ಪುತ್ತೂರು: ಪ್ರಾಮಾಣಿಕ ಸಿಎ ಇದ್ದರೆ ದೇಶ ಚೆನ್ನಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಸಿಎಗಳನ್ನು ಹುಟ್ಟುಹಾಕುವಲ್ಲಿ ಪ್ರೇರಣಾ ಸಂಸ್ಥೆ ಪ್ರೇರಣಾ ಶಕ್ತಿಯಾಗಿ ಕಾರ್ಯಾಚರಿಸುತ್ತಿದೆ ಎಂದು ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಜೇಶ್ ಕಮ್ಮಾಜೆ ಹೇಳಿದರು.
ಅವರು ಬುಧವಾರ ನಗರದ ಅರುಣಾ ಥಿಯೇಟರ್ ಎದುರಿರುವ ಪ್ರಭು ಬಿಲ್ಡಿಂಗ್‍ನ ಪ್ರಥಮ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಪ್ರೇರಣಾ ಸಂಸ್ಥೆಯಲ್ಲಿ ಸಿಎ ಫೌಂಡೇಶನ್ ತರಬೇತಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸಿಎ ಎಂಬುದು ದೇಶವನ್ನು ಆರ್ಥಿಕವಾಗಿ ಬಲಾಢ್ಯವಾಗುವಂತೆ ಮಾಡುವ ಒಂದು ಪ್ರಕ್ರಿಯೆ. ಭ್ರಷ್ಟಾಚಾರ ಮಾಡುವ ಜತೆಗೆ ಭ್ರಷ್ಟಾಚಾರತೆಯನ್ನು ಹೋಗಲಾಡಿಸುವಲ್ಲಿಯೂ ಪ್ರಾಮಾಣಿಕ ಸಿಎಗಳ ಪಾತ್ರ ಮಹತ್ವದ್ದು. ಇಂತಹಾ ಮೌಲ್ಯಯುತವಾದ, ಶ್ರೇಷ್ಠವಾದ ಸಿಎ ತರಬೇತಿಗೆ ತಮ್ಮನ್ನು ತೊಡಗಿಸಿಕೊಳ್ಳುವುದು ಶ್ಲಾಘನೀಯ ಎಂದ ಅವರು, ಕಠಿಣ ಹಾದಿಗೆ ತಮ್ಮನ್ನು ಒಳಗೊಳಿಸಿದರೆ ಯಶಸ್ಸು ಸಾಧ್ಯ. ಈ ಹಿನ್ನಲೆಯಲ್ಲಿ ತನ್ನ ಗುರಿಯೇ ಸಿಎ ಎಂಬ ಮನೋಭಾವವನ್ನು ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ತರಬೇತುದಾರರಾದ, ಶಿಕ್ಷಕಿ ದೀಪಶ್ರೀ, ಸಂಸ್ಥೆಯ ಮ್ಯಾನೇಜರ್ ದಯಾಮಣಿ ಉಪಸ್ಥಿತರಿದ್ದರು. ಪ್ರೇರಣಾ ಸಂಸ್ಥೆಯ ನಿರ್ದೇಶಕ ನಾಗೇಶ್ ಕೆಡೆಂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಮುರಳೀಧರ ಸ್ವಾಗತಿಸಿ, ವಂದಿಸಿದರು.. ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ಯಶ್ವಿನಿ, ಮೋಕ್ಷಿತಾ, ಉಪಸ್ಥಿತರಿದ್ದರು.