ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಜಲಾಭಿಷೇಕ
ಅಯೋಧ್ಯೆ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಏ.23 ರಂದು 155 ದೇಶಗಳ ನದಿಗಳ ನೀರಿನಿಂದ ಅಯೋಧ್ಯೆಯಲ್ಲಿ ರಾಮಲಲ್ಲಾ ದೇವರಿಗೆ ‘ಜಲಾಭಿಷೇಕ’ ನಡೆಸಲಿದ್ದಾರೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ದಿಲ್ಲಿಯ ರಾಮ ಭಕ್ತ ವಿಜಯ್ ಜಾಲಿ ನೇತೃತ್ವದ ತಂಡ 155 ದೇಶಗಳ ನದಿಗಳ ನೀರನ್ನು ಆದಿತ್ಯನಾಥ್‌ಗೆ ಹಸ್ತಾಂತರಿಸಲಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, 2024ರ ಜನವರಿಯಲ್ಲಿ ಮಂದಿರದ ಗರ್ಭಗುಡಿ ಲೋಕಾರ್ಪಣೆಗೊಳ್ಳಲಿದೆ. ಏ.23 ರಂದು ಮಣಿರಾಮ್ ದಾಸ್ ಚಾವ್ನಿ ಸಭಾಂಗಣದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಜಲ ಕಲಶದ ಪೂಜೆಯನ್ನು ನೆರವೇರಿಸಲಿದ್ದಾರೆ. ರಾವಿ ನದಿಯ ನೀರನ್ನು ಮೊದಲು ಹಿಂದೂಗಳು ಪಾಕಿಸ್ಥಾನದಿಂದ ದುಬೈಗೆ ಕಳುಹಿಸಿದರು, ಅಲ್ಲಿಂದ ದಿಲ್ಲಿಗೆ ತರಲಾಯಿತು ಎಂದು ರಾಯ್ ಹೇಳಿದರು.