ಅಗೌರವ ತೋರಿಸಿದ ಈ ಘಟನೆಯ ಕುರಿತು ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಸತ್ಯವನ್ನು ಸಮಾಜಕ್ಕೆ ಬಹಿರಂಗಪಡಿಸುವಂತೆ ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಒತ್ತಾಯಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಇಂತಹ ಘಟನೆಗಳೇನು ಹೊಸತಲ್ಲ. ರೇಣುಕಾಚಾರ್ಯರಿಂದ ಹಿಡಿದು ಇಂದಿನವರೆಗೆ ಹಲವು ಘಟನೆಗಳಿಗೆ ಬಿಜೆಪಿ ಸಾಕ್ಷಿಯಾಗಿದೆ. ಗೋ ಮಾತೆ ಎನ್ನುತ್ತಲೇ ಗೋವಿನ ಮಾಂಸವನ್ನು ರಫ್ತು ಮಾಡುವಲ್ಲಿ ಬಿಜೆಪಿಗರು ಮುಂದಿದ್ದಾರೆ. ಅದೇ ರೀತಿ, ಮಾತೆಯರು ಎಂದು ಕರೆಯುತ್ತಲೇ, ಅದೇ ಮಾತೆಯರ ಬಗ್ಗೆ ಕೀಳಾಗಿ ವರ್ತಿಸುತ್ತಿದ್ದಾರೆ. ಮಾತೆಯರನ್ನು ಕೆಟ್ಟದಾಗಿ ಬಳಸಿಕೊಳ್ಳುವುದು ತಪ್ಪು. ಅದೇ ರೀತಿ ಮಹಿಳೆಯರ ಬಗ್ಗೆ ಫೊಟೋ ತೆಗೆದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದು ಕೂಡ ತಪ್ಪೇ ಆಗಿದೆ. ಆದರೆ ಈ ಬಗ್ಗೆ ಯಾವುದೇ ಹೇಳಿಕೆ ನೀಡದೇ ಬಿಜೆಪಿ ಮೌನ ವಹಿಸಿರುವುದೇಕೆ ಎಂದು ಅವರು ಪ್ರಶ್ನಿಸಿದರು.
ನಿಯೋಗವೊಂದು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರನ್ನು ಭೇಟಿ ಆದ ತಕ್ಷಣವೇ, ಫೊಟೋವನ್ನು ವೈರಲ್ ಮಾಡಲಾಗುತ್ತದೆ. ಅಂದರೆ ಇದರ ಅರ್ಥವೇನು? ಬಿಜೆಪಿಗರೇ ಈ ಕೃತ್ಯ ಮಾಡಿದ್ದಾರೆಂದಲ್ಲವೇ? ಸಂಜೀವ ಮಠಂದೂರು ಅವರನ್ನು ಶಾಸಕ ಅಭ್ಯರ್ಥಿಯಾಗಿ ಘೋಷಣೆ ಮಾಡಬಾರದೆಂದು ಹೀಗೆ ಮಾಡಲಾಗಿದೆಯೇ? ಅದಕ್ಕಾಗಿ ಬಿಜೆಪಿ ಮೌನವಾಗಿದೆಯೇ? ಈ ಹಿಂದೆ ಕೆಡಿಪಿ ಸದಸ್ಯರೋರ್ವರ ಸಂಭಾಷಣೆ ವೈರಲ್ ಆಗಿತ್ತು. ಆಗಲೂ ಬಿಜೆಪಿ ಮೌನ ವಹಿಸಿತ್ತು. ಅಂದರೆ ಇದರ ಅರ್ಥವೇನು? ಈ ಹಿಂದೆ ಶಾಸಕ ಸಂಜೀವ ಮಠಂದೂರು ಅವರು ಹೇಳಿರುವಂತೆ, ರಾಜಕೀಯ ಶತ್ರುಗಳಿದ್ದಾರೆಂದು. ಈ ಶತ್ರುಗಳು ಬಿಜೆಪಿಯೊಳಗಿದ್ದಾರೆಂದಲ್ಲವೇ? ಅವರು ಕಾಂಗ್ರೆಸ್ ಕಡೆ ಕೈ ತೋರಿಸುತ್ತಿಲ್ಲ ಎನ್ನುವುದನ್ನು ಅರ್ಥವಿಸಿಕೊಳ್ಳಬೇಕು ಎಂದು ತಿಳಿಸಿದರು.
ಹಾಗೇ ಫೊಟೋ ಬಿಡುವುದಿದ್ದರೆ ಘಟನೆ ನಡೆದ ತಕ್ಷಣವೇ ಬಿಡಬಹುದಿತ್ತು ಅಥವಾ ಚುನಾವಣೆ ನಂತರ ಬಿಡಬಹುದಿತ್ತು. ಆದರೆ ಅದಾವುದನ್ನೂ ಮಾಡದೇ, ಚುನಾವಣೆ ಸಂದರ್ಭವೇ ಬಿಟ್ಟಿದ್ದಾರೆ ಎಂದರೆ, ಅದು ದ್ರೋಹಕ್ಕೆ ಸಮಾನ. ಓರ್ವ ಮಹಿಳೆಯರನ್ನು ಅಸ್ತ್ರವಾಗಿಟ್ಟುಕೊಂಡು, ಅಗೌರವದಿಂದ ವರ್ತಿಸಿರುವುದು ಸರಿಯಲ್ಲ. ಇದರ ಬಗ್ಗೆ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಚುನಾವಣೆಯ ಸಂದರ್ಭವಾದ್ದರಿಂದ ಪೊಲೀಸರು ಸ್ವತಂತ್ರರಾಗಿದ್ದಾರೆ. ಯಾವುದೇ ಒತ್ತಡಗಳಿಗೆ ಬಾಗಬೇಕೆಂದಿಲ್ಲ. ಸತ್ಯವನ್ನು ಹೊರತೆಗೆಯುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.
ಎಸ್.ಟಿ. ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಜಯಂತಿ ಬಲ್ನಾಡು, ಮಹಮ್ಮದ್ ರಿಯಾಜ್ ಉಪಸ್ಥಿತರಿದ್ದರು.