ಪುತ್ತೂರು: ಮಾನಹಾನಿಕರ ವರದಿ ಪ್ರಕಟಿಸದಂತೆ ಶಾಸಕ ಸಂಜೀವ ಮಠಂದೂರು ಅವರು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದು, ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಮುದ್ರಣ, ವಿದ್ಯುನ್ಮಾನ, ಡಿಜಿಟಲ್ ಮಾಧ್ಯಮಗಳಲ್ಲಿ ಮಾನಹಾನಿಕರ ವರದಿ ಪ್ರಸಾರ ಮಾಡುವುದು, ವೆಬ್ ಹೋಸ್ಟಿಂಗ್ ಮತ್ತು ಹಂಚಿಕೊಳ್ಳುವುದನ್ನು ನಿಷೇಧಿಸಲು ತಡೆಯಾಜ್ಞೆ ನೀಡುವಂತೆ ಶಾಸಕ ಮಠಂದೂರು ಮೊಕದ್ದಮೆ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು, ಜೂನ್ 26ಕ್ಕೆ ವಿಚಾರಣೆ ಮುಂದೂಡಿದೆ.
ತಾನು ವಿಧಾನಸಭಾ ಸದಸ್ಯನಾಗಿದ್ದು, ಕೆಲ ಕಿಡಿಗೇಡಿಗಳು ತನ್ನ ಮಾನಹಾನಿಕರ ಛಾಯಾಚಿತ್ರವನ್ನು ಕೆಲ ಮಹಿಳೆಯರೊಂದಿಗೆ ಎಡಿಟ್ ಮಾಡಿ, ಡಿಜಿಟಲ್ ಮಾಧ್ಯಮದಲ್ಲಿ ಶೇರ್ ಮಾಡಲು ಆರಂಭಿಸಿದ್ದಾರೆ.
ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸಲು ಉತ್ಸುಕವಾಗಿವೆ. ಇದರಿಂದ ತನ್ನ ಪ್ರತಿಷ್ಠೆಗೆ ಉಂಟಾಗುವ ಹಾನಿಯ ಪ್ರಮಾಣವನ್ನು ಯಾವುದೇ ರೀತಿಯಲ್ಲಿ ಸರಿದೂಗಿಸಲು ಸಾಧ್ಯವಿಲ್ಲ. ತನ್ನ ಖ್ಯಾತಿಗೆ ಸರಿಪಡಿಸಲಾಗದ ತೊಂದರೆಗಳನ್ನು ಉಂಟು ಮಾಡುತ್ತದೆ. ಮಾಧ್ಯಮಗಳು ಪರಿಶೀಲಿಸದ ಮಾನಹಾನಿಕರ ಸುದ್ದಿ ಮತ್ತು ಲೇಖನಗಳನ್ನು ಪ್ರಕಟಿಸುತ್ತಿದೆ ಮತ್ತು ವೀಡಿಯೊಗಳನ್ನು ಪ್ರಸಾರ ಮಾಡಲು ಮುಂದಾಗಿವೆ. ಆದ್ದರಿಂದ ಯಾವುದೇ ಸುದ್ದಿಯನ್ನು ಪ್ರಸಾರ ಮಾಡದಂತೆ ಅಥವಾ ಮುದ್ರಿಸದಂತೆ ತಡೆ ನೀಡಬೇಕು ಎಂದು ಸಂಜೀವ ಮಠಂದೂರು ಪರ ನ್ಯಾಯವಾದಿಗಳು ವಾದ ಮಂಡಿಸಿದ್ದರು.