ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಸೋಮವಾರ ಬೆಳಿಗ್ಗೆ ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು.
ಬೆಳಿಗ್ಗೆ ಗಂಟೆ 9.25 ರ ನಂತರದ ವೃಷಭ ಲಗ್ನ ಸುಮುಹೂರ್ತದಲ್ಲಿ ಭಕ್ತಾದಿಗಳ ಜಯ ಘೋಷದೊಂದಿಗೆ ಧ್ವಜಾರೋಹಣ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್.ಭಟ್ ವಿವಿಧ ವೈದಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಸೋಮವಾರ ಮುಂಜಾನೆಯಿಂದಲೇ ಸೀಮೆಯ ಭಕ್ತಾದಿಗಳು ಫಲಪುಷ್ಪ, ಸೀಯಾಳ, ವಿವಿಧ ಹಸಿರುವಾಣಿಯನ್ನು ಶ್ರೀ ದೇವಸ್ಥಾನಕ್ಕೆ ಒತ್ತಾಯಿಸಿದರು. ಬಳಿಕ ಧ್ವಜಸ್ತಂಭದ ಕಟ್ಟೆಗೆ ಹಸಿರುವಾಣಿಯನ್ನು ಕಟ್ಟಿ ಶೃಂಗರಿಸಲಾಯಿತು.
ಮಧ್ಯಾಹ್ನ ಮಹಾಪೂಜೆ ಬಳಿಕ ಕುರಿಯ ಏಳ್ನಾಡುಗುತ್ತುರವರಿಂದ ಅನ್ನಸಂತರ್ಪಣೆ ಜರಗಿತು.
ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ ಗೌಡ ಎನ್. , ಶೇಖರ್ ನಾರಾವಿ, ರಾಮಚಂದ್ರ ಕಾಮತ್, ಡಾ.ಸುಧಾ ಎಸ್.ರಾವ್, ವೀಣಾ ಬಿ.ಕೆ., ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ದೇವಸ್ಥಾನದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಸಾಜ ರಾಧಾಕೃಷ್ಣ ಆಳ್ವ,, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅರ್ಚಕ ವೃಂದ, ಭಕ್ತಾದಿಗಳು ಪಾಲ್ಗೊಂಡಿದ್ದರು.
ಶ್ರೀ ವರುಣ ದೇವರಿಗೆ ಪೂಜೆ :
ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಂಬಂತೆ ಶ್ರೀ ದೇವಸ್ಥಾನದ ಪುಷ್ಕರಣಿಯಲ್ಲಿ ನೂತನವಾಗಿ ನಿರ್ಮಿಸಿದ ಶಿಲಾಮಯ ಕಟ್ಟೆಯಲ್ಲಿ ಬೆಳಿಗ್ಗೆ 8 ರಿಂದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ವರುಣ ದೇವರಿಗೆ ವರುಣ ಪೂಜೆ ನಡೆಯಿತು. ಶ್ರೀ ವರುಣ ದೇವರ ಪೂಜೆಯೊಂದಿಗೆ ಜಾತ್ರೋತ್ಸವ ಆರಂಭಗೊಂಡಿದ್ದ ಇದೇ ಪ್ರಥಮ ಬಾರಿಗೆ. ಬಳಿಕ ಸಾರ್ವಜನಿಕರಿಗೆ ಸೇವಾ ರೂಪದಲ್ಲಿ ಶ್ರೀ ವರುಣ ದೇವರಿಗೆ ಪೂಜೆ ನೆರವೇರಿತು.