ಇದು ನಡೆಯಲಿಲ್ಲವದು ನಿಂತುಹೋಯಿತೆನುತ್ತ|
ಎದೆಯುಬ್ಬೆಗವನೊಂದಿ ಕುದಿಯುತಿಹುದೇಕೋ?|
ಅಧಿಕಾರ ಪಟ್ಡವನು ನಿನಗಾರು ಕಟ್ಟಿಹರು|
ವಿಧಿಯ ಮೇಸ್ತ್ರಿಯೆ ನೀನು–ಮಂಕುತಿಮ್ಮ||
ಜೀವನದಲ್ಲಿ ನಾವು ಎಣಿಸಿದ ಹಾಗೆ ನಡೆಯದಿದ್ದಾಗ ಅದೇಕೆ ನಡೆಯಲಿಲ್ಲ? ಅದೇಕೆ ನಿಂತು ಹೋಯಿತು ಎಂದು ಮನದಲ್ಲಿಯೇ ಕೋಪದಿಂದ ಕುದಿಯುತ್ತಿರುವುದೇಕೆ? ಯಾವುದು ನಡೆಯಬೇಕು ಮತ್ತು ಯಾವುದು ನಡೆಯಬಾರದು ಎನ್ನುವುದನ್ನು ನಿರ್ಧರಿಸುವ ಅಧಿಕಾರವನ್ನು ನಿನಗೆ ಯಾರು ಕೊಟ್ಟಿದ್ದಾರೆ? ವಿಧಿಯನ್ನು ನಿರ್ವಹಿಸುವ ನಿರ್ವಾಹಕನೋ ನೀನು? ಎಂದು ಮಾನ್ಯ ಡಿವಿಜಿಯವರು ಈ ಮುಕ್ತದಲ್ಲಿ ಪ್ರಶ್ನಿಸಿದ್ದಾರೆ.
ಜಗತ್ತಿನಲ್ಲಿ ಯಾವುದು ನಾವು ಎಣಿಸಿದ ಹಾಗೆ ನಡೆಯುವುದಿಲ್ಲ. ವಿಧಿಯ ನಿಯಮದಂತೆ ಎಲ್ಲವೂ ಸಾಗುವುದು. ಹೀಗೇಕೆ ಎಂದು ಚಿಂತಿಸುವುದು ಅಥವಾ ಉದ್ವೇಗಗೊಳ್ಳುವುದು ಸರಿಯಲ್ಲ. ಹೀಗೆಯೇ ಅಗಬೇಕು ಎನ್ನಲು ನಾವು ಯಾರು? ಇಂತಹ ಅಧಿಕಾರವನ್ನು ನಮಗೆ ಯಾರು ಕೊಟ್ಟಿಲ್ಲ. ಆಟವೆಲ್ಲ ಅವನದ್ದು; ಪಾತ್ರ ಮಾತ್ರ ನಮ್ಮದು. ಅವನು ಹೇಗೆ ನಡೆಸುತ್ತಾನೋ ಹಾಗೆ ನಡೆಯುವುದು ನಮ್ಮ ಧರ್ಮ. ಜಗತ್ತಿನ ಆಗುಹೋಗುಗಳ ಬಗ್ಗೆ ಅತಿಯಾಗಿ ಸ್ಪಂದಿಸುತ್ತಾ ಭಾವೋದ್ರೇಕಕ್ಕೆ ಒಳಗಾಗುವ ಅಗತ್ಯವಿಲ್ಲ. ಎಲ್ಲವನ್ನೂ ಸಮಾಧಾನದಿಂದ ಸ್ವೀಕರಿಸಿದಾಗಲೇ ಜೀವನ ಸುಗಮ ಹಾಗೂ ಸುಖಕರವಾಗುವುದು.
ಮಾಡುವುದ ನೀ ಮಾಡು; ಉಳಿದಿದ್ದ ಬಿಟ್ಟುಬಿಡು|
ನನ್ನಿಂದ ಲೋಕವೆಂದುಬ್ಬದಿರು ಮರೆತು||
ಪುರುಷ ಸಾಹಸ ಹಾಗೆ, ದೈವಹಿತ ಮಿಕ್ಕದ್ದು|
ಮಿತ ನಮದು ಸಾಮರ್ಥ್ಯ- ಮುದ್ದುರಾಮ|
ಎಂಬ ಕೆ. ಶಿವಪ್ಪನವರ ನುಡಿಯಂತೆ ನಮ್ಮ ಕರ್ತವ್ಯವೇನು ಎನ್ನುವುದನ್ನರಿತು ನಿಷ್ಠೆಯಿಂದ ಮಾಡಬೇಕು. ಉಳಿದಿರುವುದನ್ನು ಸೃಷ್ಟಿಯನ್ನು ಮುನ್ನಡೆಸುತ್ತಿರುವ ಆ ಪರಮಾತ್ಮನಿಗೆ ಬಿಡಬೇಕು. ನನ್ನಿಂದ ಈ ಜಗತ್ತು ನಡೆಯುತ್ತಿದೆ ಎನ್ನುವ ಅಹಂಕಾರ ಪಡದೆ; ನಮ್ಮ ಸಾಮರ್ಥ್ಯದ ಮಿತಿಯನ್ನರಿತು ನಡೆದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು ಕಸಾಪ ಕಾರ್ಕಳ ತಾಲೂಕ