ಸಿಎನ್‌ಜಿ ವಾಹನ ಬಳಸುವವರಿಗೆ ಅನುಕೂಲ
ದೆಹಲಿ : ನೈಸರ್ಗಿಕ ಅನಿಲದ ದರ ನಿಗದಿಗಪಡಿಸುವ ಹೊಸ ಮಾನದಂಡ ಜಾರಿ ಮಾಡಲು ಕೇಂದ್ರ ಒಪ್ಪಿಗೆ ನೀಡಿದೆ. ಈ ಮಾನದಂಡ ಜಾರಿಗೆ ಬಂದ ಬಳಿಕ ಗೃಹ ಬಳಕೆಯ ಪಿಎನ್‌ಜಿ ಮತ್ತು ವಾಹನಗಳಿಗೆ ಬಳಸುವ ಸಿಎನ್‌ಜಿ ತೈಲದ ದರ ಶೇ. 10ರ ವರೆಗೆ ಕಡಿಮೆಯಾಗಲಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ಹಲವು ಮಹತ್ವದ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುವ ಬೆಲೆ ಏರಿಳಿತಗಳಿಂದ ಭಾರತದ ಗ್ರಾಹಕರನ್ನು ರಕ್ಷಿಸಲು ಇದು ನೆರವಾಗಲಿದೆ. ಹೊಸ ಮಾರ್ಗದರ್ಶಿ ಸೂತ್ರಗಳಿಗೆ ಕೇಂದ್ರ ಸಚಿವ ಸಂಪುಟದ ಸಹಮತ ಸಿಕ್ಕಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್‌ದೀಪ್ ಪುರಿ ಹೇಳಿದ್ದಾರೆ.
ಸಿಎನ್‌ಜಿ ಮತ್ತು ಪಿಎನ್‌ಜಿಗೆ ಇಂಡಿಯನ್ ಕ್ರೂಡ್ ಬ್ಯಾಸ್ಕೆಟ್‌ನ (ಭಾರತದ ಕಚ್ಚಾತೈಲ ಆಮದು ದರದ ಸರಾಸರಿ) ಶೇ.10ರಷ್ಟು (ಕಡಿಮೆ) ದರ ನಿಗದಿಪಡಿಸಲಾಗುವುದು. ಈ ದರವನ್ನು ತಿಂಗಳಿಗೆ ಒಮ್ಮೆ ಪರಿಷ್ಕರಿಸಲಾಗುವುದು. ಈ ಮೂಲಕ ದರ ನಿಗದಿ ಪ್ರಕ್ರಿಯೆಯಲ್ಲಿ ಸ್ಥಿರತೆ ಬರಲಿದೆ. ಅದರಜತೆಗೆ ಅನಿಲ ಉತ್ಪಾದಕರಿಗೆ ಬೆಲೆ ಹೊಯ್ದಾಟದಿಂದ ರಕ್ಷಣೆಯೂ ಸಿಗಲಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಭಾರತದಲ್ಲಿ ಉತ್ಪತ್ತಿಯಾಗುವ ನೈಸರ್ಗಿಕ ಅನಿಲ ದರ ನಿಗದಿಪಡಿಸಲು ಹೆನ್ರಿ ಹಬ್, ಅಲ್‌ಬೆನಾ, ನ್ಯಾಷನಲ್ ಬ್ಯಾಲೆನ್ಸಿಂಗ್ ಪಾಯಿಂಟ್ (ಬ್ರಿಟನ್) ಮತ್ತು ರಷ್ಯಾದ ಸರಾಸರಿ ದರಗಳನ್ನು ಪರಿಗಣಿಸಲಾಗುತ್ತಿದೆ. ಆರು ತಿಂಗಳಿಗೆ ಒಮ್ಮೆ ದರ ಪರಿಷ್ಕರಿಸಲಾಗುತ್ತಿದೆ. ಈ ನಾಲ್ಕು ಅನಿಲ ದರಗಳನ್ನು ಲೆಕ್ಕಹಾಕಿ ದೇಸಿ ದರ ನಿಗದಿಪಡಿಸುವ ಪ್ರಕ್ರಿಯೆ ದೊಡ್ಡ ಸರ್ಕಸ್ ಎನಿಸುತ್ತಿತ್ತು. ಈ ವ್ಯವಸ್ಥೆ ಬದಲಿಸಬೇಕೆಂಬ ಒತ್ತಾಯ ಬಹುದಿನಗಳಿಂದ ಕೇಳಿಬರುತ್ತಿತ್ತು.
ಪರಿಷ್ಕೃತ ಮಾರ್ಗಸೂಚಿಗಳ ಅನ್ವಯ ನೈಸರ್ಗಿಕ ಅನಿಲ ದರಗಳನ್ನು ಕಚ್ಚಾತೈಲದ ದರಕ್ಕೆ ಸಂಯೋಜಿಸಲಾಗಿದೆ. ಹಲವು ದೇಶಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಗೆ ಬಂದಿದೆ. ನಮ್ಮ ಬಳಕೆದಾರರಿಗೆ ಇದರಿಂದ ಅನುಕೂಲ, ಜಾಗತಿಕ ವಹಿವಾಟಿಗೂ ಅನುಕೂಲ ಎಂದು ಕೇಂದ್ರ ಸರ್ಕಾರ ಹೇಳಿದೆ.