ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ|
ಫಲ ಮಾಗುವಂದು ತುತ್ತೂರಿ ದನಿಯಿಲ್ಲ||
ಸೂರ್ಯಚಂದ್ರರದೊಂದು ಸದ್ದಿಲ್ಲ|
ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ||
ಭೂಮಿಯಲ್ಲಿ ಹಾಕಿದ ಬೀಜ ಮೊಳಕೆಯೊಡೆದು ಹೊರಬರುವಾಗ ತಮಟೆಯನ್ನು ಬಾರಿಸಿ ಶಬ್ದ ಮಾಡುವುದಿಲ್ಲ. ಗಿಡದಲ್ಲಿರುವ ಕಾಯಿ ಹಣ್ಣಾಗುವಾಗ ವಾದ್ಯ ಘೋಷ ಮಾಡುವುದಿಲ್ಲ. ಜಗತ್ತಿಗೆ ಬೆಳಕನ್ನು ನೀಡುವ ಸೂರ್ಯಚಂದ್ರರು ಯಾವುದೇ ರೀತಿಯಲ್ಲಿ ಹೇಳಿಕೊಳ್ಳುವುದಿಲ್ಲ. ಸದ್ದುಗದ್ದಲವಿಲ್ಲದೆ ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುವುದನ್ನು ನೋಡಿ ಮಾನವನು ಕೂಡ ತುಟಿ ತೆರೆಯದೆ ಮೌನವಾಗಿ ಕಾರ್ಯನಿರ್ವಹಿಸುವುದನ್ನು ಕಲಿಯಬೇಕೆಂದು ಮಾನ್ಯ ಡಿವಿಜಿಯವರು ಈಮುಕ್ತಕದಲ್ಲಿ ಹೇಳಿದ್ದಾರೆ.
ಭೂಮಿಗೆ ಬಿದ್ದ ಬೀಜ ಮೊಳಕೆಯೊಡೆಯದೆ ಇದ್ದರೆ ಜೀವಿಗಳಿಗೆ ಜೀವನವಿಲ್ಲ. ಆದರೆ ಅದೇ ಬೀಜ ಇಳೆಯಿಂದ ಮೊಳಕೆಯೊಡೆದು ಹೊರ ಬರುವಾಗ ಯಾವುದೇ ರೀತಿಯಲ್ಲಿ ಶಬ್ದ ಮಾಡದೆ ಮೌನವಾಗಿ ತನ್ನ ಕಾರ್ಯವನ್ನು ಮಾಡುತ್ತದೆ. ಒಂದು ಹೂವು ಕಾಯಾಗಿ ಹಣ್ಣಾಗದಿದ್ದರೆ! ಸೂರ್ಯ ಚಂದ್ರರು ಬೆಳಗದೇ ಇದ್ದರೆ! ಪ್ರಪಂಚ ನಡೆಯುವುದಿಲ್ಲ ಆದರೆ ಅವುಗಳು ನಿಶ್ಯಬ್ದವಾಗಿ ತಮ್ಮ ಕಾರ್ಯಗಳನ್ನು ಚಾಚೂ ತಪ್ಪದೆ ಮೌನವಾಗಿ ನಿರ್ವಹಿಸಿಕೊಂಡು ಬರುವುದನ್ನು ನೋಡಿಯಾದರೂ ಬದುಕಿನ ನಿಜ ಮೌಲ್ಯವನ್ನು ಅರಿಯಬೇಕು. ಏನೂ ಮಾಡದೆಯೂ ವ್ಯರ್ಥ ಗದ್ದಲ ಮಾಡಿ ಇತರರ ಗಮನವನ್ನು ಸೆಳೆಯುವ ಪ್ರಚಾರದ ಪ್ರಯತ್ನ ಮಾಡುವುದನ್ನು ಬಿಟ್ಟು ಮೌನವಾಗಿ ಸಾಧ್ಯವಾದಷ್ಟು ಸಮಾಜಕ್ಕೆ ನೆರವಾಗುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಅದನ್ನೆ ಡಿವಿಜಿ ‘ಹೊಲಿ ನಿನ್ನ ತುಟಿಗಳನ್ನು’ ಅಂತ ಹೇಳಿದ್ದು.
ವನಸುಮದೊಳೆನ್ನ ಜೀವನವು ವಿಕಸಿಸುವಂತೆ
ಮನವನನುಗೊಳಿಸೋ, ಗುರುವೆ ಹೇ ದೇವ!
ಜಗಕೆ ಸಂತಸವೀವ ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ|
ಕಾನನದಿ ಮಲ್ಲಿಗೆಯು ಮೌನದಿಂ
ಬಿರಿದು ನಿಜ ಸೌರಭವ ಸೂಸಿ ನಲವಿಂ ತಾನೆಲೆಯ
ಪಿಂತಿರ್ದು ದೀನತೆಯ ತೋರಿ, ಅಭಿಮಾನವನು ತೊರೆದು ಕೃತಕೃತ್ಯತೆಯಿನೆಸೆವಂತೆ
ಉಪಕಾರಿ ನಾನು ಎನ್ನುಪಕೃತಿಯು ಜಗಕೆಂಬ ವಿಪರೀತ ಮತಿಯನಳಿದು
ಎಂಬ ಡಿವಿಜಿ ಯವರ ವನಸುಮ ಕವಿತೆಯು ನಿರಾಡಂಬರ ಬದುಕನ್ನು ಪ್ರತಿಬಿಂಬಿಸುತ್ತದೆ. ಕಾಡಿನಲ್ಲಿ ಅರಳುವ ಒಂದು ಹೂವನ್ನು ಮಾದರಿಯಾಗಿಟ್ಟುಕೊಂಡು ಹೊಗಳಿಕೆಗಾಗಿ ಬಾಯಿ ಬಿಡದೆ ಮೌನವಾಗಿ ಸಂತೋಷದಿಂದ ಸುಗಂಧವನ್ನು ಬೀರುತ್ತಾ ಕೃತಾರ್ಥತೆಯನ್ನು ಪಡೆಯುವ ರೀತಿಯಲ್ಲಿ ನಮ್ಮ ಮನಸ್ಸನ್ನು ಸಿದ್ದಗೊಳಿಸಿದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
✒️ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕಸಾಪ ಕಾರ್ಕಳ ಘಟಕ