ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ’ಬಾಲಸ್ತುತಿ – 2023 ಉದ್ಘಾಟನೆ

ಪುತ್ತೂರು: ದೇಶ ತನ್ನ ಅಸ್ಮಿತೆಯನ್ನು ಉಳಿಸಿಕೊಂಡಿರುವುದು ಇಲ್ಲಿನ ಸಂಸ್ಕೃತಿ ಸಂಸ್ಕಾರಗಳಿಂದ. ಆದರೆ ಅಂತಹ ಸಂಸ್ಕೃತಿಯಿಂದ ನಾವು ನಿಧಾನವಾಗಿ ದೂರ ಸರಿಯುತ್ತಿರುವುದು ಆತಂಕಕಾರಿ ವಿಚಾರ. ಮನೆಯಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕಿದೆ. ಹಿಂದೂ ಧಾರ್ಮಿಕ ಶ್ಲೋಕಗಳನ್ನು ಮಕ್ಕಳು ನಿತ್ಯವೂ ಉಚ್ಚರಿಸುವಂತೆ ಮಾಡಬೇಕಿದೆ ಎಂದು ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತದ ಮಾತೃ ಸುರಕ್ಷಾ ಪ್ರಮುಖ್ ಬಡೆಕ್ಕಿಲ ಗಣರಾಜ ಭಟ್ ಹೇಳಿದರು.

ಅವರು ನಗರದ ಬಪ್ಪಳಿಗೆಯಲ್ಲಿನ ಅಂಬಿಕಾ ಸಿಬಿಎಸ ಇ ವಿದ್ಯಾಲಯದ ವತಿಯಿಂದ ಆಯೋಜಿಸಲಾದ ಹಿಂದೂ ಧಾರ್ಮಿಕ ಶ್ಲೋಕಗಳ ಕಂಠಪಾಠ ಸ್ಪರ್ಧೆ – ಬಾಲಸ್ತುತಿ-2023ನ್ನು ಉದ್ಘಾಟಿಸಿ ಮಾತನಾಡಿದರು.

ದೇಶವಿಂದು ನಾನು ಎಂಬ ಅಹಂಕಾರದಿಂದ ವಿಭಜಿಸಲ್ಪಡುತ್ತಿದೆ. ಹಾಗಾಗಿ ನಾವು ಎಂಬ ಮನೋಭಾವ ಬೆಳೆಯಬೇಕು. ಪರಸ್ಪರ ಒಗ್ಗೂಡುವಿಕೆಯಿಂದ ದೇಶವನ್ನು ಉನ್ನತಿಯೆಡೆಗೆ ಒಯ್ಯುವುದಕ್ಕೆ ಸಾಧ್ಯ. ಮಕ್ಕಳ ಮನಸ್ಸಿನಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವುದರಿಂದ ಸಾಮಾಜಿಕ ಒಗ್ಗೂಡುವಿಕೆ ಸಾಧ್ಯವಾಗುತ್ತದೆ. ಪಠಿಸುವ ಶ್ಲೋಕಗಳ ಅರ್ಥವನ್ನೂ ಮಕ್ಕಳಿಗೆ ತಿಳಿಸಿಕೊಡುವ ಕೆಲಸಗಳಾಗಬೇಕು. ಆಗ ಶ್ಲೋಕಗಳ ಪಠಣ ಹೆಚ್ಚು ಪರಿಣಾಮಕಾರಿ ಎನಿಸುತ್ತದೆ ಎಂದು ಅಭಿಪ್ರಾಯಪಟ್ಟರು.







































 
 

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೂರ್ವದ ಸಿಂಗಾಪುರದಿಂದ ಪಶ್ಚಿಮದ ಸೌದಿ ಅರೇಬಿಯಾದವರೆಗೂ ಭಾರತ ವಿಸ್ತರಿಸಿತ್ತು ಎಂಬುದು ಅಧ್ಯಯನದಿಂದ ಹಾಗೂ ಐತಿಹಾಸಿಕ ಕುರುಹುಗಳಿಂದ ಅರಿವಾಗುತ್ತದೆ. ಆದರೆ ನಮ್ಮ ಧರ್ಮದಿಂದ ನಾವು ವಿಮುಖರಾದದ್ದರಿಂದ ನಮ್ಮ ಪ್ರದೇಶಗಳನ್ನು ಕಳೆದುಕೊಳ್ಳುವಂತಾಗಿದೆ. ಆದ್ದರಿಂದ ಮತ್ತೆ ಧರ್ಮಜಾಗೃತಿಯ ಕೆಲಸ ಆಗಬೇಕಿದೆ. ಎಳೆಯ ಮಕ್ಕಳಿಂದಲೇ ಅಂತಹ ಕಾರ್ಯ ನಡೆದಾಗ ಸಮಾಜದೆಲ್ಲೆಡೆ ಅದು ಪಸರಿಸುವುದಕ್ಕೆ ಸಾಧ್ಯ ಎಂದರು.

ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದರು. ಐದನೇ ತರಗತಿ ವಿದ್ಯಾರ್ಥಿ ಸನ್ಮಯ್ ಹಾಗೂ ಆರನೇ ತರಗತಿ ವಿದ್ಯಾರ್ಥಿ ಸಾತ್ವಿಕ್ ಧಾರ್ಮಿಕ ಶ್ಲೋಕ ಪಠಿಸುವ ಮೂಲಕ ಪ್ರಾರ್ಥಿಸಿದರು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಭಟ್ ಸ್ವಾಗತಿಸಿ, ಶಿಕ್ಷಕಿ ಮಲ್ಲಿಕಾ ವಂದಿಸಿದರು. ಶಿಕ್ಷಕಿಯರಾದ ಪ್ರಿಯಾಶ್ರೀ ಕೆ.ಎಸ್ ಹಾಗೂ ದಿವ್ಯಾ ಕಾರ್ಯಕ್ರಮ ನಿರ್ವಹಿಸಿದರು.

ಬಾಲಸ್ತುತಿ ಸ್ಪರ್ಧೆ 3, 4 ಹಾಗೂ 5ನೇ ವಯಸ್ಸಿನ ಮಕ್ಕಳ ವಿಭಾಗಗಳಲ್ಲಿ ನಡೆಯಿತು. ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ, ಅಂಬಿಕಾ ಮಹಾವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ, ಸಂಸ್ಕೃತ ವಿಭಾಗದ ಉಪನ್ಯಾಸಕಿ ಶಶಿಕಲಾ ವರ್ಕಾಡಿ ಹಾಗೂ ಅಂಬಿಕಾ ವಿದ್ಯಾಲಯದ ಸಂಸ್ಕೃತ ಶಿಕ್ಷಕಿ ಸೌಂದರ್ಯಲಕ್ಷ್ಮೀ ತೀರ್ಪುಗಾರರಾಗಿ ಸಹಕರಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top