ದೆಹಲಿ : ಭಾರತ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲದ ಪ್ರಮಾಣ ಹೊಸ ದಾಖಲೆ ನಿರ್ಮಿಸಿದೆ. ಇರಾಕ್ ನಿಂದ ಆಮದು ಮಾಡಿಕೊಳ್ಳುತ್ತಿದ್ದಕ್ಕಿಂತಲೂ ದುಪ್ಪಟ್ಟು ಪ್ರಮಾಣದಲ್ಲಿ ನಾವು ಈಗ ರಷ್ಯಾದಿಂದ ತೈಲವನ್ನು ಖರೀದಿಸಿದ್ದೇವೆ. ಬೆಳವಣಿಗೆ ನಿಧಾನಗತಿಯಲ್ಲಿರುವುದರಿಂದ ತೈಲ ಆಮದಿನಲ್ಲಿ ಯಾವುದೇ ಬದಲಾವಣೆಯೂ ಕಂಡುಬಂದಿಲ್ಲ.
ರಷ್ಯಾ ಕಚ್ಚಾ ತೈಲ ಪೂರೈಕೆ ಮಾಡುತ್ತಿರುವ ಏಕೈಕ ದೊಡ್ಡ ರಾಷ್ಟ್ರವಾಗಿದ್ದು, ಭಾರತ ಆಮದು ಮಾಡಿಕೊಳ್ಳುತ್ತಿರುವ ಒಟ್ಟಾರೆ ತೈಲದ ಪೈಕಿ ಮೂರನೇ ಒಂದರಷ್ಟನ್ನು ಪೂರೈಕೆ ಮಾಡುತ್ತಿರುವ ಮೂಲಕ ರಷ್ಯಾ ಸತತ 6 ನೇ ತಿಂಗಳು ಈ ಸ್ಥಾನದಲ್ಲಿ ಮುಂದುವರೆದಿದೆ ಎಂದು ಎನರ್ಜಿ ಕಾರ್ಗೋ ಟ್ರ್ಯಾಕರ್ ವೋರ್ಟೆಕ್ಸಾ ತಿಳಿಸಿದೆ. ಈ ನಡುವೆ ರಿಫೈನರ್‌ಗಳು ಹೇರಳವಾದ ರಷ್ಯಾದ ಸರಕುಗಳನ್ನು ಇತರ ಶ್ರೇಣಿಗಳಿಗೆ ರಿಯಾಯಿತಿಯಲ್ಲಿ ಕ್ಷಿಪ್ರವಾಗಿ ಖರೀದಿಸುವುದನ್ನು ಮುಂದುವರಿಸುತ್ತಿದ್ದಾರೆ.
2022 ರ ಫೆಬ್ರವರಿಯಲ್ಲಿ ಅಂದರೆ ಯುಕ್ರೇನ್-ರಷ್ಯಾದ ನಡುವಿನ ಯುದ್ಧ ಪ್ರಾರಂಭಕ್ಕೂ ಮುನ್ನ ಶೇ.1 ರಷ್ಟಿದ್ದ ರಷ್ಯಾದಿಂದ ಭಾರತ ಆಮದು ಮಾಡಿಕೊಳ್ಳುತ್ತಿದ್ದ ತೈಲ ಪ್ರಮಾಣ ಈಗ ಮಾರ್ಚ್ ತಿಂಗಳಲ್ಲಿ ದಿನವೊಂದಕ್ಕೆ 1.64 ಮಿಲಿಯನ್ ಬ್ಯಾರಲ್ ಗೆ ಏರಿಕೆಯಾಗಿದ್ದು, ಶೇ.34 ರಷ್ಟು ಪಾಲುದಾರಿಕೆ ಹೊಂದಿದೆ. 2017-18 ರಿಂದ ಭಾರತಕ್ಕೆ ತೈಲ ಪೂರೈಕೆ ಮಾಡುತ್ತಿರುವುದರಲ್ಲಿ ಮುಂಚೂಣಿ ರಾಷ್ಟ್ರವಾಗಿದ್ದ ಇರಾಕ್ ನ್ನು ರಷ್ಯಾ ಈಗ ಹಿಂದಿಕ್ಕಿದ್ದು, ಮಾರ್ಚ್ ನಲ್ಲಿ ದಿನವೊಂದಕ್ಕೆ 0.82 ಮಿಲಿಯನ್ ಬ್ಯಾರಲ್ ಗಳ ಎರಡರಷ್ಟು ಈಗ ಖರೀದಿ ಮಾಡಲಾಗುತ್ತಿದೆ. ಚೀನಾ, ಅಮೇರಿಕಾದ ಬಳಿಕ ಭಾರತ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಮೂರನೇ ಅತಿ ದೊಡ್ಡ ರಾಷ್ಟ್ರವಾಗಿದೆ.