ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿದ್ದಕ್ಕಾಗಿ ಸೂರತ್‌ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ನಾಲಿಗೆಯನ್ನು ಕತ್ತರಿಸುವುದಾಗಿ ದಿಂಡುಗಲ್‌ನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಣಿಕಂದನ್ ಬೆದರಿಕೆ ಹಾಕಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
2019ರ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯನ್ನು ದೋಷಿ ಎಂದು ತೀರ್ಪು ನೀಡಿದ ನ್ಯಾಯಾಧೀಶರ ನಾಲಿಗೆಯನ್ನು ಕತ್ತರಿಸುವುದಾಗಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಕಾಂಗ್ರೆಸ್ ಪಕ್ಷದವರು ಹತಾಶರಾಗಿದ್ದಾರೆ. ಭಾರತದ ತುರ್ತು ಪರಿಸ್ಥಿತಿಯ ಅವಧಿಗೂ ಮುನ್ನವೇ ಕಾಂಗ್ರೆಸ್ ಪಕ್ಷವು ನ್ಯಾಯಾಂಗದ ಮೇಲೆ ದಾಳಿ ನಡೆಸಿದೆ. ಈಗ ಹತಾಶೆಯಿಂದ ದಾಳಿಯನ್ನು ತೀವ್ರಗೊಳಿಸಿದೆ ಎಂದಿದ್ದಾರೆ. ಕಾಂಗ್ರೆಸ್ ನ್ಯಾಯಾಂಗಕ್ಕೆ ಬೆದರಿಕೆ ಹಾಕುತ್ತಿರುವುದು ಇದೇ ಮೊದಲ ಬಾರಿ ಏನೂ ಅಲ್ಲ. ತುರ್ತು ಪರಿಸ್ಥಿತಿಗೂ ಮುನ್ನವೇ ಕಾಂಗ್ರೆಸ್ನವರು ನ್ಯಾಯಾಂಗದ ಮೇಲೆ ದಾಳಿ ನಡೆಸಿದ್ದರು. ಅವರು ಹತಾಶೆಯಿಂದ ಈಗ ಅದನ್ನು ಮಾಡುತ್ತಿದ್ದಾರೆ. ನಮಗೆ ಸಂವಿಧಾನದಲ್ಲಿ ನಂಬಿಕೆ ಇದೆ ಎಂದು ಸುದ್ದಿಗಾರ ಜತೆ ಮಾತನಾಡಿದ ರಿಜಿಜು ತಿಳಿಸಿದ್ದಾರೆ.
ನಾವು ಅಧಿಕಾರಕ್ಕೆ ಬಂದರೆ ನಮ್ಮ ನಾಯಕ ರಾಹುಲ್ ಗಾಂಧಿಯನ್ನು ಜೈಲಿಗೆ ಕಳುಹಿಸುವ ತೀರ್ಪು ನೀಡಿದ ನ್ಯಾಯಾಧೀಶರ ನಾಲಿಗೆಯನ್ನು ಕತ್ತರಿಸುತ್ತೇವೆ ಎಂದು ಗುರುವಾರ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮಣಿಕಂದನ್ ಹೇಳಿರುವುದು ಕೇಳಿಬಂದಿದೆ. ಮಣಿಕಂದನ್ ವಿರುದ್ಧ ಭಾರತ ದಂಡ ಸಂಹಿತೆಯ ಸೆಕ್ಷನ್ 153 ಬಿ ಸೇರಿದಂತೆ ಮೂರು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದಿಂಡುಗಲ್ ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಸ್ಥಳೀಯ ನಾಯಕನ ಹೇಳಿಕೆಗೆ ಕಾಂಗ್ರೆಸ್ ಟೀಕೆಗೆ ಗುರಿಯಾಗಿದೆ, ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಈ ವಿಷಯದಲ್ಲಿ ನ್ಯಾಯಾಲಯಗಳು ಸ್ವಯಂಪ್ರೇರಿತವಾಗಿ ಗುರುತಿಸಿ ರಾಹುಲ್ ಗಾಂಧಿಯನ್ನು ಹೊಣೆಗಾರರನ್ನಾಗಿ ಮಾಡುತ್ತವೆಯೇ ಎಂದು ಕೇಳಿದ್ದಾರೆ.
ಸೂರತ್ ನ್ಯಾಯಾಲಯವು ಮೋದಿ ಉಪನಾಮ ವಿಚಾರದಲ್ಲಿ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಯನ್ನು ತಪ್ಪಿತಸ್ಥರೆಂದು ಪರಿಗಣಿಸಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ತದನಂತರ ನ್ಯಾಯಾಲಯವು ಗಾಂಧಿಗೆ ಜಾಮೀನು ನೀಡಿ ಅವರ ಶಿಕ್ಷೆಯನ್ನು 30 ದಿನಗಳವರೆಗೆ ಅಮಾನತುಗೊಳಿಸಿತು.